ADVERTISEMENT

ಸಿಧು ರಾಜೀನಾಮೆ ‘ನಾಟಕ’: ಅಕಾಲಿದಳ

ಪಿಟಿಐ
Published 14 ಜುಲೈ 2019, 16:20 IST
Last Updated 14 ಜುಲೈ 2019, 16:20 IST
   

ಚಂಡಿಗಡ: ಪಂಜಾಬ್‌ ಸಚಿವ ಸಂಪುಟಕ್ಕೆ ನವಜೋತ್‌ ಸಿಂಗ್‌ ಸಿಧು ನೀಡಿದ್ದಾರೆ ಎನ್ನಲಾದ ರಾಜೀನಾಮೆಯನ್ನು ‘ನಾಟಕ’ ಎಂದು ಕರೆದಿರುವ ಪ್ರತಿಪಕ್ಷ ಅಕಾಲಿದಳ, ಮುಖ್ಯಮಂತ್ರಿ ಬದಲಾಗಿ ರಾಹುಲ್ ಗಾಂಧಿಗೆ ರಾಜೀನಾಮೆ ಪತ್ರ ಕಳಿಸಿದ್ದರ ಔಚಿತ್ಯವೇನು ಎಂದು ಪ್ರಶ್ನಿಸಿದೆ.

‘ಸಿಧು ಅವರು ರಾಹುಲ್ ಗಾಂಧಿಗೆ ರಾಜೀನಾಮೆ ಪತ್ರ ರವಾನಿಸಿದ್ದರ ಹಿಂದಿನ ತರ್ಕ ಏನು ಎಂದು ಅರಿಯಲು ನಾನು ವಿಫಲನಾಗಿದ್ದೇನೆ’ ಎಂದು ಶಿರೋಮಣಿ ಅಕಾಲಿದಳದ ಮುಖ್ಯಸ್ಥ ಸುಖ್‌ಬೀರ್ ಸಿಂಗ್ ಬಾದಲ್ ಹೇಳಿದ್ದಾರೆ.

‘ರಾಹುಲ್‌ ಕಚೇರಿಯಲ್ಲಿ ರಾಜೀನಾಮೆ ಪತ್ರ ಹಾಗೆಯೇ ಇರುತ್ತದೆ ಎಂದು ಸಿಧುಗೆ ಗೊತ್ತಿದೆ. ತಮಗೆ ಸಿಕ್ಕಿರುವ ಮಂತ್ರಿಗಿರಿ ಸೌಲಭ್ಯಗಳನ್ನು ಅವರು ಅನುಭವಿಸುತ್ತಾ ಇರುತ್ತಾರೆ’ ಎಂದು ಅವರು ವ್ಯಂಗ್ಯ ಮಾಡಿದ್ದಾರೆ.

ADVERTISEMENT

ಸಿಧು ತಮ್ಮ ರಾಜೀನಾಮೆಯನ್ನು ಪಂಜಾಬ್ ರಾಜ್ಯಪಾಲ ಅಥವಾ ಮುಖ್ಯಮಂತ್ರಿಗೆ ಸಲ್ಲಿಸಬೇಕು ಎಂದು ಬಿಜೆಪಿ ಮುಖಂಡ ತರುಣ್ ಚುಗ ಹೇಳಿದ್ದಾರೆ.

ಭಿನ್ನಾಭಿಪ್ರಾಯ:ಭಿನ್ನಾಭಿಪ್ರಾಯ ಬಗೆಹರಿಸಲುಕಾಂಗ್ರೆಸ್‌ ಮುಖಂಡ ಅಹ್ಮದ್ ಪಟೇಲ್‌ಪ್ರಯತ್ನಿಸಿದ್ದರು. ಭಿನ್ನಮತ ಶಮನದ ನಿರೀಕ್ಷೆಯಿಂದಲೇ ರಾಜೀನಾಮೆ ಕ್ರಮ ಬಹಿರಂಗಪಡಿಸಲು ಸಿಧು ಒಂದು ತಿಂಗಳು ತಡಮಾಡಿದರು ಎನ್ನಲಾಗಿದೆ.

ರಾಹುಲ್ ಭೇಟಿ ಮಾಡಿದ್ದನ್ನು ಜೂನ್‌ ತಿಂಗಳಿನಲ್ಲಿ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದ ಸಿಧು, ಪ್ರಿಯಾಂಕಾ ಗಾಂಧಿ, ಅಹ್ಮದ್ ಪಟೇಲ್‌ ಜತೆಗಿದ್ದ ಚಿತ್ರವನ್ನೂ ಹಂಚಿಕೊಂಡಿದ್ದರು. ಆ ನಂತರ ಅವರು ಸಾಮಾಜಿಕ ಜಾಲತಾಣಗಳನ್ನು ಬಳಸಿರಲಿಲ್ಲ.

