ADVERTISEMENT

ನೌಕಾಪಡೆಯಿಂದ 35 ಯುದ್ಧನೌಕೆ ನಿಯೋಜನೆ

ಹಿಂದೂ ಮಹಾಸಾಗರದಲ್ಲಿ ಮಿಲಿಟರಿ ಚಟುವಟಿಕೆಗಳು ಹೆಚ್ಚುತ್ತಿರುವ ಹೊತ್ತಿನಲ್ಲಿ ಕ್ರಮ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2024, 16:23 IST
Last Updated 23 ಮಾರ್ಚ್ 2024, 16:23 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ನವದೆಹಲಿ: ಭಾರತೀಯ ನೌಕಾಪಡೆಯು ಹಿಂದೂ ಮಹಾಸಾಗರ ಪ್ರದೇಶದಲ್ಲಿ ಬೃಹತ್ ಪ್ರಮಾಣದಲ್ಲಿ ನೌಕೆಗಳ ನಿಯೋಜನೆಯಲ್ಲಿ ತೊಡಗಿದೆ. 11 ಜಲಾಂತರ್ಗಾಮಿ ನೌಕೆಗಳು, 35 ಯುದ್ಧನೌಕೆಗಳು ಈ ಪ್ರದೇಶದಲ್ಲಿ ನಿಯೋಜನೆಗೊಂಡಿವೆ.

ವಾಣಿಜ್ಯ ಹಡಗುಗಳಿಗೆ ದೇಶದ ಪಶ್ಚಿಮ ಸಮುದ್ರದಲ್ಲಿ ರಕ್ಷಣೆ ಒದಗಿಸುವುದು ಮಾತ್ರವೇ ಅಲ್ಲದೆ, ಹಿಂದೂ ಮಹಾಸಾಗರದಲ್ಲಿ ಚೀನಾದ ಅಸ್ತಿತ್ವವು ಹೆಚ್ಚು ಬಲಗೊಳ್ಳುತ್ತಿರುವ ಸಂದರ್ಭದಲ್ಲಿ ಇತರ ಕೆಲವು ಉದ್ದೇಶಗಳಾಗಿಯೂ ಈ ನಿಯೋಜನೆ ನಡೆದಿದೆ.

ADVERTISEMENT

ಅರಬ್ಬಿ ಸಮುದ್ರದ ಉತ್ತರ ಭಾಗದಲ್ಲಿ, ಕೆಂಪು ಸಮುದ್ರ, ಏಡನ್ ಕೊಲ್ಲಿ ಮತ್ತು ಸೊಮಾಲಿಯಾದ ಪೂರ್ವ ಭಾಗದ ಸಮುದ್ರ ಪ್ರದೇಶದಲ್ಲಿ ನೌಕಾಪಡೆಯು 10 ಯುದ್ಧನೌಕೆಗಳನ್ನು ನಿಯೋಜಿಸಿದೆ. ಕಡಲ್ಗಳ್ಳರ ವಿರುದ್ಧ ಕಾರ್ಯಾಚರಣೆಗೆ ಹಾಗೂ ಕ್ಷಿಪಣಿಗಳು ಮತ್ತು ಡ್ರೋನ್ ದಾಳಿಗೆ ತುತ್ತಾದ ನೌಕೆಗಳಿಗೆ ನೆರವು ನೀಡುವ ಉದ್ದೇಶ ಈ ನಿಯೋಜನೆಗೆ ಇದೆ. ಇನ್ನುಳಿದ ಯುದ್ಧನೌಕೆಗಳು ಬಂಗಾಳ ಕೊಲ್ಲಿ ಹಾಗೂ ಹಿಂದೂ ಮಹಾಸಾಗರದ ದಕ್ಷಿಣ ಭಾಗದಲ್ಲಿ ನಿಯೋಜನೆಗೊಂಡಿವೆ.

