ADVERTISEMENT

ನಾನು ಪ್ರದರ್ಶನ ಬೊಂಬೆಯಲ್ಲ: ಪಂಜಾಬ್‌ ಸಿಎಂ ವಿರುದ್ಧ ನವಜೋತ್ ಸಿಂಗ್ ಸಿಧು ಕಿಡಿ

ಡೆಕ್ಕನ್ ಹೆರಾಲ್ಡ್
Published 21 ಜೂನ್ 2021, 9:33 IST
Last Updated 21 ಜೂನ್ 2021, 9:33 IST
ನವಜೋತ್ ಸಿಂಗ್ ಸಿಧು (ಪಿಟಿಐ ಸಂಗ್ರಹ ಚಿತ್ರ)
ನವಜೋತ್ ಸಿಂಗ್ ಸಿಧು (ಪಿಟಿಐ ಸಂಗ್ರಹ ಚಿತ್ರ)   

ಚಂಡೀಗಡ: ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ವಿರುದ್ಧ ಅಮೃತಸರ ಪೂರ್ವ ಕ್ಷೇತ್ರದ ಕಾಂಗ್ರೆಸ್ ಶಾಸಕ ನವಜೋತ್ ಸಿಂಗ್ ಸಿಧು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿವಿಧ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಅವರು, ಚುನಾವಣೆ ಗೆಲ್ಲುವುದಕ್ಕಾಗಿ ಮಾತ್ರ ಬಳಸಿಕೊಂಡು ಆ ಬಳಿಕ ಕಪಾಟಿನಲ್ಲಿಡುವ ಪ್ರದರ್ಶನ ಬೊಂಬೆಯಲ್ಲ ನಾನು ಎಂದು ಹೇಳಿದ್ದಾರೆ.

ಸಿಧು ಅವರು ರಾಜ್ಯದಲ್ಲಿ ಪಕ್ಷದ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಎನ್ನಲಾಗಿದೆ. ಇವರು ಮುಖ್ಯಮಂತ್ರಿ ವಿರುದ್ಧ ಬಹಿರಂಗ ವಾಗ್ದಾಳಿ ಮಾಡುವುದರೊಂದಿಗೆ ಪಕ್ಷದ ರಾಜ್ಯ ಘಟಕದಲ್ಲಿನ ಭಿನ್ನಮತ ಬಹಿರಂಗಗೊಂಡಿದೆ. ಪಂಜಾಬ್‌ನಲ್ಲಿ 2022ರ ಆರಂಭದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.

‘ನನ್ನನ್ನು ಪ್ರಚಾರಕ್ಕೆ ಕರೆದುಕೊಂಡು ಹೋಗಿ, ಚುನಾವಣೆಯಲ್ಲಿ ಗೆಲುವು ಸಾಧಿಸಿ ಆಮೇಲೆ ಕಪಾಟಿನಲ್ಲಿಡಲು ನಾನು ಪ್ರದರ್ಶನ ಬೊಂಬೆಯಲ್ಲ. ನೀವು ಏನು ಮಾಡುತ್ತಿದ್ದೀರಿ ಎಂಬುದನ್ನು ನೋಡಿಕೊಂಡು ಕುಳಿತುಕೊಳ್ಳುವುದು ನನ್ನ ಕೆಲಸವಲ್ಲ. ಸ್ವಾರ್ಥಿಗಳು ಮತ್ತು ಪಟ್ಟಭದ್ರ ಹಿತಾಸಕ್ತಿಗಳು ರಾಜ್ಯವನ್ನು ಅತಿಕ್ರಮಿಸುತ್ತಿವೆ. ಇದು ನನಗೆ ಸಹ್ಯವಲ್ಲ’ ಎಂದು ಸಿಂಗ್ ಹೇಳಿದ್ದಾರೆ.

2019ರ ಲೋಕಸಭೆ ಚುನಾವಣೆಯಲ್ಲಿ ಪಂಜಾಬ್‌ನ ನಗರ ಪ್ರದೇಶಗಳಲ್ಲಿ ಕಾಂಗ್ರೆಸ್‌ಗೆ ಸೋಲಾಗಿತ್ತು. ಇದಕ್ಕೆ ಸಿಧು ಅವರ ವೈಫಲ್ಯವೇ ಕಾರಣ ಎಂದು ಆರೋಪಿಸಿದ್ದ ಅಮರಿಂದರ್ ಸಿಂಗ್, ಪ್ರಮುಖ ಖಾತೆಗಳನ್ನು ಅವರ ಬಳಿಯಿಂದ ವಾಪಸ್ ಪಡೆದಿದ್ದರು. ಬಳಿಕ ಸಚಿವ ಸ್ಥಾನಕ್ಕೆ ಸಿಧು ರಾಜೀನಾಮೆ ನೀಡಿದ್ದರು.

ಪಕ್ಷದ ಆಂತರಿಕ ಕಲಹ ಸರಿಪಡಿಸಲು ಕಾಂಗ್ರೆಸ್ ಹೈಕಮಾಂಡ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಮೂವರು ಸದಸ್ಯರ ಸಮಿತಿ ರಚಿಸಿತ್ತು. ಈ ಸಮಿತಿಯು ಸಿಧು ಅವರ ಪರ ನಿಲುವು ತಳೆದಿದ್ದಲ್ಲದೆ ಅವರಿಗೆ ಅವಕಾಶ ಕಲ್ಪಿಸಿ ಸಂಪುಟ ಪುನಾರಚನೆ ಮಾಡುವಂತೆ ಸೂಚಿಸಿತ್ತು.

2015ರಲ್ಲಿ ಗುರು ಗ್ರಂಥ ಸಾಹೀಬ್ ಅಪವಿತ್ರಗೊಳಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಕಾಂಗ್ರೆಸ್‌ನ ಪಂಜಾಬ್‌ ಘಟಕದಲ್ಲಿ ಮೂಡಿದ್ದ ಒಡಕು ಬಳಿಕ ಮತ್ತಷ್ಟು ಹೆಚ್ಚಾಗಿತ್ತು. 2019ರ ಲೋಕಸಭೆ ಚುನಾವಣೆಯಲ್ಲಿನ ಸೋಲು ಪಕ್ಷದೊಳಗೆ ಮತ್ತಷ್ಟು ಭಿನ್ನಮತಕ್ಕೆ ಕಾರಣವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.