ನವದೆಹಲಿ: ಕಡಲ ಗಡಿ ರಕ್ಷಣೆ ವಿಷಯದಲ್ಲಿ ಸದ್ಯದ ಹಾಗೂ ಬರುವ ದಿನಗಳಲ್ಲಿ ಎದುರಾಗಲಿರುವ ಸವಾಲುಗಳನ್ನು ಮೆಟ್ಟಿ ನಿಲ್ಲುವುದಕ್ಕಾಗಿ ನೌಕಾಪಡೆಯು ಯಾವಾಗಲೂ ಸನ್ನದ್ಧ ಸ್ಥಿತಿಯಲ್ಲಿ ಇರಬೇಕು ಎಂದು ನೌಕಾಪಡೆಯ ನೂತನ ಮುಖ್ಯಸ್ಥ ಅಡ್ಮಿರಲ್ ದಿನೇಶ್‌ಕುಮಾರ್ ತ್ರಿಪಾಠಿ ಮಂಗಳವಾರ ಹೇಳಿದ್ದಾರೆ.
ನೌಕಾಪಡೆಯ 26ನೇ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
‘ಸ್ವಾವಲಂಬನೆಗೆ ಒತ್ತು ನೀಡುವ ಮೂಲಕ ನೌಕಾಪಡೆಯ ಬಲ ಹೆಚ್ಚಿಸಲಾಗುವುದು. ಈ ನಿಟ್ಟಿನಲ್ಲಿ ಹೊಸ ತಂತ್ರಜ್ಞಾನಗಳ ಅಳವಡಿಕೆ ಮಹತ್ವದ ಪಾತ್ರ ವಹಿಸಲಿದೆ’ ಎಂದರು.
‘ನೌಕಾಪಡೆ ಸಿಬ್ಬಂದಿಯ ಕೌಶಲ ವೃದ್ಧಿ ನನ್ನ ಆದ್ಯತೆಯಾಗಿದೆ. ಪುರುಷ ಮತ್ತು ಮಹಿಳಾ ಸಿಬ್ಬಂದಿಗೆ ತರಬೇತಿ ನೀಡುವುದು, ವೃತ್ತಿಪರ ವಾತಾವರಣ ನಿರ್ಮಾಣ ಹಾಗೂ ಎಲ್ಲರಿಗೂ ಆಡಳಿತಾತ್ಮಕ ನೆರವು ನೀಡುವುದು ಸಹ ಆದ್ಯತೆಗಳಲ್ಲಿ ಸೇರಿವೆ’ ಎಂದು ಹೇಳಿದರು.
ತಮ್ಮ ನಾಲ್ಕು ದಶಕಗಳ ಸೇವಾವಧಿಯಲ್ಲಿ ನೌಕಾಪಡೆಯ ವಿವಿಧ ಹುದ್ದೆಗಳನ್ನು ನಿಭಾಯಿಸಿ, ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ ಆರ್.ಹರಿಕುಮಾರ್ ನಿವೃತ್ತಿಯಿಂದ ತೆರವಾದ ಹುದ್ದೆಗೆ ತ್ರಿಪಾಠಿ ನೇಮಕಗೊಂಡಿದ್ದಾರೆ.
ವೈಸ್ ಅಡ್ಮಿರಲ್ ಆಗಿದ್ದ ತ್ರಿಪಾಠಿ ಅವರು ರೇವಾದ ಸೈನಿಕ್ ಶಾಲೆಯ ಹಳೆ ವಿದ್ಯಾರ್ಥಿ. ಅಡ್ಮಿರಲ್ ಹುದ್ದೆಗೇರುವುದಕ್ಕೂ ಮುನ್ನ ಅವರು ನೌಕಾಪಡೆಯ ವಿವಿಧ ಜವಾಬ್ದಾರಿಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಯುದ್ಧನೌಕೆಗಳಾದ ವಿನಾಶ್, ಕಿರ್ಚ್ ಹಾಗೂ ತ್ರಿಶೂಲ್‌ಗಳನ್ನು ಮುನ್ನಡೆಸಿದ್ದಾರೆ.
ಗೌರವ: ಅಧಿಕಾರ ಸ್ವೀಕರಿಸುವುದಕ್ಕೆ ಮುನ್ನ, ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ತೆರಳಿದ ಅಡ್ಮಿರಲ್ ತ್ರಿಪಾಠಿ, ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದರು.
ನಂತರ, ರೈಸಿನಾ ಹಿಲ್ಸ್‌ನ ಸೌತ್ ಬ್ಲಾಕ್‌ನಲ್ಲಿ ತ್ರಿಪಾಠಿ ಅವರಿಗೆ ಗೌರವ ವಂದನೆ ನೀಡಲಾಯಿತು. ಈ ವೇಳೆ ಉಪಸ್ಥಿತರಿದ್ದ ತಮ್ಮ ತಾಯಿ ರಜನಿ ತ್ರಿಪಾಠಿ ಅವರ ಆಶೀರ್ವಾದವನ್ನೂ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.