ಬೆಂಗಳೂರು: ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಲು ದೇಶದ ಮತದಾರರನ್ನು ಉತ್ತೇಜಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ಜನವರಿ 25 ಅನ್ನು 'ರಾಷ್ಟ್ರೀಯ ಮತದಾರರ ದಿನ'ವನ್ನಾಗಿ ಆಚರಿಸಲಾಗುತ್ತದೆ. ಅದರಂತೆ ದೇಶದಲ್ಲಿ ಇಂದು (ಗುರುವಾರ) 14ನೇ ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಗುತ್ತಿದೆ.
ರಾಷ್ಟ್ರೀಯ ಮತದಾರರ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ವರ್ಚುವಲ್ ಮೂಲಕ ಮೊದಲ ಬಾರಿ ಮತ ಚಲಾಯಿಸುವ ಒಂದು ಕೋಟಿಗೂ ಹೆಚ್ಚು ಯುವ ಮತದಾರರೊಂದಿಗೆ ಸಂವಾದ ನಡೆಸಲಿದ್ದಾರೆ.
ಮೊಟ್ಟಮೊದಲ 'ರಾಷ್ಟ್ರೀಯ ಮತದಾರರ ದಿನ'ವನ್ನು 2011 ಜನವರಿ 25ರಂದು ಆಚರಿಸಲಾಯಿತು. ಭಾರತದ ಚುನಾವಣಾ ಆಯೋಗದ ಸಂಸ್ಥಾಪನಾ ದಿನ(ಜನವರಿ 25, 1950)ವನ್ನು ಗುರುತಿಸಲು ಹಾಗೂ ಹೆಚ್ಚಿನ ಯುವ ಮತದಾರರು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಉತ್ತೇಜಿಸಲು ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಕೇಂದ್ರ ಸರ್ಕಾರ ಕಾನೂನು ಸಚಿವಾಲಯದ ಪ್ರಸ್ತಾವನೆಯನ್ನು ಅನುಮೋದಿಸಿತ್ತು.
ಈ ವರ್ಷದ ಥೀಮ್: 'ಮತದಾನಕ್ತಿಂತ ಹೆಚ್ಚು ಯಾವುದೂ ಇಲ್ಲ, ನಾನು ಖಂಡಿತವಾಗಿ ಮತದಾನ ಮಾಡುತ್ತೇನೆ' ಎಂಬುವುದಾಗಿದೆ. ಇದು ಕಳೆದ ವರ್ಷದ ಥೀಮ್ನ ಮುಂದುವರಿಕೆಯಾಗಿದೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಈ ವರ್ಷ ನವದೆಹಲಿಯಲ್ಲಿ ಭಾರತದ ಚುನಾವಣಾ ಆಯೋಗ ಆಯೋಜಿಸಿರುವ ರಾಷ್ಟ್ರೀಯ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಕೇಂದ್ರ ಕಾನೂನು ಮತ್ತು ನ್ಯಾಯ ಖಾತೆ ರಾಜ್ಯ ಸಚಿವ (ಸ್ವತಂತ್ರ ಉಸ್ತುವಾರಿ) ಅರ್ಜುನ್ ರಾಮ್ ಮೇಘವಾಲ್ ಅವರು ಗೌರವ ಅತಿಥಿಯಾಗಿ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಚುನಾವಣಾ ನಿರ್ವಹಣಾ ಸಂಸ್ಥೆಗಳ ಮುಖ್ಯಸ್ಥರು ಮತ್ತು ಪ್ರತಿನಿಧಿಗಳೂ ಭಾಗವಹಿಸಲಿದ್ದಾರೆ.
ಭಾರತದ ಮಾದರಿಯನ್ನು ಅನುಕರಿಸಿ, ಶ್ರೀಲಂಕಾ, ಪಾಕಿಸ್ತಾನ, ನೇಪಾಳ ಮತ್ತು ಭೂತಾನ್ ಸೇರಿದಂತೆ ಇತರ ದೇಶಗಳು ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲು ಪ್ರಾರಂಭಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.