ADVERTISEMENT

ಲೈಂಗಿಕ ದೌರ್ಜನ್ಯ ಆರೋಪ | ಮಲಯಾಳ ನಿರ್ದೇಶಕ ರಂಜಿತ್ ವಿರುದ್ಧ ಪ್ರಕರಣ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಅಕ್ಟೋಬರ್ 2024, 12:38 IST
Last Updated 28 ಅಕ್ಟೋಬರ್ 2024, 12:38 IST
<div class="paragraphs"><p>ನಿರ್ದೇಶಕ ರಂಜಿತ್</p></div>

ನಿರ್ದೇಶಕ ರಂಜಿತ್

   

-ಎಕ್ಸ್‌ (ಟ್ವಿಟರ್) ಚಿತ್ರ

ಬೆಂಗಳೂರು: ರಾಷ್ಟ್ರಪ್ರಶಸ್ತಿ ಪುರಸ್ಕೃತ ಮಲಯಾಳ ಚಿತ್ರರಂಗದ ನಿರ್ಮಾಪಕ, ನಿರ್ದೇಶಕರಾದ ರಂಜಿತ್ ಬಾಲಕೃಷ್ಣನ್ ಅವರು ನನ್ನನ್ನು ಬಲವಂತವಾಗಿ ವಿವಸ್ತ್ರಗೊಳಿಸಿ, ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ 31 ವರ್ಷದ ನಟರೊಬ್ಬರು ದೂರು ದಾಖಲಿಸಿದ್ದಾರೆ.

ADVERTISEMENT

ಈ ಕುರಿತು ಬೆಂಗಳೂರು ಈಶಾನ್ಯ ವಿಭಾಗದ ಬಿಐಎಎಲ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.

ಕೇರಳ ಪೊಲೀಸರು ಪ್ರಕರಣವನ್ನು ಬೆಂಗಳೂರು ಪೊಲೀಸರಿಗೆ ವರ್ಗಾಯಿಸಿದ ನಂತರ ರಂಜಿತ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದ್ದು, ತನಿಖೆ ನಡೆಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.

ಕೋಯಿಕ್ಕೋಡ್ ಮೂಲದ ಕಲಾವಿದ ಎಂದು ಗುರುತಿಸಿಕೊಂಡಿರುವ ದೂರುದಾರರು, ‘2012ರಲ್ಲಿ ‘ಬಾವುಟ್ಟಿಯುಡೆ ನಾಮತ್ತಿಲ್’ ಚಿತ್ರದ ಚಿತ್ರೀಕರಣದ ವೇಳೆ ನಟ ಮಮ್ಮುಟ್ಟಿ ಅವರನ್ನು ಭೇಟಿ ಮಾಡಲು ಕೇರಳದ ಈಸ್ಟ್ ಹಿಲ್‌ಗೆ ಹೋಗಿದ್ದ ಸಂದರ್ಭದಲ್ಲಿ ರಂಜಿತ್ ನನ್ನನ್ನು ಭೇಟಿಯಾಗಿದ್ದರು’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಬಳಿಕ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎ) ಬಳಿಯ ಐಷಾರಾಮಿ ಹೋಟೆಲ್‌ಗೆ ನನ್ನನ್ನು ಕರೆಸಿಕೊಂಡಿದ್ದ ರಂಜಿತ್ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು’ ಎಂದು ದೂರುದಾರ ವಿವರಿಸಿದ್ದಾರೆ.

