ADVERTISEMENT

ನ್ಯಾಷನಲ್ ಹೆರಾಲ್ಡ್‌ ಪ್ರಕರಣ: ಯಂಗ್‌ ಇಂಡಿಯನ್ ಕಚೇರಿಯಲ್ಲಿ ಮತ್ತೆ ಶೋಧ

ಖರ್ಗೆ ಸಮ್ಮುಖದಲ್ಲಿ ಬೀಗ ತೆಗೆದ ಇ.ಡಿ ಅಧಿಕಾರಿಗಳು

ಪಿಟಿಐ
Published 4 ಆಗಸ್ಟ್ 2022, 21:15 IST
Last Updated 4 ಆಗಸ್ಟ್ 2022, 21:15 IST
ಯಂಗ್‌ ಇಂಡಿಯನ್ ಕಚೇರಿಯಲ್ಲಿ ಗುರುವಾರ ಇ.ಡಿ ಶೋಧಕಾರ್ಯದ ನಂತರ ಮಲ್ಲಿಕಾರ್ಜುನ ಖರ್ಗೆ ಅವರು ಹೊರಬಂದರು –ಪಿಟಿಐ ಚಿತ್ರ
ಯಂಗ್‌ ಇಂಡಿಯನ್ ಕಚೇರಿಯಲ್ಲಿ ಗುರುವಾರ ಇ.ಡಿ ಶೋಧಕಾರ್ಯದ ನಂತರ ಮಲ್ಲಿಕಾರ್ಜುನ ಖರ್ಗೆ ಅವರು ಹೊರಬಂದರು –ಪಿಟಿಐ ಚಿತ್ರ   

ನವದೆಹಲಿ :ನ್ಯಾಷನಲ್ ಹೆರಾಲ್ಡ್‌ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು (ಇ.ಡಿ) ಇಲ್ಲಿನ ಯಂಗ್‌ ಇಂಡಿಯನ್‌ ಕಚೇರಿಯಲ್ಲಿ ಗುರುವಾರ ಮತ್ತೆ ಶೋಧಕಾರ್ಯ ಆರಂಭಿಸಿತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ‘ಹೆರಾಲ್ಡ್‌ ಹೌಸ್‌’ ಕಟ್ಟಡದಲ್ಲಿರುವ ಕಚೇರಿಯಲ್ಲಿ ಮಂಗಳವಾರ ಇ.ಡಿ ಶೋಧಕಾರ್ಯ ಆರಂಭಿಸಿತ್ತು. ಆದರೆ, ಶೋಧಕಾರ್ಯದ ವೇಳೆ ಯಂಗ್ ಇಂಡಿಯನ್‌ನ ಹಿರಿಯ ಅಧಿಕಾರಿಗಳು ಯಾರೂ ಇಲ್ಲದ ಕಾರಣ ಕಚೇರಿಗೆ ಇ.ಡಿ ಅಧಿಕಾರಿಗಳು ಬುಧವಾರ ಬೀಗ ಹಾಕಿದ್ದರು.

ಶೋಧಕಾರ್ಯ ನಡೆಸಲು ಸಾಧ್ಯವಾಗದೇ ಇದ್ದ ಕಾರಣ, ಇ.ಡಿ ಅಧಿಕಾರಿಗಳು ಯಂಗ್‌ ಇಂಡಿಯನ್‌ ಪದಾಧಿಕಾರಿಗಳಲ್ಲಿ ಒಬ್ಬರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಇ–ಮೇಲ್‌ ಮೂಲಕ ಸಮನ್ಸ್ ನೀಡಿದ್ದರು. ‘ಕಚೇರಿಯ ಶೋಧಕಾರ್ಯದ ವೇಳೆ ಹಾಜರಿರಬೇಕು’ ಎಂದು ಸೂಚಿಸಿದ್ದರು.

ADVERTISEMENT

ಗುರುವಾರ ಮಧ್ಯಾಹ್ನ ರಾಜ್ಯಸಭಾ ಕಲಾಪದ ಮಧ್ಯೆಯೇ ಖರ್ಗೆ ಅವರು, ಹೆರಾಲ್ಡ್‌ ಹೌಸ್‌ ಕಟ್ಟಡಕ್ಕೆ ಬಂದರು. ಆನಂತರ ಇ.ಡಿ ಅಧಿಕಾರಿಗಳು ಯಂಗ್ ಇಂಡಿಯನ್ ಕಚೇರಿಯ ಬೀಗ ತೆಗೆದು, ಶೋಧಕಾರ್ಯಕ್ಕೆ ಮತ್ತೆ ಚಾಲನೆ ನೀಡಿದರು. ‘ಹಣ ಅಕ್ರಮ ವರ್ಗಾವಣೆಗೆ ಸಂಬಂಧಿಸಿದಂತೆ ಸಾಕ್ಷ್ಯಗಳು ಲಭ್ಯವಾಗುತ್ತವೆಯೇ ಎಂಬುದನ್ನು ಪರಿಶೀಲಿಸುತ್ತೇವೆ. ಸಾಕ್ಷ್ಯಗಳನ್ನು ಸಂಗ್ರಹಿಸುತ್ತೇವೆ’ ಎಂದು ಇ.ಡಿ ಅಧಿಕಾರಿಗಳು ಹೇಳಿದ್ದಾರೆ.

ಗುರುವಾರ ಮಧ್ಯಾಹ್ನ 2ರ ಹೊತ್ತಿಗೆ ಆರಂಭವಾದ ಶೋಧಕಾರ್ಯ ರಾತ್ರಿ 8ವರೆಗೂ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.