ADVERTISEMENT

ಸಲ್ಮಾನ್ ಕೊಲೆಗೆ ₹25 ಲಕ್ಷ ನಗದು, ಪಾಕಿಸ್ತಾನದಿಂದ AK 47 ಖರೀದಿ: ಚಾರ್ಜ್‌ಶೀಟ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಅಕ್ಟೋಬರ್ 2024, 14:28 IST
Last Updated 17 ಅಕ್ಟೋಬರ್ 2024, 14:28 IST
ನಟ ಸಲ್ಮಾನ್ ಖಾನ್
ನಟ ಸಲ್ಮಾನ್ ಖಾನ್    

ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ಮಹಾರಾಷ್ಟ್ರದ ಪನ್ವೇಲ್‌ನಲ್ಲಿರುವ ಅವರ ತೋಟದ ಬಳಿ ಕೊಲೆ ಮಾಡಲು ವ್ಯಕ್ತಿಯೊಬ್ಬನಿಗೆ ₹25 ಲಕ್ಷ ನಗದು ಹಾಗೂ ಪಾಕಿಸ್ತಾನದಿಂದ ಎ.ಕೆ. 47 ಬಂದೂಕು ತರಿಸಿ ಕೊಡಲಾಗಿತ್ತು ಎಂಬ ಅಂಶವನ್ನು ನವಿ ಮುಂಬೈ ಪೊಲೀಸರು ಆರೋಪ ಪಟ್ಟಿಯಲ್ಲಿ ಹೇಳಿದ್ದಾರೆ.

ಆರೋಪ ಪಟ್ಟಿಯಲ್ಲಿ ಒಟ್ಟು ಐವರನ್ನು ಪೊಲೀಸರು ಹೆಸರಿಸಿದ್ದಾರೆ. ಸದ್ಯ ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿ ನೇತೃತ್ವದ ಗುಂಪು ಈ ಸುಪಾರಿ ನೀಡಿತ್ತು. ಇವರು ಪಾಕಿಸ್ತಾನದಿಂದ ಎ.ಕೆ. 47, ಎ.ಕೆ. 92 ಹಾಗೂ ಎಂ 16 ಬಂದೂಕುಗಳನ್ನು ಹಾಗು ಟರ್ಕಿಯ ಝಿಂಗಾನಾ ಪಿಸ್ತೂಲ್‌ ಅನ್ನು ಖರೀದಿಸಲು ಸಿದ್ಧತೆ ನಡೆಸಿದ್ದರು. ಇದೇ ಮಾದರಿಯ ಪಿಸ್ತೂಲ್‌ ಪಂಜಾಬ್‌ನ ಗಾಯಕ ಸಿಧು ಮೂಸೆವಾಲಾ ಹತ್ಯೆಯಲ್ಲಿ ಬಳಸಲಾಗಿತ್ತು. 

ಸಲ್ಮಾನ್ ಖಾನ್ ಹತ್ಯೆ ಮಾಡುವ ಸಲುವಾಗಿಯೇ 18 ವರ್ಷಕ್ಕಿಂತಲೂ ಕಡಿಮೆ ವಯಸ್ಸಿನ ಬಾಲಕರನ್ನು ಆರೋಪಿಗಳು ಸಜ್ಜುಗೊಳಿಸಿದ್ದರು. ಇವರೆಲ್ಲರೂ ಪುಣೆ, ರಾಯಗಡ, ನವಿ ಮುಂಬೈ, ಠಾಣೆ ಹಾಗೂ ಗುಜರಾತ್‌ನಲ್ಲಿ ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ADVERTISEMENT

ಸಲ್ಮಾನ್ ಖಾನ್ ಅವರ ಚಲನವಲನದ ಮೇಲೆ ನಿಗಾ ಇಡಲು ಬಹುತೇಕರನ್ನು ಈ ತಂಡ ನಿಯೋಜಿಸಿತ್ತು. ಬಾಂದ್ರಾದಲ್ಲಿರುವ ಮನೆ, ಪನ್ವೇಲ್‌ನಲ್ಲಿರುವ ತೋಟ ಹಾಗೂ ಗೋರೆಗಾಂವ್‌ನಲ್ಲಿರುವ ಫಿಲ್ಮ್‌ ಸಿಟಿಯಲ್ಲಿ ಈ ತಂಡದ ಸದಸ್ಯರು ನಿಗಾ ಇರಿಸಿದ್ದರು. ಸಲ್ಮಾನ್ ಹತ್ಯೆಗೆ ಈ ತಂಡ 2023ರ ಆಗಸ್ಟ್‌ ಹಾಗೂ 2024ರ ಏಪ್ರಿಲ್‌ನಲ್ಲಿ ಪ್ರಯತ್ನ ನಡೆಸಿತ್ತು ಎಂದು ಆರೋಪಪಟ್ಟಿಯಲ್ಲಿ ಹೇಳಲಾಗಿದೆ.

