ನವದೆಹಲಿ: ಕಾಂಗ್ರೆಸ್ ಶಾಸಕ ನವಜೋತ್ ಸಿಂಗ್ ಸಿಧು ಅವರ ವಿರುದ್ಧ ಶಿರೋಮಣಿ ಅಕಾಲಿದಳದ (ಎಸ್‌ಎಡಿ) ಅಧ್ಯಕ್ಷ ಸುಖ್‌ಬೀರ್ ಸಿಂಗ್ ಬಾದಲ್, 'ದಾರಿ ತಪ್ಪಿದ ಕ್ಷಿಪಣಿ' ಎಂದು ಕಿಡಿಕಾರಿದ್ದಾರೆ.
ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ವಿರುದ್ಧ ಭಿನ್ನಾಭಿಪ್ರಾಯ ಹೊಂದಿರುವ ಸಿಧು ವಿರುದ್ಧ ಸುಖ್‌ಬೀರ್ ಸಿಂಗ್ ಬಾದಲ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ:ಪ್ರಿಯಾಂಕಾ ಗಾಂಧಿ ಭೇಟಿಯಾದ ನವಜೋತ್ ಸಿಂಗ್ ಸಿಧು
'ನವಜೋತ್ ಸಿಂಗ್ ಸಿಧು ದಾರಿ ತಪ್ಪಿದ ಕ್ಷಿಪಣಿಯಾಗಿದ್ದು, ನಿಯಂತ್ರಣದಲ್ಲಿಲ್ಲ. ಸ್ವತಃ ಅವರತ್ತ ಸೇರಿದಂತೆ ಯಾವುದೇ ದಿಕ್ಕಿಗೂ ಬೇಕಿದ್ದರೂ ಅಪ್ಪಳಿಸಬಹುದು' ಎಂದು ಎಎನ್‌ಐ ಸುದ್ದಿ ಸಂಸ್ಥೆಗೆ ಬಾದಲ್ ತಿಳಿಸಿದ್ದಾರೆ.
'ಈಗ ಪಂಜಾಬ್‌ಗೆ ನಟನೆ ಮಾಡುವ ವ್ಯಕ್ತಿಯ ಅಗತ್ಯವಿಲ್ಲ. ಬದಲಾಗಿ ರಾಜ್ಯದ ಅಭಿವೃದ್ಧಿ ಬಗ್ಗೆ ಯೋಚಿಸುವ ವ್ಯಕ್ತಿಯ ಅಗತ್ಯವಿದೆ' ಎಂದವರು ಹೇಳಿದ್ದಾರೆ.
ಏತನ್ಮಧ್ಯೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಬುಧವಾರ ಭೇಟಿಯಾಗಿರುವ ಸಿಧು, ಸುದೀರ್ಘ ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ. 2022ರಲ್ಲಿ ಪಂಜಾಬ್‌ನ ವಿಧಾನಸಭೆ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ರಾಜ್ಯದಲ್ಲಿ ಆಂತರಿಕ ಕಲಹ ಹಾಗೂಪಕ್ಷದ ಬಲವರ್ಧನೆಗೆ ಸಂಬಂಧಿಸಿದಂತೆ ವಿವಿಧ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರೊಂದಿಗೆ ಭಿನ್ನಾಭಿಪ್ರಾಯದ ಸಂಬಂಧ ಸಿಧು ಬಹಿರಂಗ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಈ ಚರ್ಚೆ ಹೆಚ್ಚಿನ ಮಹತ್ವ ಗಿಟ್ಟಿಸಿಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.