‘ನನ್ನನ್ನು ಬೆತ್ತಲೆಯಾಗಿ ನಿಲ್ಲುವಂತೆ ರಂಜಿತ್ ಹೇಳಿದ್ದರು. ನಾನು ಅವರು ಹೇಳಿದಂತೆಯೇ ಮಾಡಿದೆ. ಇದೇ ಸಂದರ್ಭದಲ್ಲಿ ರಂಜಿತ್ ಅವರು ನಟಿ ರೇವತಿ ಅವರೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಿದ್ದರು. ರಂಜಿತ್ ಮತ್ತು ರೇವತಿ ನಡುವೆ ಯಾವ ರೀತಿಯ ಸಂಬಂಧವಿದೆ ಎಂದು ನನಗೆ ಗೊತ್ತಿಲ್ಲ. ಆದರೆ, ರಂಜಿತ್ ನನ್ನ ಬೆತ್ತಲೆ ಫೋಟೊಗಳನ್ನು ರೇವತಿ ಅವರಿಗೆ ಕಳುಹಿಸಿದ್ದರು. ಆ ಫೋಟೊಗಳನ್ನು ನೋಡಿ ರೇವತಿ ಇಷ್ಟಪಟ್ಟಿದ್ದಾಳೆ ಎಂದು ರಂಜಿತ್ ಹೇಳಿದ್ದರು ಎಂದು ನಟ ದೂರಿನಲ್ಲಿ ವಿವರಿಸಿದ್ದಾರೆ.

ರಂಜಿತ್ ವಿರುದ್ಧ ಐಟಿ ಕಾಯ್ದೆಯ ಐಪಿಸಿ ಸೆಕ್ಷನ್ 377 (ಅಸ್ವಾಭಾವಿಕ ಅಪರಾಧಗಳು) ಮತ್ತು 66 ಇ (ಗೌಪ್ಯತೆಯ ಉಲ್ಲಂಘನೆಗಾಗಿ ಶಿಕ್ಷೆ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೇರಳದ ಕಸಬಾ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಸೆ.9ರಂದು ಕೋಯಿಕ್ಕೋಡ್ ಪ್ರಧಾನ ಸೆಷನ್ಸ್ ನ್ಯಾಯಾಲಯ ರಂಜಿತ್‌ಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು. ಈ ಹಿಂದೆ ಬಂಗಾಳಿ ನಟಿ ಶ್ರೀಲೇಖಾ ಮಿತ್ರಾ ಕೂಡ ರಂಜಿತ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು.

ಚಿತ್ರನಟರಿಂದ ಲೈಂಗಿಕ ದೌರ್ಜನ್ಯ ಕುರಿತಂತೆ ನ್ಯಾಯಮೂರ್ತಿ ಹೇಮಾ ಸಮಿತಿಯ ವರದಿ ಬಹಿರಂಗಗೊಂಡ ಬೆನ್ನಲ್ಲೇ ಮಲಯಾಳ ಸಿನಿಮಾ ಕಲಾವಿದರ ಸಂಘಕ್ಕೆ (ಅಮ್ಮ) ಹಿರಿಯ ನಟ ಮೋಹನ್‌ಲಾಲ್‌, ಇತರ ಪದಾಧಿಕಾರಿಗಳು ಈಚೆಗೆ ಸಾಮೂಹಿಕವಾಗಿ ರಾಜೀನಾಮೆ ನೀಡಿದ್ದರು.

ನಟರಿಂದ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಅನೇಕ ಕಲಾವಿದೆಯರು ಕಳೆದ ಕೆಲವು ದಿನಗಳಿಂದ ಆರೋಪ ಮಾಡಿದ್ದರು. ಕೆಲವು ಬಂಗಾಳಿ ನಟಿಯರೂ ಆರೋಪಕ್ಕೆ ದನಿಗೂಡಿಸಿದ್ದರು.

ನಿರ್ದೇಶಕ ರಂಜಿತ್, ನಟರಾದ ಸಿದ್ದೀಕ್‌, ಮುಕೇಶ್ ಅವರ ವಿರುದ್ಧವೂ ಅರೋಪಗಳು ಕೇಳಿಬಂದಿದ್ದು, ಮಲಯಾಳ ಚಿತ್ರರಂಗದಲ್ಲಿ ಕಾರ್ಯಸ್ಥಳದಲ್ಲಿ ಕಲಾವಿದೆಯರ ಮೇಲೆ ಲೈಂಗಿಕ ದೌರ್ಜನ್ಯ, ಕಿರುಕುಳ ನಡೆಯುತ್ತಿದೆ ಎಂಬ ಅಂಶಗಳನ್ನು ನ್ಯಾಯಮೂರ್ತಿ ಹೇಮಾ ಸಮಿತಿ ವರದಿ ಉಲ್ಲೇಖಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.