ನವದೆಹಲಿ: ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ಈ ವರ್ಷದ ‘ನೀಟ್– ಯುಜಿ’ಯ ಕೇಂದ್ರ ಮತ್ತು ನಗರವಾರು ಫಲಿತಾಂಶಗಳನ್ನು ಶನಿವಾರ ಪ್ರಕಟ ಮಾಡಿದ್ದು, ಅಭ್ಯರ್ಥಿಗಳ ಗುರುತನ್ನು ಮರೆಮಾಚಿದೆ.
ಮೇ 5ರಂದು ನಡೆದಿದ್ದ ಪರೀಕ್ಷೆಯ ಫಲಿತಾಂಶವನ್ನು ಜೂನ್ 4ರಂದೇ ಎನ್‌ಟಿಎ ಪ್ರಕಟಿಸಿತ್ತು. ಪ್ರಶ್ನೆಪತ್ರಿಕೆ ಸೋರಿಕೆ ಸೇರಿದಂತೆ ವಿವಿಧ ಬಗೆಯ ಪರೀಕ್ಷಾ ಅಕ್ರಮಗಳಿಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಕೇಂದ್ರವಾರು ಮತ್ತು ನಗರವಾರು ಫಲಿತಾಂಶಗಳನ್ನು ಶನಿವಾರ ಮಧ್ಯಾಹ್ನ 12 ಗಂಟೆಯೊಳಗೆ ಪ್ರಕಟಿಸುವಂತೆ ನಿರ್ದೇಶನ ನೀಡಿತ್ತು.
ಹರಿಯಾಣದ ಬಹದ್ದೂರ್‌ಗಢದಲ್ಲಿರುವ ಹರದಯಾಳ್ ಪಬ್ಲಿಕ್ ಸ್ಕೂಲ್ ಪರೀಕ್ಷಾ ಕೇಂದ್ರದಲ್ಲಿ 720ಕ್ಕೆ ಪೂರ್ಣ 720 ಅಂಕಗಳನ್ನು ಪಡೆದಿದ್ದ ಆರು ಅಭ್ಯರ್ಥಿಗಳ ಪೈಕಿ ಯಾರೊಬ್ಬರಿಗೂ ಪೂರ್ಣ ಅಂಕಗಳು ಬಂದಿಲ್ಲ. ಈ ಕೇಂದ್ರದಲ್ಲಿ 494 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಅವರಲ್ಲಿ ಒಬ್ಬರು ಗರಿಷ್ಠ ಅಂದರೆ 682 ಅಂಕಗಳನ್ನು ಪಡೆದಿದ್ದು, ಅವರೇ ಕೇಂದ್ರದ ‘ಟಾಪರ್’ ಆಗಿದ್ದಾರೆ. ಅಲ್ಲದೆ ಇತರ 13 ಅಭ್ಯರ್ಥಿಗಳು 600ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ ಎಂಬುದು ಕೇಂದ್ರವಾರು ಫಲಿತಾಂಶದಿಂದ ಗೊತ್ತಾಗಿದೆ.
ಜೂನ್ 4ರಂದು ಪ್ರಕಟಿಸಲಾಗಿದ್ದ ಫಲಿತಾಂಶದಲ್ಲಿ ಈ ಕೇಂದ್ರದ ಆರು ಅಭ್ಯರ್ಥಿಗಳು ಪೂರ್ಣ ಅಂಕಗಳನ್ನು ಪಡೆದಿದ್ದರು. ಅಲ್ಲದೆ ಇತರ ಇಬ್ಬರು ಅಭ್ಯರ್ಥಿಗಳು ಕ್ರಮವಾಗಿ 718 ಮತ್ತು 719 ಅಂಕಗಳನ್ನು ಗಳಿಸಿದ್ದರು. ಒಂದೇ ಕೇಂದ್ರದ ಇಷ್ಟು ಅಭ್ಯರ್ಥಿಗಳು ಗರಿಷ್ಠ ಅಂಕಗಳನ್ನು ಪಡೆದಿದ್ದು, ಅನುಮಾನಕ್ಕೆ ಕಾರಣವಾಗಿತ್ತು.
ಫಲಿತಾಂಶ ಪ್ರಶ್ನಿಸಿ ಕೆಲ ಅಭ್ಯರ್ಥಿಗಳು ಸುಪ್ರೀಂ ಕೋರ್ಟ್ ಮೊರೆಹೋದರು. ಆಗ ಕೇಂದ್ರ ಶಿಕ್ಷಣ ಸಚಿವಾಲಯವು ಈ ವಿದ್ಯಾರ್ಥಿಗಳಿಗೆ ನೀಡಿದ್ದ ಕೃಪಾಂಕಗಳನ್ನು ರದ್ದುಗೊಳಿಸಿ, ಒಟ್ಟು 1,563 ಅಭ್ಯರ್ಥಿಗಳಿಗೆ ಜೂನ್ 23ರಂದು ಮರು ಪರೀಕ್ಷೆ ನಡೆಸಿತ್ತು. ಈ ಪೈಕಿ ಸುಮಾರು 813 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಅವರ ಫಲಿತಾಂಶವನ್ನು ಜೂನ್ 30ರಂದು ಪ್ರಕಟಿಸಲಾಗಿತ್ತು. ಪರೀಕ್ಷೆಗೆ ಹಾಜರಾಗದ ಅಭ್ಯರ್ಥಿಗಳಿಗೆ ಕೃಪಾಂಕ ಬಿಟ್ಟು, ಅವರು ಪಡೆದಿದ್ದ ನೈಜ ಅಂಕಗಳನ್ನೇ ಅಂತಿಮಗೊಳಿಸಲಾಗಿತ್ತು.
