ನವದೆಹಲಿ: ಯುದ್ಧನೌಕೆ ನಿರೋಧಕ ಕ್ಷಿಪಣಿಯ ಯಶಸ್ವಿ ಪರೀಕ್ಷೆಯ ದೃಶ್ಯಗಳಿರುವ ವಿಡಿಯೊವನ್ನು ಶುಕ್ರವಾರ ಬಿಡುಗಡೆ ಮಾಡಿರುವ ನೌಕಾಪಡೆ, ಕಡಲಿನಲ್ಲಿ ಎದುರಾಗುವ ಶತ್ರು ದಾಳಿಯನ್ನು ಎದುರಿಸಲು ಸನ್ನದ್ಧ ಎಂಬ ಸಂದೇಶವನ್ನು ರವಾನಿಸಿದೆ.
ಅರಬ್ಬಿ ಸಮುದ್ರದಲ್ಲಿ ನಡೆದ ಈ ಪರೀಕ್ಷೆಯಲ್ಲಿ, ಕ್ಷಿಪಣಿಯೊಂದು ಯುದ್ಧನೌಕೆಯೊಂದರ ಮೇಲೆ ನಿಖರವಾಗಿ ದಾಳಿ ನಡೆಸಿ, ಅದನ್ನು ಧ್ವಂಸ ಮಾಡಿದ ದೃಶ್ಯಗಳು ಈ ವಿಡಿಯೊದಲ್ಲಿವೆ.
ನೌಕಾಪಡೆ ತನ್ನ ಸಾಮರ್ಥ್ಯ ಪ್ರದರ್ಶನ ಹಾಗೂ ನಿಯಮಿತ ಕವಾಯತು ನಡೆಸುತ್ತಿದೆ. ಇದರ ಅಂಗವಾಗಿ, ದಾಳಿ ವೇಳೆ ಮುಂಚೂಣಿಯಲ್ಲಿರುವ ಐಎನ್‌ಎಸ್ ಪ್ರಬಲ್ ನೌಕೆಯಿಂದ ಕ್ಷಿಪಣಿ ಗುರಿಯತ್ತ ಚಿಮ್ಮಿತು. ಐಎನ್‌ಎಸ್ ವಿಕ್ರಮಾದಿತ್ಯ ಸೇರಿದಂತೆ ಇತರ ಯುದ್ಧನೌಕೆಗಳು, ಹೆಲಿಕಾಪ್ಟರ್‌ಗಳು, ಯುದ್ಧವಿಮಾನಗಳು ಸಹ ಈ ಕವಾಯತಿನಲ್ಲಿ ತಮ್ಮ ಕ್ಷಮತೆಯನ್ನು ಪ್ರದರ್ಶಿಸಿ, ಯುದ್ಧಸನ್ನದ್ಧತೆಯನ್ನು ತೋರಿದವು.
‘ಹಳೆಯ ಹಡಗನ್ನು ದಾಳಿ ಮಾಡಬೇಕಾದ ಗುರಿಯನ್ನಾಗಿಸಲಾಗಿತ್ತು. ಈ ನಿರ್ದಿಷ್ಟ ಗುರಿಯನ್ನು ಕ್ಷಿಪಣಿಯು ಕರಾರುವಾಕ್ಕಾಗಿ, ಕ್ಷಿಪ್ರ ಗತಿಯಲ್ಲಿ ತಲುಪಿತು’ ಎಂದು ನೌಕಾಪಡೆಯ ವಕ್ತಾರರೊಬ್ಬರು ಟ್ವೀಟ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.