ADVERTISEMENT

ರಾಷ್ಟ್ರೀಯ ಏಕತಾ ದಿನ 2023– 'ಉಕ್ಕಿನ ಮನುಷ್ಯ'ನಿಗೆ ಸಂದ ಗೌರವ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 31 ಅಕ್ಟೋಬರ್ 2023, 3:11 IST
Last Updated 31 ಅಕ್ಟೋಬರ್ 2023, 3:11 IST
<div class="paragraphs"><p>ಏಕತಾ ಪ್ರತಿಮೆ</p></div>

ಏಕತಾ ಪ್ರತಿಮೆ

   

ಚಿತ್ರ ಕೃಪೆ ಪಿಟಿಐ

ಇಂದು ಭಾರತದ 'ಉಕ್ಕಿನ ಮನುಷ್ಯ', ದೇಶದ ಮೊದಲ ಗೃಹ ಸಚಿವ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರ ಜನ್ಮದಿನ. ಸ್ವಾತಂತ್ರ್ಯ ಸಿಕ್ಕ ಸಂದರ್ಭದಲ್ಲಿ ಹರಿದು ಹಂಚಿ ಹೋಗಿದ್ದ ಭಾರತವನ್ನು ಒಂದುಗೂಡಿಸಿದ ಈ ಮಹಾನ್‌ ನಾಯಕನ ಜನ್ಮದಿನವನ್ನು 'ರಾಷ್ಟ್ರೀಯ ಏಕತಾ ದಿನ'ವನ್ನಾಗಿ ಆಚರಿಸಲಾಗುತ್ತದೆ.

ADVERTISEMENT

ರಾಷ್ಟ್ರೀಯ ಏಕತಾ ದಿನದ ಇತಿಹಾಸ:

ವಿವಿಧ ರಾಜಮನೆತನಗಳ ಆಡಳಿತದಲ್ಲಿದ್ದ ಒಟ್ಟು 562 ಸಂಸ್ಥಾನಗಳನ್ನು ಭಾರತದ ಒಕ್ಕೂಟಕ್ಕೆ ಸೇರಿಸಿದ್ದ ಪಟೇಲ್‌, ಆಧುನಿಕ ಭಾರತವನ್ನು ನಿರ್ಮಾಣ ಮಾಡುವುದರಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಹೀಗಾಗಿ ದೇಶದ ಏಕತೆಗಾಗಿ ಪಟೇಲ್‌ ನೀಡಿದ ಕೊಡುಗೆಯನ್ನು ಸ್ಮರಿಸಲು, ಅವರ ಜನ್ಮದಿನವಾದ ಅ.31‌ರಂದು 'ರಾಷ್ಟ್ರೀಯ ಏಕತಾ ದಿನ'ವನ್ನು ಆಚರಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 2014ರಲ್ಲಿ ತೀರ್ಮಾನ ತೆಗೆದುಕೊಂಡಿತ್ತು. ಅಂದಿನಿಂದ ಪ್ರತಿ ವರ್ಷ ಅ.31‌ರಂದು ದೇಶಾದ್ಯಂತ 'ರಾಷ್ಟ್ರೀಯ ಏಕತಾ ದಿನ'ವನ್ನು ಆಚರಿಸಲಾಗುತ್ತದೆ.

ವಿಶ್ವದ ಅತ್ಯಂತ ಎತ್ತರದ ಪ್ರತಿಮೆ ಸ್ಥಾಪನೆ:

ಪಟೇಲ್‌ ಅವರ ಗೌರವಾರ್ಥ ಗುಜರಾತ್‌ನ ಕೇವಾಡಿಯಾದಲ್ಲಿ 597 ಅಡಿ ಎತ್ತರದ ಬೃಹತ್‌ ಪ್ರತಿಮೆಯನ್ನು ನಿರ್ಮಿಸಲಾಗಿದೆ. ಇದನ್ನು 'ಏಕತಾ ಪ್ರತಿಮೆ' ಎಂದೇ ಕರೆಯಲಾಗುತ್ತದೆ. ಈ ಪ್ರತಿಮೆ ವಿಶ್ವದ ಅತ್ಯಂತ ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 201‌8ರ ಅ.31ರಂದು ಪಟೇಲ್ ಅವರ 143ನೇ ಜನ್ಮಜಯಂತಿಯಂದು ಪ್ರಧಾನಮಂತ್ರಿ ಮೋದಿ ಇದನ್ನು ಲೋಕಾರ್ಪಣೆ ಮಾಡಿದರು.

ಸರ್ದಾರ್‌ ಪಟೇಲ್‌, 1875ರ ಅ.31ರಂದು ಗುಜರಾತ್ ನ ನಾಡಿಯಾಡ್‌ನಲ್ಲಿ ಜನಿಸಿದರು. 1928ರಲ್ಲಿ ನಡೆದ ಬಾರ್ದೋಲಿ ಸತ್ಯಾಗ್ರಹದಲ್ಲಿ ಅವರಿಗೆ ಸರ್ದಾರ್ ಎಂಬ ಬಿರುದನ್ನು ನೀಡಲಾಯಿತು. ಸರ್ದಾರ್‌ ಎಂದರೆ ಮುಖ್ಯಸ್ಥ ಅಥವಾ ನಾಯಕ ಎಂದರ್ಥ. ಸ್ವಾತಂತ್ರ್ಯದ ಬಳಿಕ ಮೊದಲ ಮೂರು ವರ್ಷಗಳ ಕಾಲ, ಅವರು ಉಪ ಪ್ರಧಾನಮಂತ್ರಿ, ಗೃಹ ಸಚಿವ ಹಾಗೂ ಮಾಹಿತಿ ಮತ್ತು ರಾಜ್ಯಗಳ ಸಚಿವಾಲಯದ ಸಚಿವರಾಗಿ ಸೇವೆ ಸಲ್ಲಿಸಿದ್ದರು. 1950ರ ಡಿ.15ರಂದು ಮುಂಬೈಯಲ್ಲಿ ಕೊನೆಯುಸಿರೆಳೆದರು.

ಏಕತಾ ದಿನದ ಮಹತ್ವವೇನು?:

‌‌‌ಭಾರತದ ಉಳಿವು ಒಗ್ಗಟ್ಟಿನಲ್ಲಿದೆ. ರಾಷ್ಟ್ರೀಯ ಏಕತಾ ದಿನಾಚರಣೆ ರಾಷ್ಟ್ರದ ಏಕತೆ, ಭದ್ರತೆ ಮತ್ತು ಸಮಗ್ರತೆಗೆ ಸಂಭಾವ್ಯ ಅಪಾಯಗಳನ್ನು ತಡೆಯಲು ಪ್ರೇರಕ ಶಕ್ತಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.