ಜಾರ್ಖಂಡ್‌ನ ಹಜಾರಿಬಾಗ್‌ನ ಓಯಸಿಸ್ ಪಬ್ಲಿಕ್ ಸ್ಕೂಲ್‌ನ ಪ್ರಾಂಶುಪಾಲರನ್ನು ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಬಂಧಿಸಲಾಗಿದೆ. ಈ ಕೇಂದ್ರದಲ್ಲಿ ಯಾರೊಬ್ಬರೂ 700ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿಲ್ಲ. ಇಲ್ಲಿನ ಏಳು ಅಭ್ಯರ್ಥಿಗಳು 650ಕ್ಕಿಂತ ಹೆಚ್ಚು, 23 ಅಭ್ಯರ್ಥಿಗಳು 600ಕ್ಕಿಂತ ಹೆಚ್ಚು ಹಾಗೂ 46 ಅಭ್ಯರ್ಥಿಗಳು 550ಕ್ಕಿಂತ ಹೆಚ್ಚು ಅಂಕಗಳಲ್ಲಿ ಪಡೆದಿದ್ದಾರೆ.
ರಾಜಸ್ಥಾನದ ಸಿಕರ್ ಜಿಲ್ಲೆಯ ಅತಿ ಹೆಚ್ಚಿನ ಅಭ್ಯರ್ಥಿಗಳು ಅತ್ಯುತ್ತಮ ಅಂಕಗಳನ್ನು ಪಡೆದು ದೇಶದ ಗಮನ ಸೆಳೆದಿದ್ದಾರೆ. ಜಿಲ್ಲೆಯ 149 ಅಭ್ಯರ್ಥಿಗಳು 700ಕ್ಕೂ ಹೆಚ್ಚು ಅಂಕಗಳನ್ನು ಗಳಿಸಿದ್ದರೆ, 2,037 ಅಭ್ಯರ್ಥಿಗಳು 650ಕ್ಕೂ ಹೆಚ್ಚು ಹಾಗೂ 4,297 ಅಭ್ಯರ್ಥಿಗಳು 600ಕ್ಕೂ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ.
ಗುಜರಾತ್‌ನ ರಾಜ್‌ಕೋಟ್ ಸ್ಕೂಲ್ ಆಫ್ ಎಂಜಿನಿಯರಿಂಗ್ ಕೇಂದ್ರವೂ ದೇಶದ ಗಮನ ಸೆಳೆದಿದೆ. ಈ ಕೇಂದ್ರದಲ್ಲಿ ಪರೀಕ್ಷೆಗೆ ಹಾಜರಾದ 1,968 ಅಭ್ಯರ್ಥಿಗಳ ಪೈಕಿ 112 ಅಭ್ಯರ್ಥಿಗಳು 700ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿದ್ದಾರೆ. ಅಲ್ಲದೆ 112 ಅಭ್ಯರ್ಥಿಗಳು 650ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ. ಅಹಮದಾಬಾದ್ ಕೇಂದ್ರವೊಂದರ 676 ಅಭ್ಯರ್ಥಿಗಳ ಪೈಕಿ 12 ಅಭ್ಯರ್ಥಿಗಳು 700ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿದ್ದಾರೆ.
ತಮಿಳುನಾಡಿನ ನುಮಕ್ಕಲ್‌ನಲ್ಲಿ ಇರುವ ಪೊವೈ ಎಂಜಿನಿಯರಿಂಗ್ ಕಾಲೇಜಿನ ಕೇಂದ್ರದಲ್ಲಿ ಪರೀಕ್ಷೆ ಬರೆದ 1,017 ಅಭ್ಯರ್ಥಿಗಳ ಪೈಕಿ ಇಬ್ಬರು 700 ಅಂಕಗಳನ್ನು ದಾಟಿದ್ದರೆ, 52 ಅಭ್ಯರ್ಥಿಗಳು 650ಕ್ಕೂ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ.
4750 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು ಮೇ 5ರಂದು ವಿದೇಶಗಳ 14 ನಗರಗಳು ಸೇರಿದಂತೆ ದೇಶದ 571 ನಗರಗಳ 4750 ಕೇಂದ್ರಗಳಲ್ಲಿ ಸುಮಾರು 24 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಕೆಲ ನಿರ್ದಿಷ್ಟ ಕೇಂದ್ರಗಳಲ್ಲಿ ಹಾಜರಾದ ಅಭ್ಯರ್ಥಿಗಳು ಇತರ ಕೇಂದ್ರಗಳ ಅಭ್ಯರ್ಥಿಗಳಿಗಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಬಯಸಿರುವುದಾಗಿ ಸುಪ್ರೀಂ ಕೋರ್ಟ್ ಹೇಳಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.