ADVERTISEMENT

ಹೇಮಾ ಮಾಲಿನಿ ವಿರುದ್ಧ ಅಸಂಬದ್ಧ ಹೇಳಿಕೆ: ಸುರ್ಜೇವಾಲಾ ವಿರುದ್ಧ ಪ್ರಕರಣ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2024, 12:56 IST
Last Updated 4 ಏಪ್ರಿಲ್ 2024, 12:56 IST
   

ನವದೆಹಲಿ: ನಟಿ ಹಾಗೂ ಬಿಜೆಪಿ ಸಂಸದೆ ಹೇಮಾ ಮಾಲಿನಿ ವಿರುದ್ಧ ಅಸಂಬದ್ಧ ಹೇಳಿಕೆ ನೀಡಿರುವ ಕಾಂಗ್ರೆಸ್ ಮುಖಂಡ ರಣದೀಪ್ ಸುರ್ಜೇವಾಲಾ ವಿರುದ್ಧ ರಾಷ್ಟ್ರೀಯ ಮಹಿಳಾ ಆಯೋಗವು(ಎನ್‌ಸಿಡಬ್ಲ್ಯು) ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದೆ.

'ರಣದೀಪ್ ಸುರ್ಜೇವಾಲಾ ಮಾಡಿರುವ ಅತ್ಯಂತ ಅವಮಾನಕಾರಿ ಹೇಳಿಕೆಯನ್ನು ರಾಷ್ಟ್ರೀಯ ಮಹಿಳಾ ಆಯೋಗ ಬಲವಾಗಿ ಖಂಡಿಸುತ್ತದೆ. ಸ್ತ್ರೀದ್ವೇಷ ಮತ್ತು ಅತಿರೇಕದ ಹೇಳಿಕೆ ಇದಾಗಿದ್ದು, ಸುರ್ಜೇವಾಲಾ ವಿರುದ್ಧ ಶೀಘ್ರ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ, ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ. ಈ ಬಗ್ಗೆ ಕ್ರಮ ಕೈಗೊಂಡ ವರದಿಯನ್ನು 3 ದಿನಗಳಲ್ಲಿ ನೀಡುವಂತೆ ಮನವಿ ಮಾಡಿದ್ದಾರೆ’ಎಂದು ಎನ್‌ಸಿಡಬ್ಲ್ಯು ಪ್ರಕಟಣೆಯಲ್ಲಿ ತಿಳಿಸಿದೆ.

ಕಾರ್ಯಕ್ರಮವೊಂದರಲ್ಲಿ ಬಿಜೆಪಿಯನ್ನು ಟೀಕಿಸುವ ಭರದಲ್ಲಿ ಸುರ್ಜೇವಾಲಾ ಅವರು ಹೇಮಾ ಮಾಲಿನಿ ಕುರಿತಾಗಿ ನೀಡಿರುವ ಅಸಂಬದ್ಧ ಹೇಳಿಕೆ ಕುರಿತಾದ ವಿಡಿಯೊವನ್ನು ಬಿಜೆಪಿ ಐಟಿ ಘಟಕದ ಮುಖ್ಯಸ್ಥ ಅಮಿತ್ ಮಾಳವೀಯ, ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆ ಬಳಿಕ ಉಭಯ ಪಕ್ಷಗಳ ನಾಯಕರ ನಡುವೆ ಭಾರಿ ರಾಜಕೀಯ ಕೆಸರೆರಚಾಟಕ್ಕೆ ವೇದಿಕೆ ಸೃಷ್ಟಿಯಾಗಿದೆ.

ADVERTISEMENT

‘ಮಹಿಳೆಯರ ಬಗ್ಗೆ ಸುರ್ಜೇವಾಲಾ ಅವರದ್ದು ಅತ್ಯಂತ ಅಸಹ್ಯಕರ ವಿವರಣೆಯಾಗಿದೆ. ಹಿಂದೊಮ್ಮೆ, ಸುರ್ಜೇವಾಲಾ ಅವರ ಇನ್ನೊಬ್ಬ ಸಹೋದ್ಯೋಗಿ, ಬಿಜೆಪಿ ನಾಯಕಿಯ 'ರೇಟ್' ಕೇಳುತ್ತಿದ್ದರು. ಇದು ರಾಹುಲ್ ಗಾಂಧಿಯವರ ಕಾಂಗ್ರೆಸ್. ಇದು ಸ್ತ್ರೀದ್ವೇಷ ಮತ್ತು ಮಹಿಳೆಯರನ್ನು ಅಸಹ್ಯಕರವಾಗಿ ನೋಡುವ ಕಾಂಗ್ರೆಸ್’ಎಂದು ಮಾಳವೀಯ ಎಕ್ಸ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಈ ಮಧ್ಯೆ, ಹರಿಯಾಣ ರಾಜ್ಯದ ಮಹಿಳಾ ಆಯೋಗವು ಸಹ ಸುರ್ಜೇವಾಲಾ ಅವರಿಗೆ ನೋಟಿಸ್ ಜಾರಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.