‘11 ಜಲಾಂತರ್ಗಾಮಿ ನೌಕೆಗಳು, 35 ಯುದ್ಧ ನೌಕೆಗಳು ಮಾತ್ರವೇ ಅಲ್ಲದೆ ಐದು ವಿಮಾನಗಳು ಕೂಡ ಸಮುದ್ರ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುತ್ತ ಇವೆ. ಈ ಪೈಕಿ 10 ಯುದ್ಧನೌಕೆಗಳು ಪಶ್ಚಿಮದ ಸಮುದ್ರದಲ್ಲಿ ಇವೆ. ಈ ಪ್ರದೇಶವು ವಾಣಿಜ್ಯ ಉದ್ದೇಶದ ಹಡಗುಗಳಿಗೆ ಸುರಕ್ಷಿತವಾಗುವವರೆಗೂ ಇಲ್ಲಿ ನಿಯೋಜನೆ ಮುಂದುವರಿಯಲಿದೆ’ ಎಂದು ನೌಕಾಪಡೆಯ ಮುಖ್ಯಸ್ಥ, ಅಡ್ಮಿರಲ್ ಆರ್. ಹರಿ ಕುಮಾರ್ ಅವರು ಶನಿವಾರ ಹೇಳಿದ್ದಾರೆ.

ಹರಿ ಕುಮಾರ್ ಅವರು ಈಚೆಗೆ ವಿಶಾಖಪಟ್ಟಣದಲ್ಲಿ ಮೂರು ದಿನಗಳ ಕಾಲ ಇದ್ದು, ಅಲ್ಲಿಯ ಕಾರ್ಯಾಚರಣೆಗಳ ಪರಿಶೀಲನೆ ನಡೆಸಿದ್ದರು. ಈಗ ನಡೆದಿರುವುದು ಜಲಾಂತರ್ಗಾಮಿ ನೌಕೆಗಳ ಅತಿದೊಡ್ಡ ನಿಯೋಜನೆ ಆಗಿರಬಹುದು ಎಂದು ನೌಕಾಪಡೆಯ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ಹಿಂದೂ ಮಹಾಸಾಗರದಲ್ಲಿ ಚೀನಾದ 13 ಹಡುಗಳು ಸಾಗುತ್ತಿರುವ ಹೊತ್ತಿನಲ್ಲಿ ಭಾರತೀಯ ನೌಕಾಪಡೆಯ ಯುದ್ಧನೌಕೆಗಳು ಹಾಗೂ ಜಲಾಂತರ್ಗಾಮಿ ನೌಕೆಗಳು ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ನಿಯೋಜನೆಗೊಂಡಿವೆ. ಚೀನಾದ 13 ನೌಕೆಗಳಲ್ಲಿ ಆರು ನೌಕೆಗಳು ಮಿಲಿಟರಿಯವು. ಚೀನಾ ಪೀಪಲ್ಸ್ ಲಿಬರೇಷನ್ ಆರ್ಮಿಯ ಆರರಿಂದ ಎಂಟು ಹಡಗುಗಳು ಈ ಪ್ರದೇಶದಲ್ಲಿ ಇರುತ್ತವೆ. ಅಲ್ಲದೆ, ಚೀನಾದ ಜಲಾಂತರ್ಗಾಮಿ ನೌಕೆಗಳು ಕಾಲಕಾಲಕ್ಕೆ ಇಲ್ಲಿಗೆ ಬಂದುಹೋಗುತ್ತಿರುತ್ತವೆ.

ಕಡಲ್ಗಳ್ಳರು ಭಾರತಕ್ಕೆ: ಭಾರತೀಯ ನೌಕಾಪಡೆಯು ಸೊಮಾಲಿಯಾದ 35 ಮಂದಿ ಕಡಲ್ಗಳ್ಳರನ್ನು ಮುಂಬೈ ಬಂದರಿಗೆ ಕರೆತಂದಿದೆ. ಅವರನ್ನು ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. ಈ ಕಡಲ್ಗಳ್ಳರನ್ನು 40 ತಾಸುಗಳ ಕಾರ್ಯಾಚರಣೆಯ ನಂತರ, ಎಂ.ವಿ. ರುಯೆನ್ ಹಡಗಿನಿಂದ ಸೆರೆಹಿಡಿದು ತರಲಾಗಿದೆ. ಎಂ.ವಿ. ರುಯೆನ್ ಹಡಗನ್ನು ಡಿಸೆಂಬರ್‌ನಲ್ಲಿ ಅಪಹರಿಸಿದ್ದ ಕಡಲ್ಗಳ್ಳರು, ಅದನ್ನೇ ಬಳಸಿಕೊಂಡು ಇತರ ಹಡಗುಗಳ ಮೇಲೆ ದಾಳಿ ನಡೆಸುತ್ತಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.