ಬೆಂಗಳೂರು: ಸರ್ಕಾರಿ ಸ್ವಾಮ್ಯದ ಸುದ್ದಿವಾಹಿನಿ ‘ಡಿಡಿ ನ್ಯೂಸ್’ನ ಲಾಂಛನದ ಬಣ್ಣ ಬದಲಾಗಿರುವುದು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಈ ವರೆಗೆ ಲಾಂಛನದ ಬಣ್ಣ ನೀಲಿ ಇತ್ತು. ಈಗ ಅದರ ಬಣ್ಣವನ್ನು ಕೇಸರಿಗೆ ಬದಲಾಯಿಸಿರುವೇ ಇದಕ್ಕೆ ಕಾರಣ.
ಲಾಂಛನದ ಜೊತೆಗೆ ಸುದ್ದಿ ಪ್ರಸ್ತುತಿ ಶೈಲಿಯಲ್ಲಿಯೂ ‘ಡಿಡಿ ನ್ಯೂಸ್’ ಬದಲಾವಣೆ ತಂದಿದೆ.
ಈ ಬದಲಾವಣೆ ಕುರಿತು ‘ಡಿಡಿ ನ್ಯೂಸ್’ ಏಪ್ರಿಲ್ 16ರಂದು ತನ್ನ ‘ಎಕ್ಸ್’ ಖಾತೆಯಲ್ಲಿ ಮಾಹಿತಿ ಹಾಗೂ ವಿಡಿಯೊವೊಂದನ್ನು ಹಂಚಿಕೊಂಡಿದೆ.
‘ನಾವೀಗ ಹೊಸ ಅವತಾರದಲ್ಲಿ ಲಭ್ಯ. ಆದರೆ, ನಮ್ಮ ಮೌಲ್ಯಗಳು ಹಾಗೆಯೇ ಇವೆ. ಈ ಹಿಂದೆಂದಿಗಿಂತಲೂ ಭಿನ್ನವಾದ ಸುದ್ದಿಗಳಿಗಾಗಿ ಹೊಸ ಪಯಣಕ್ಕೆ ಸಿದ್ಧರಾಗಿ. ಹೊಸ ರೂಪದಲ್ಲಿ ಡಿಡಿ ನ್ಯೂಸ್ ಪ್ರಸ್ತುತಿ ಅನುಭವಿಸಿ’ ಎಂದು ಪೋಸ್ಟ್ ಮಾಡಲಾಗಿದೆ.
‘ವೇಗಕ್ಕಿಂತ ನಿಖರತೆ, ಹೇಳಿಕೆಗಳಿಗಿಂತ ವಾಸ್ತವ ಸಂಗತಿಗಳು, ಸಂವೇದನೆಗಿಂತಲೂ ಸತ್ಯವನ್ನು ಪ್ರಸ್ತುತಪಡಿಸುವ ಧೈರ್ಯ ಹೊಂದಿದ್ದೇವೆ. ಇದು ಡಿಡಿ ನ್ಯೂಸ್‌ನಲ್ಲಿದೆ ಎಂದರೆ ಅದು ಸತ್ಯವೇ ಎಂದರ್ಥ! ಡಿಡಿ ನ್ಯೂಸ್– ಸತ್ಯದ ಭರವಸೆ’ ಎಂದೂ ಪೋಸ್ಟ್‌ನಲ್ಲಿ ಹೇಳಲಾಗಿದೆ.
ಆದರೆ, ಲಾಂಛನದ ಬಣ್ಣವನ್ನು ಬದಲಾಯಿಸಿರುವ ಕುರಿತು ಈ ಪೋಸ್ಟ್‌ನಲ್ಲಿ ಉಲ್ಲೇಖವಿಲ್ಲ.
ತನ್ನ ಲಾಂಛನ ವಿನ್ಯಾಸಗೊಳಿಸುವುದಕ್ಕಾಗಿ ದೂರದರ್ಶನ 2017ರಲ್ಲಿ ಸ್ಪರ್ಧೆಯೊಂದನ್ನು ಏರ್ಪಡಿಸಿತ್ತು. ಈ ಸ್ಪರ್ಧೆಗೆ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿತ್ತಲ್ಲದೇ, 10 ಸಾವಿರಕ್ಕೂ ಅಧಿಕ ಪ್ರವೇಶಗಳು ಸಲ್ಲಿಕೆಯಾಗಿದ್ದವು.
ಟೀಕೆ: ತನ್ನ ಲಾಂಛನದ ಬಣ್ಣವನ್ನು ಬದಲಾವಣೆ ಮಾಡಿರುವ ಡಿಡಿ ನ್ಯೂಸ್ ನಡೆಯನ್ನು ಪ್ರಸಾರ ಭಾರತಿ ಮಾಜಿ ಸಿಇಒ ಹಾಗೂ ಟಿಎಂಸಿಯ ರಾಜ್ಯಸಭಾ ಸದಸ್ಯ ಜವಾಹರ್ ಸರ್ಕಾರ್ ಟೀಕಿಸಿದ್ದಾರೆ.
‘ರಾಷ್ಟ್ರೀಯ ಸುದ್ದಿವಾಹಿನಿ ದೂರದರ್ಶನ ತನ್ನ ಐತಿಹಾಸಿಕ ಲಾಂಛನಕ್ಕೆ ಕೇಸರಿ ಬಣ್ಣ ಬಳಿದಿದೆ. ಈ ಸಂಸ್ಥೆಯ ಮಾಜಿ ಸಿಇಒ ಆಗಿರುವ ನಾನು, ಇದರ ಕೇಸರೀಕರಣವನ್ನು ಬಹಳ ಎಚ್ಚರಿಕೆಯಿಂದ ಗಮನಿಸುತ್ತಿದ್ದೇನೆ. ಇದು ಪ್ರಸಾರ ಭಾರತಿ ಆಗಿ ಉಳಿದಿಲ್ಲ–ಇದು ಈಗ ಪ್ರಚಾರ ಭಾರತಿ’ ಎಂದು ಜವಾಹರ್ ಸರ್ಕಾರ್ ತಮ್ಮ ‘ಎಕ್ಸ್’ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಈ ಕುರಿತು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.