ADVERTISEMENT

ಕಾಂಗ್ರೆಸ್‌ಗೆ ಕನ್ಹಯ್ಯಾ: ಪಂಜಾಬ್‌ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನ ಬಿಟ್ಟ ಸಿಧು

ಪಂಜಾಬ್‌ ಘಟಕದಲ್ಲಿ ಮತ್ತೆ ಬಿಕ್ಕಟ್ಟು ತೀವ್ರ: ಸಚಿವರಿಬ್ಬರ ರಾಜೀನಾಮೆ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2021, 18:21 IST
Last Updated 28 ಸೆಪ್ಟೆಂಬರ್ 2021, 18:21 IST
   

ನವದೆಹಲಿ: ಕಾಂಗ್ರೆಸ್‌ ಪ‍ಕ್ಷಕ್ಕೆ ಮಂಗಳವಾರವು ಏಕಕಾಲಕ್ಕೆ ಶುಭ ಮತ್ತು ಅಶುಭ ಎರಡೂ ಆಗಿ ಪರಿಣಮಿಸಿದೆ. ಯುವ ನಾಯಕ ಕನ್ಹಯ್ಯಾ ಕುಮಾರ್‌ ಅವರು ಕಾಂಗ್ರೆಸ್‌ಗೆ ಸೇರ್ಪಡೆಯಾದರು. ಅದೇ ಹೊತ್ತಿಗೆ, ಪಂಜಾಬ್ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ನವಜೋತ್ ಸಿಂಗ್ ಸಿಧು ರಾಜೀನಾಮೆ ಕೊಟ್ಟರು.

ಕ್ಯಾಪ್ಟನ್‌ ಅಮರಿಂದರ್‌ ಸಿಂಗ್‌ ಅವರನ್ನು ಪಂಜಾಬ್‌ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿದ ಕೆಲವೇ ದಿನಗಳಲ್ಲಿ, ಸಿಧು ರಾಜೀನಾಮೆ ಕೊಟ್ಟಿದ್ದಾರೆ. ಇದರೊಂದಿಗೆ ಪಂಜಾಬ್‌ ಕಾಂಗ್ರೆಸ್‌ ಪಕ್ಷದೊಳಗಿನ ಬಿಕ್ಕಟ್ಟು ಮತ್ತೆ ತೀವ್ರಗೊಂಡಿದೆ. ಪಂಜಾಬ್‌ ವಿಧಾನಸಭೆಗೆ ಕೆಲವೇ ತಿಂಗಳಲ್ಲಿ ಚುನಾವಣೆ ನಡೆಯಲಿದೆ.

ಸಿಧು ಬಣದಲ್ಲಿ ಗುರುತಿಸಿಕೊಂಡಿರುವ ಸಚಿವರಾದ ರಜಿಯಾ ಸುಲ್ತಾನಾ ಮತ್ತು ಪರ್ಗತ್‌ ಸಿಂಗ್‌ ಅವರು ರಾಜೀನಾಮೆ ಕೊಟ್ಟಿದ್ದಾರೆ. ಪ್ರದೇಶ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಯೋಗಿಂದರ್‌ ಧಿಂಗ್ರಾ ಅವರೂ ಸ್ಥಾನತೊರೆದಿದ್ದಾರೆ. ಈ ನಡುವೆ, ಅಮರಿಂದರ್‌ ಅವರು ಬಿಜೆಪಿ ಮುಖಂಡರನ್ನು ದೆಹಲಿಯಲ್ಲಿ ಭೇಟಿ ಮಾಡಲಿದ್ದಾರೆ ಎಂಬ ವದಂತಿಯೂ ಕೇಳಿ ಬಂದಿತ್ತು. ಆದರೆ, ಅದನ್ನು ಅಮರಿಂದರ್‌ ಆಪ್ತರು ಅಲ್ಲಗಳೆದಿದ್ದಾರೆ.

