ನವದೆಹಲಿ: ಇದೇ 17ರಂದು ಆರಂಭವಾಗಲಿರುವ ಹೊಸ ಲೋಕಸಭೆಯ ಮೊದಲ ಅಧಿವೇಶನದಲ್ಲಿಯೇ ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆ ತರುವ ಉದ್ದೇಶದ ಮಸೂದೆಯನ್ನು ಮತ್ತೆ ಮಂಡಿಸಲು ಸರ್ಕಾರ ಸಜ್ಜಾಗಿದೆ.
ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ಮಸೂದೆ ಯನ್ನು 2017ರ ಡಿಸೆಂಬರ್‌ನಲ್ಲಿ ಲೋಕಸಭೆಯಲ್ಲಿ ಮಂಡಿಸಲಾಗಿತ್ತು. ಆದರೆ, 16ನೇ ಲೋಕಸಭೆಯ ಅವಧಿ ಮುಗಿದಿರುವುದರಿಂದ ಈ ಮಸೂದೆ ಈಗ ಅಸಿಂಧುವಾಗಿದೆ. ಹಾಗಾಗಿ ಹೊಸದಾಗಿ ಮಂಡಿಸುವ ಅಗತ್ಯ ಎದುರಾಗಿದೆ.
ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿರುವುದರಿಂದ ಮಸೂದೆ ಮಂಡನೆಗೆ ಹೊಸದಾಗಿಯೇ ಶಾಸನಾತ್ಮಕ ಪ್ರಕ್ರಿಯೆ ಆರಂಭಿಸ ಬೇಕಿದೆ. ಕರಡು ಮಸೂದೆಗೆ ಕಾನೂನು ಸಚಿವಾಲಯದ ಒಪ್ಪಿಗೆ ಇನ್ನಷ್ಟೇ ಸಿಗಬೇಕಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪರ್ಯಾಯ ವೈದ್ಯ ಪದ್ಧತಿಗಳನ್ನು ಅನುಸರಿಸುವವರು ಸಂಬಂಧಪಟ್ಟ ಒಂದು ಕೋರ್ಸ್ ಮಾಡಿಕೊಂಡರೆ ಅಲೋಪಥಿ ಔಷಧ ನೀಡಲು ಅವಕಾಶ ಕೊಡುವ ಪ್ರಸ್ತಾವ 2017ರಲ್ಲಿ ಮಂಡಿಸಿದ್ದ ಮಸೂದೆಯಲ್ಲಿ ಇತ್ತು. ಇದಕ್ಕೆ ಅಲೋಪಥಿ ವೈದ್ಯ ಸಮೂಹದಿಂದ ಭಾರಿ ಪ್ರತಿರೋಧ ವ್ಯಕ್ತವಾಗಿತ್ತು. ಹಾಗಾಗಿ ಈ ವಿಚಾರದ ಬಗ್ಗೆ ಪರಿಶೀಲನೆ ನಡೆಸಲು ಸಂಸತ್ತಿನ ಸಮಿತಿಗೆ ವಹಿಸಲಾಗಿತ್ತು. 2018ರ ಮಾರ್ಚ್‌ನಲ್ಲಿ ಸಮಿತಿಯು ಶಿಫಾರಸುಗಳನ್ನು ಸಲ್ಲಿಸಿತ್ತು. ಈ ಶಿಫಾರಸು ಅನ್ವಯ, ವಿವಾದಾತ್ಮಕವಾದ ಅಂಶವನ್ನು ಮಸೂದೆಯಿಂದ ಕೈಬಿಡಲಾಗಿತ್ತು. ಬೇರೆ ಕೆಲವು ತಿದ್ದುಪಡಿಗಳನ್ನೂ ಮಾಡಲಾಗಿತ್ತು.
1956ರ ವೈದ್ಯಕೀಯ ಪರಿಷತ್ ಕಾಯ್ದೆಯ ಬದಲಿಗೆ ಹೊಸ ಕಾಯ್ದೆ ತರುವುದು ಈ ಮಸೂದೆ ಉದ್ದೇಶ.
ಭಾರತೀಯ ವೈದ್ಯಕೀಯ ಪರಿಷತ್‌ನ ಚುನಾಯಿತ ಮಂಡಳಿ ಅಧಿಕಾರಾವಧಿಯು ಪೂರ್ಣಗೊಂಡ ಕಾರಣ ಅದನ್ನು ಕಳೆದ ವರ್ಷವೇ ವಿಸರ್ಜಿಸಲಾಗಿತ್ತು. ಅದರ ಬದಲಿಗೆ, ಏಳು ಸದಸ್ಯರ ಆಡಳಿತ ಮಂಡಳಿಯನ್ನು ನೇಮಿಸಲಾಗಿತ್ತು. ಅದಕ್ಕಾಗಿ ಸುಗ್ರೀವಾಜ್ಞೆಯನ್ನು ಜಾರಿಗೆ ತರಲಾಗಿತ್ತು. ಆಡಳಿತ ಮಂಡಳಿಯು ತನ್ನ ಕಾರ್ಯನಿರ್ವಹಣೆಯನ್ನು ಮುಂದುವರಿಸಬೇಕಾದರೆ, ಈಗ ಮಸೂದೆ ಅಂಗೀಕಾರ ಆಗಲೇಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.