ADVERTISEMENT

ರಾಷ್ಟ್ರೀಯ ನ್ಯಾಯಾಂಗ ನೇಮಕ ಆಯೋಗ ಮಸೂದೆ: ರಾಜ್ಯಸಭೆಯಲ್ಲಿ ಮಂಡನೆ

ಪಿಟಿಐ
Published 9 ಡಿಸೆಂಬರ್ 2022, 16:08 IST
Last Updated 9 ಡಿಸೆಂಬರ್ 2022, 16:08 IST

ನವದೆಹಲಿ: ರಾಷ್ಟ್ರೀಯ ನ್ಯಾಯಾಂಗ ನೇಮಕ ಆಯೋಗದ ಮೂಲಕ ನ್ಯಾಯಾಮೂರ್ತಿಗಳ ನೇಮಕಕ್ಕೆ ಅವಕಾಶ ಕೊಡುವ ಖಾಸಗಿ ಮಸೂದೆಯನ್ನು ಸಿಪಿಎಂನ ಬಿಕಾಶ್‌ ರಂಜನ್‌ ಭಟ್ಟಾಚಾರ್ಯ ಅವರು ಶುಕ್ರವಾರ ರಾಜ್ಯಸಭೆಯಲ್ಲಿ ಮಂಡಿಸಿದರು. ಆಮ್‌ ಆದ್ಮಿ ಪಕ್ಷದ ರಾಘವ್‌ ಚಡ್ಡಾ ಅವರು ಈ ಖಾಸಗಿ ಮಸೂದೆಯನ್ನು ವಿರೋಧಿಸಿದರು.

ಧ್ವನಿ ಮತದ ವೇಳೆ ಮಸೂದೆಯ ಪರ ಬಹುಮತ ಇದ್ದಿದ್ದರಿಂದ ರಾಷ್ಟ್ರೀಯ ನ್ಯಾಯಾಂಗ ನೇಮಕ ಆಯೋಗ ಮಸೂದೆ, 2022 ಅನ್ನು ರಾಜ್ಯಸಭೆಯಲ್ಲಿ ಮಂಡಿಸಲಾಯಿತು.

ರಾಷ್ಟ್ರೀಯ ನ್ಯಾಯಾಂಗ ಸಮಿತಿಯ ಮೂಲಕ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ, ಸುಪ್ರೀಂ ಕೋರ್ಟ್‌ ಹಾಗೂ ಹೈಕೋರ್ಟ್‌ನ ನ್ಯಾಯಮೂರ್ತಿಗಳನ್ನು ನೇಮಿಸಲು ಅವಕಾಶ ಕೊಡುವುದು ಈ ಮಸೂದೆಯ ಉದ್ದೇಶವಾಗಿದೆ.

ADVERTISEMENT

ಒಂದೊಮ್ಮೆ ಈ ಮಸೂದೆಗೆ ಒಪ್ಪಿಗೆ ದೊರೆತರೆ, ಆಯೋಗದ ಮೂಲಕ ನ್ಯಾಯಮೂರ್ತಿಗಳ ವರ್ಗಾವಣೆಯ ನಿಯಂತ್ರಣ ಹಾಗೂ ನ್ಯಾಯಮೂರ್ತಿಗಳನ್ನು ಹೆಚ್ಚು ಹೊಣೆಗಾರರನ್ನಾಗಿ ಮಾಡಬಹುದಾಗಿದೆ. ಸುಪ್ರೀಂ ಕೋರ್ಟ್‌ ಅಥವಾ ಹೈಕೋರ್ಟ್‌ ನ್ಯಾಯಮೂರ್ತಿಗಳ ವಿರುದ್ಧದ ದೂರಿನ ತನಿಖೆಯನ್ನು ನಿಯಂತ್ರಿಸಬಹುದಾಗಿದೆ. ರಾಷ್ಟ್ರಪತಿ ಅವರಿಗೆ ಸಂಸತ್ತು ಮಾಹಿತಿ ನೀಡುವ ಮೂಲಕ ನ್ಯಾಯಮೂರ್ತಿಗಳ ವಜಾ ಪ್ರಕ್ರಿಯೆ ಆರಂಭಿಸುವ ಪ್ರಸ್ತಾವವೂ ಈ ಮಸೂದೆಯಲ್ಲಿದೆ.

ಚಡ್ಡಾ ವಿರೋಧ: ‘ರಾಷ್ಟ್ರೀಯ ನ್ಯಾಯಾಂಗ ಆಯೋಗದ ವಿಚಾರವು 1993, 1998 ಮತ್ತು 2016ರಲ್ಲಿ ಸುಪ್ರೀಂ ಕೋರ್ಟ್‌ನ ಪರಿಶೀಲನೆಗೆ ಒಳಪಟ್ಟಿತ್ತು. ನ್ಯಾಯಾಂಗದ ಸ್ವಾತಂತ್ರ್ಯವನ್ನು ಗಮನದಲ್ಲಿಟ್ಟುಕೊಂಡು ಸುಪ್ರೀಂ ಕೋರ್ಟ್‌ ಈ ಮೂರೂ ಬಾರಿಯೂ ಆಯೋಗದ ರಚನೆ ಪ್ರಸ್ತಾವವನ್ನು ವಜಾ ಮಾಡಿತ್ತು’ ಎಂದು ಆಮ್‌ ಆದ್ಮಿ ಪಕ್ಷದ ಸದಸ್ಯ ರಾಘವ್‌ ಚಡ್ಡಾ ಹೇಳಿದರು.

‘ಸಾಂವಿಧಾನಿಕವಾಗಿ ಸಾಧುವಲ್ಲದ ವಿಚಾರದ ಬಗ್ಗೆ ಚರ್ಚೆ ನಡೆಸುತ್ತಿದ್ದೇವೆ. ನ್ಯಾಯಮೂರ್ತಿಗಳ ನೇಮಕದ ಕೊಲಿಜಿಯಂ ವ್ಯವಸ್ಥೆ ಉತ್ತಮವಾಗಿಯೇ ಕೆಲಸ ಮಾಡುತ್ತಿದೆ’ ಎಂದರು.

ನ್ಯಾಯಮೂರ್ತಿಗಳ ನೇಮಕದಲ್ಲಿ ಕೇಂದ್ರ ಸರ್ಕಾರವು ಹಸ್ತಕ್ಷೇಪ ಮಾಡುವುದಕ್ಕೆ ಯಾವುದೇ ಅವಕಾಶವನ್ನು ನಾವು ಸೃಷ್ಟಿಸಬಾರದು

ರಾಘವ್‌ ಚಡ್ಡಾ, ಆಮ್‌ ಆದ್ಮಿ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.