ಗುವಾಹಟಿ: ಅರುಣಾಚಲ ಪ್ರದೇಶದ ಎರಡು ಲೋಕಸಭಾ ಕ್ಷೇತ್ರಗಳಲ್ಲಿ ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ) ಯಾವುದೇ ಅಭ್ಯರ್ಥಿಗಳನ್ನು ನಿಲ್ಲಿಸುವುದಿಲ್ಲ. ಜತೆಗೆ, ಈ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸಲಾಗುವುದು ಎಂದು ಮೇಘಾಲಯ ಮುಖ್ಯಮಂತ್ರಿ ಕೋನ್ರಡ್ ಸಂಗ್ಮಾ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನ್ಯಾಷನಲ್ ಪೀಪಲ್ಸ್ ಪಾರ್ಟಿಯು (ಎನ್‌ಪಿಪಿ) ಕೇಂದ್ರ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ಭಾಗವಾಗಿದೆ ಎಂದು ಹೇಳಿದ್ದಾರೆ.
‘ಅರುಣಾಚಲ ಪ್ರದೇಶದ ಎರಡು ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸದಿರಲು ನ್ಯಾಷನಲ್ ಪೀಪಲ್ಸ್ ಪಾರ್ಟಿ ನಿರ್ಧರಿಸಿದೆ. ಎನ್‌ಡಿಎ ಪಾಲುದಾರರಾಗಿರುವ ಎನ್‌ಪಿಪಿಯು ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸಲು ನಿರ್ಧರಿಸಿದೆ ಎಂದು ಸಂಗ್ಮಾ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಸಂಗ್ಮಾ ಅವರ ನಿರ್ಧಾರವನ್ನು ಶ್ಲಾಘಿಸಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ‘ಎನ್‌ಡಿಎ ಮೈತ್ರಿಕೂಟದ ಪಾಲುದಾರರ ಇಂತಹ ಬದ್ಧತೆಯಿಂದಾಗಿ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು 400ಕ್ಕೂ ಹೆಚ್ಚು ಸ್ಥಾನಗಳು ಪಡೆಯಲಿದೆ’ ಎಂದು ಹೇಳಿದರು.
ಬಿಜೆಪಿಯು ಅರುಣಾಚಲ ಪಶ್ಚಿಮ ಲೋಕಸಭಾ ಕ್ಷೇತ್ರಕ್ಕೆ ಕೇಂದ್ರ ಭೂ ವಿಜ್ಞಾನ ಸಚಿವ ಕಿರಣ್ ರಿಜಿಜು ಮತ್ತು ಅರುಣಾಚಲ ಪೂರ್ವ ಕ್ಷೇತ್ರಕ್ಕೆ ತಾಪಿರ್ ಗಾವೊ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದೆ. ಏಪ್ರಿಲ್ 19ರಂದು ಮೊದಲ ಹಂತದಲ್ಲಿ ಎರಡು ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.