ಚಂಡೀಗಡ: ‘ಕೊನೆಯ ಉಸಿರು ಇರುವವರೆಗೂ ಸತ್ಯ ಮತ್ತು ನ್ಯಾಯಕ್ಕಾಗಿ ಹೋರಾಡುತ್ತಲೇ ಇರುತ್ತೇನೆ’ ಎಂದು ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಬುಧವಾರ ಹೇಳಿದ್ದಾರೆ.
ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಮರುದಿನ ವಿಡಿಯೊ ಸಂದೇಶ ಟ್ವೀಟ್ ಮಾಡಿರುವ ಅವರು, ಯಾರ ಜತೆಗೂ ವೈಯಕ್ತಿಕ ದ್ವೇಷವಿಲ್ಲ ಎಂದು ಹೇಳಿದ್ದಾರೆ.
'17 ವರ್ಷಗಳ ನನ್ನ ರಾಜಕೀಯ ಜೀವನಕ್ಕೆ ಒಂದು ನಿರ್ದಿಷ್ಟ ಗುರಿಯಿದೆ. ಬದಲಾವಣೆ ತರಬೇಕು, ಉತ್ತಮ ನಿರ್ಧಾರ ತೆಗೆದುಕೊಳ್ಳಬೇಕು ಮತ್ತು ಪಂಜಾಬ್ ಜನರ ಜೀವನವನ್ನು ಉತ್ತಮಗೊಳಿಸಬೇಕು ಎಂಬ ಉದ್ದೇಶದಿಂದ ಹೊಂದಿದೆ. ಇದು ನನ್ನ ಕರ್ತವ್ಯ ಮತ್ತು ನನ್ನ ಹಕ್ಕು' ಎಂದು ನವಜೋತ್ ಸಿಂಗ್ ಸಿಧು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ವಿಡಿಯೊದಲ್ಲಿ ಹೇಳಿದ್ದಾರೆ.
ಹಕ್ಕು ಮತ್ತು ಸತ್ಯಕ್ಕಾಗಿ ನನ್ನ ಹೋರಾಟ. ಉಸಿರು ಇರುವ ವರೆಗೆ ಹೋರಾಡುತ್ತಲೇ ಇರುತ್ತೇನೆ ಎಂದು ಸಿಧು ವಿಡಿಯೊ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಪಂಜಾಬ್ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವುದರಿಂದ ಪಂಜಾಬ್ ಕಾಂಗ್ರೆಸ್‌ನಲ್ಲಿ ಆಗುತ್ತಿರುವ ಬೆಳವಣಿಗೆಗಳು ರಾಷ್ಟ್ರದ ಗಮನ ಸೆಳೆದಿದೆ. ಭಿನ್ನಮತ ಶಮನದ ಭಾಗವಾಗಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದರು. ನೂತನ ಮುಖ್ಯಮಂತ್ರಿಯಾಗಿ ಚರಣ್‌ಜಿತ್ ಸಿಂಗ್ ಚನ್ನಿ ಅಧಿಕಾರಕ್ಕೆ ಏರಿದರು. ಆದರೆ ಸಿಧು ರಾಜೀನಾಮೆಯೊಂದಿಗೆ ಭಿನ್ನಮತ ಮತ್ತೊಂದು ರೂಪಕ್ಕೆ ಪಡೆದುಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.