ADVERTISEMENT

ಅಮರಿಂದರ್‌ ಸಿಂಗ್‌ ಅವರ ಬಲವಾದ ವಿರೋಧ ಇದ್ದರೂ ಸಿಧು ಅವರನ್ನು ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ಜುಲೈ
ನಲ್ಲಿ ನೇಮಿಸಲಾಗಿತ್ತು. ಪ್ರಿಯಾಂಕಾ ಮತ್ತು ರಾಹುಲ್‌ ಗಾಂಧಿಯವರ ಬೆಂಬಲದಿಂದಾಗಿ ಸಿಧುಗೆ ಹುದ್ದೆ ಸಿಕ್ಕಿತ್ತು. ಸಿಧು ಅವರನ್ನು ಅಧ್ಯಕ್ಷರನ್ನಾಗಿ ಮಾಡಿದ ರಾಹುಲ್‌ ಮತ್ತು ಪ್ರಿಯಾಂಕಾ ಅವರು ‘ಅನನುಭವಿಗಳು’ ಎಂದು ಅಮರಿಂದರ್‌ ಹೇಳಿದ್ದರು. ಸಿಧು ರಾಜೀನಾಮೆಗೆ ಅವರ ಪ್ರತಿಕ್ರಿಯೆ ಹೀಗಿದೆ: ‘ನಾನು ನಿಮಗೆ ಹೇಳಿದ್ದೆ... ಪಂಜಾಬ್‌ನಂತಹ ಗಡಿ ರಾಜ್ಯಕ್ಕೆ ಸ್ಥಿರ ಬುದ್ಧಿ ಇಲ್ಲದ ವ್ಯಕ್ತಿ ಅರ್ಹ ಅಲ್ಲ’.

ಒಳಸ್ಫೋಟ ಮುಂದುವರಿದರೆ ಕಾಂಗ್ರೆಸ್‌ ಪಕ್ಷವು ನಿಜವಾದ ಬಿಕ್ಕಟ್ಟಿಗೆ ಒಳಗಾಗಲಿದೆ. ಪಕ್ಷ ವಿಭಜನೆಯ ಹಂತಕ್ಕೆ ಹೋದರೆ, ಆಡಳಿತ ಪಕ್ಷದ ಪರಿಸ್ಥಿತಿ ಇನ್ನಷ್ಟು ಸಂಕೀರ್ಣಗೊಳ್ಳಲಿದೆ.

ಯುವ ಮುಖಂಡರ ಭೇಟಿಯಾದ ರಾಹುಲ್‌

ಯುವ ನಾಯಕ ಕನ್ಹಯ್ಯಾ ಕುಮಾರ್‌ ಮತ್ತು ಗುಜರಾತ್‌ನ ಪಕ್ಷೇತರ ಶಾಸಕ ಜಿಗ್ನೇಶ್‌ ಮೆವಾನಿ ಅವರುಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ದೆಹಲಿಯ ಶಹೀದ್‌ ಭಗತ್‌ ಸಿಂಗ್‌ ಪಾರ್ಕ್‌ನಲ್ಲಿ ಮಂಗಳವಾರ ಸಂಜೆ ಭೇಟಿಯಾದರು. ಭಗತ್‌ ಸಿಂಗ್‌ ಜನ್ಮದಿನದ ಸಂದರ್ಭದಲ್ಲಿ ಈ ಭೇಟಿ ನಡೆದಿದೆ. ಬಳಿಕ ಇಬ್ಬರೂ ಕಾಂಗ್ರೆಸ್‌ ಕೇಂದ್ರ ಕಚೇರಿಗೆ ಭೇಟಿ ಕೊಟ್ಟು ಕನ್ಹಯ್ಯಾ ಅವರು ಪಕ್ಷಕ್ಕೆ ಸೇರ್ಪಡೆಯಾದರು. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ಚಿಹ್ನೆಯಲ್ಲಿ ಸ್ಪರ್ಧಿಸುವುದಾಗಿ ಮೆವಾನಿ ಹೇಳಿದರು. ಪಕ್ಷೇತರ ಶಾಸಕರಾಗಿರುವ ಕಾರಣ, ಅನರ್ಹತೆ ಭಯದಿಂದ ಅವರು ಕಾಂಗ್ರೆಸ್‌ಗೆ ಸೇರ್ಪಡೆ ಆಗಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.