ಹರಿಯಾಣದ ಪಾಣಿಪತ್‌ ಬಳಿ ಬಂಧಿಸಲಾದ ಸುಕ್ಖಾ ಎಂಬಾತನಿಂದ ಮಹತ್ವದ ಮಾಹಿತಿ ಲಭ್ಯವಾಗಿದ್ದು, ಶೂಟರ್‌ ಅಜಯ್ ಕಶ್ಯಪ್‌ ಹಾಗೂ ಇತರ ನಾಲ್ವರು ಈ ಯೋಜನೆಯಲ್ಲಿ ಭಾಗಿಯಾಗಿದ್ದರು. ಸಲ್ಮಾನ್‌ಗೆ ಇರುವ ಬಿಗಿ ಭದ್ರತೆ ಹಾಗೂ ಬುಲೆಟ್‌ ಪ್ರೂಫ್‌ ಕಾರನ್ನು ಭೇದಿಸಿ ಹತ್ಯೆಗಯ್ಯಲು ಈ ತಂಡ ಯೋಜನೆ ರೂಪಿಸಿತ್ತು ಎಂದು ಪೊಲೀಸರು ನ್ಯಾಯಾಲಯಕ್ಕೆ ಹೇಳಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಇದಕ್ಕಾಗಿ ಪಾಕಿಸ್ತಾನದಲ್ಲಿರುವ ಬಂದೂಕು ಪೂರೈಕೆದಾರರನ್ನು ವಿಡಿಯೊ ಕರೆ ಮೂಲಕ ಸಂಪರ್ಕಿಸಿತ್ತು. ಬಂದೂಕು ಖರೀದಿಗೂ ಮುನ್ನ ಅರ್ಧದಷ್ಟು ಹಣ ನೀಡುವುದು, ಪೂರೈಕೆ ನಂತರ ಉಳಿದ ಮೊತ್ತ ಕೊಡುವ ಒಪ್ಪಂದ ನಡೆದಿತ್ತು. ಕೆನಡಾದಲ್ಲಿರುವ ಗ್ಯಾಂಗ್‌ಸ್ಟರ್‌ ಗೋಲ್ಡಿ ಬ್ರಾರ್‌ ಹಾಗೂ ಲಾರೆನ್ಸ್ ಬಿಷ್ಣೋಯಿ ಸೋದರ ಅನ್ಮೋಲ್ ಬಿಷ್ಣೋಯಿ ಆದೇಶವನ್ನು ಇವರು ಕಾಯುತ್ತಿದ್ದರು ಎಂದು ಆರೋಪ ಪಟ್ಟಿಯಲ್ಲಿ ಹೇಳಲಾಗಿದೆ.

ಸಲ್ಮಾನ್ ಖಾನ್ ಹತ್ಯೆಗೈದು ಈ ತಂಡವು ಶ್ರೀಲಂಕಾಗೆ ದೋಣಿ ಮೂಲಕ ತಲುಪುವುದು. ಅಲ್ಲಿಂದ ಮುಂದೆ ಭಾರತದ ಪೊಲೀಸರು ತಲುಪಲಾಗದ ರಾಷ್ಟ್ರಕ್ಕೆ ಪಲಾಯನ ಮಾಡುವುದು ಇವರ ಯೋಜನೆಯಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.

ಎನ್‌ಸಿಪಿ (ಅಜಿತ್ ಪವಾರ್ ಬಣ) ಮುಖಂಡ ಬಾಬಾ ಸಿದ್ಧೀಕಿ ಹತ್ಯೆ ನಂತರ ಬಾಂದ್ರಾದಲ್ಲಿರುವ ಸಲ್ಮಾನ್ ಖಾನ್ ಅವರ ಮನೆಗೆ ಭದ್ರತೆ ಹೆಚ್ಚಿಸಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.