ನವದೆಹಲಿ: ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಒಡೆತನದ ಯಂಗ್ ಇಂಡಿಯಾ ಕಂಪನಿಯಲ್ಲಿ ಜಾರಿ ನಿರ್ದೇಶನಾಲಯದ(ಇ.ಡಿ) ಅಧಿಕಾರಿಗಳು ಶೋಧ ಕಾರ್ಯ ಆರಂಭಿಸಿದ್ದಾರೆ.
ಹೆರಾಲ್ಡ್ ಹೌಸ್ ಕಟ್ಟಡದಲ್ಲಿರುವ ಕಚೇರಿಯಲ್ಲಿ ಈ ಶೋಧ ನಡೆಯುತ್ತಿದ್ದು, ಸಂಸ್ಥೆಯ ಪರವಾಗಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಜರಾಗಿದ್ದಾರೆ.
ಐಟಿಒ ಬಳಿ ಇರುವ ಬಹದ್ದೂರ್ ಶಾ ಜಫರ್ ಮಾರ್ಗ್‌ನಲ್ಲಿರುವ ಕಟ್ಟಡಕ್ಕೆ 12.40ರ ಸುಮಾರಿಗೆ ಮಲ್ಲಿಕಾರ್ಜುನ ಖರ್ಗೆ ತಲುಪಿದರು. ಶೋಧದ ವೇಳೆ ತಮ್ಮ ಹಾಜರಾತಿಗಾಗಿ ಸಮನ್ಸ್ ನೀಡಿದ್ದ ಅಧಿಕಾರಿಗಳನ್ನು ಅವರು ಭೇಟಿಯಾದರು.
ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ, ಸಂಸ್ಥೆಯಲ್ಲಿ ಅತ್ಯಧಿಕ ಷೇರು ಹೊಂದಿದ್ದಾರೆ. ಕಾಂಗ್ರೆಸ್ ಅಧ್ಯಕ್ಷೆಯೊಬ್ಬರೆ ಶೇಕಡ 38ರಷ್ಟು ಷೇರು ಹೊಂದಿದ್ದಾರೆ.
ನಿನ್ನೆ, ಪುರಾವೆಗಳನ್ನು ಸಂರಕ್ಷಿಸುವ ಉದ್ದೇಶದಿಂದ 4 ಅಂತಸ್ತಿನ ಹೆರಾಲ್ಡ್ ಹೌಸ್ ಕಟ್ಟಡದಲ್ಲಿರುವ ಯಂಗ್ ಇಂಡಿಯಾ ಸಂಸ್ಥೆಯ ಕಚೇರಿಯ ಒಂದು ಕೊಠಡಿಗೆ ಸೀಲ್ ಹಾಕಲಾಗಿತ್ತು. ಸಂಸ್ಥೆಯ ಅಧಿಕೃತ ಪ್ರತಿನಿಧಿ ಇಲ್ಲದ ಕಾರಣ ಕಳದ ಎರಡು ದಿನಗಳಿಂದ ಶೋಧ ನಡೆಸಿರಲಿಲ್ಲ.
ಯಂಗ್ ಇಂಡಿಯಾ ಒಡೆತನದ ಅಸೋಸಿಯೇಟ್ ಜರ್ನಲ್ ಲಿಮಿಟೆಡ್, ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ಪ್ರಕಟಿಸುತ್ತದೆ. ಸುದ್ದಿ ಪತ್ರಿಕೆಯ ಕಚೇರಿ ಎಜಿಎಲ್ ಹೆಸರಿನಲ್ಲಿ ನೋಂದಾವಣೆಯಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಸೇರಿ ದೇಶದ 12 ಕಡೆ ಇ.ಡಿ ದಾಳಿ ನಡೆಸಿತ್ತು.
ಇದಕ್ಕೂ ಮುನ್ನ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಸುದೀರ್ಘ ವಿಚಾರಣೆಗೆ ಒಳಪಡಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.