ಖಾತೆಗಳ ಮರುಹಂಚಿಕೆ ಪ್ರಕ್ರಿಯೆಯಲ್ಲಿ ಸಿಧು ಅವರ ಜೊತೆಗೆ ಇತರೆ ಕೆಲವು ಸಚಿವರ ಖಾತೆಗಳನ್ನು ಬದಲಿಸಲಾಗಿತ್ತು.ಇದರಿಂದ ನೊಂದಿದ್ದ ಅವರು ಹೊಸ ಖಾತೆಯ ಜವಾಬ್ದಾರಿ ಹೊತ್ತುಕೊಂಡಿರಲಿಲ್ಲ. ಒಂದು ತಿಂಗಳಿನಿಂದ ಅವರು ಮಾಧ್ಯಮಗಳಿಂದಲೂ ದೂರ ಉಳಿದಿದ್ದರು.

ಜೊತೆಗೆ ಅಮೃತಸರ ಪೂರ್ವ ಕ್ಷೇತ್ರವನ್ನು ಪ್ರತಿನಿಧಿಸುವ ಸಿಧು ಅವರನ್ನು ಖಾತೆಗಳ ಮರುಹಂಚಿಕೆಯ ಎರಡು ದಿನದ ನಂತರ ಮುಖ್ಯಮಂತ್ರಿ ರಚಿಸಿದ್ದ ಸಮಾಲೋಚನಾ ತಂಡದಿಂದಲೂ ಮುಖ್ಯಮಂತ್ರಿ ಕೈಬಿಟ್ಟಿದ್ದರು.

ಬಿಜೆಪಿಯಿಂದ ವಲಸೆ ಬಂದಿದ್ದರು: ಮೊದಲು ಬಿಜೆಪಿಯಲ್ಲಿದ್ದ ಅವರು 2017ರಲ್ಲಿ ಪಂಜಾಬ್‌ ವಿಧಾನಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್‌ಗೆ ಬಂದಿದ್ದರು. ಆಗಿನಿಂದಲೂ ಮುಖ್ಯಮಂತ್ರಿ ಜೊತೆಗೆ ವೈಮನಸ್ಯವನ್ನು ಹೊಂದಿದ್ದರು. ‘ಸಿಧು ತಮ್ಮ ಖಾತೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸದಿರುವುದೇ ನಗರ ಪ್ರದೇಶದಲ್ಲಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋಲಿಗೆ ಕಾರಣ’ ಎಂದು ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಬಹಿರಂಗವಾಗಿಯೇ ವಾಗ್ದಾಳಿ ನಡೆಸಿದ್ದರು.

‘ನಾನು ಚೆನ್ನಾಗಿಯೇ ಕಾರ್ಯ ನಿರ್ವಹಿಸಿದ್ದೇನೆ. ಆದರೆ, ನನ್ನ ಖಾತೆಯನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸಿದ್ದಾರೆ’ ಎಂದು ಸಿಧು ಇದಕ್ಕೆ ಪ್ರತ್ಯುತ್ತರವನ್ನು ನೀಡಿದ್ದರು. ಆ ನಂತರವೂ ಸಿಧು ಮತ್ತು ಮುಖ್ಯಮಂತ್ರಿ ನಡುವೆ ಅನೇಕ ಬಾರಿ ಬಹಿರಂಗವಾಗಿ ವಾಕ್ಸಮರ ನಡೆದಿತ್ತು.

ಕಳೆದ ಬಾರಿ ಹೈದರಾಬಾದ್‌ನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಸಿಧು, ‘ಕಾಂಗ್ರೆಸ್ ಮುಖ್ಯಸ್ಥ ರಾಹುಲ್‌ ಗಾಂಧಿ ನನ್ನ ನಾಯಕ. ಅವರು, ನಾಯಕರ (ಅಮರಿಂದರ್ ಸಿಂಗ್) ನಾಯಕ’ ಎಂದು ತಮ್ಮದೇ ಶೈಲಿಯಲ್ಲಿ ಗುಡುಗಿದ್ದರು.

ಇನ್ನೊಂದೆಡೆ, ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸಿಧು ಅಲ್ಲಿನ ಸೇನಾ ಮುಖ್ಯಸ್ಥರನ್ನು ಆಲಿಂಗನ ಮಾಡಿದ್ದರು ಎಂಬುದನ್ನು ಅಮರಿಂದರ್ ಸಿಂಗ್‌ ಕಟುವಾಗಿ ತರಾಟೆಗೆ ತೆಗೆದುಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.