ADVERTISEMENT

ಹಡಗು ಅಪಹರಣ: ಕಡಲುಗಳ್ಳರ ಪತ್ತೆಗೆ ನೌಕಾಪಡೆಯಿಂದ ತಪಾಸಣೆ

ಪಿಟಿಐ
Published 6 ಜನವರಿ 2024, 14:14 IST
Last Updated 6 ಜನವರಿ 2024, 14:14 IST
<div class="paragraphs"><p>‘ಎಂವಿ ಲಿಲಾ ನಾರ್ಫೋಕ್‌’ ಹಡಗು( ಸಂಗ್ರಹ ಚಿತ್ರ)</p></div>

‘ಎಂವಿ ಲಿಲಾ ನಾರ್ಫೋಕ್‌’ ಹಡಗು( ಸಂಗ್ರಹ ಚಿತ್ರ)

   

ನವದೆಹಲಿ: ‘ಎಂವಿ ಲಿಲಾ ನಾರ್ಫೋಕ್‌’ ಹಡಗು ಅಪಹರಣ ಕೃತ್ಯದಲ್ಲಿ ಭಾಗಿಯಾಗಿರುವ ಕಡಲ್ಗಳ್ಳರನ್ನು ಪತ್ತೆ ಮಾಡುವ ನಿಟ್ಟಿನಲ್ಲಿ ಭಾರತೀಯ ನೌಕಾಪಡೆಯು ಅರಬ್ಬಿ ಸಮುದ್ರದಲ್ಲಿ ಶಂಕಿತ ಹಡಗುಗಳ ತಪಾಸಣೆ ನಡೆಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅರಬ್ಬಿ ಸಮುದ್ರದ ಸೊಮಾಲಿಯಾ ಕರಾವಳಿಯಲ್ಲಿ ಲೈಬೀರಿಯಾ ಧ್ವಜ ಹೊತ್ತಿದ್ದ ‘ಎಂವಿ ಲಿಲಾ ನಾರ್ಫೋಕ್‌’ ಸರಕು ಸಾಗಣೆ ಹಡಗನ್ನು ಗುರುವಾರ ಸಂಜೆ ಅಪಹರಿಸಲಾಗಿತ್ತು. ಹಡಗಿನಲ್ಲಿ 15 ಭಾರತೀಯರು ಸೇರಿ 21 ಮಂದಿ ಸಿಬ್ಬಂದಿ ಇದ್ದರು. ನೌಕಾಪಡೆಯು ಶುಕ್ರವಾರ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಸಿಬ್ಬಂದಿಯನ್ನು ರಕ್ಷಿಸಿದೆ.

ADVERTISEMENT

ಹಡಗಿನ ಸಿಬ್ಬಂದಿ ಹಡಗಿನ ನೋದನ ವ್ಯವಸ್ಥೆ, ವಿದ್ಯುತ್‌ ಪೂರೈಕೆ, ಗೇರ್‌ ಸರಿಪಡಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಬಳಿಕ, ನೌಕಾಪಡೆಯ ಯುದ್ಧನೌಕೆಯ ಬೆಂಗಾವಲಿನೊಂದಿಗೆ ಲಿಲಾ ನಾರ್ಫೋಕ್‌ ಹಡಗನ್ನು ಅದರ ಗಮ್ಯಸ್ಥಳಕ್ಕೆ ತಲುಪಿಸಲಾಗುವುದು ಎಂದು ನೌಕಾಪಡೆ ಅಧಿಕಾರಿಗಳು ತಿಳಿಸಿದ್ದಾರೆ.

ಅಪರಿಚಿತ ಸಶಸ್ತ್ರ ಸಿಬ್ಬಂದಿ ಹಡಗು ಏರಿದ್ದಾರೆ ಎಂದು ನಾರ್ಫೋಕ್‌ ಹಡಗಿನಿಂದ ಯುಕೆ ಮೇರಿಟೈಮ್‌ ಟ್ರೇಡ್‌ ಆಪರೇಷನ್ಸ್‌ ಪೋರ್ಟಲ್‌ಗೆ ಗುರುವಾರ ಸಂದೇಶ ರವಾನೆಯಾಯಿತು. ಭಾರತೀಯ ನೌಕಾಪಡೆಯು ಕೂಡಲೇ ಒಂದು ಯುದ್ಧನೌಕೆ, ಕರಾವಳಿ ಗಸ್ತು ಯುದ್ಧವಿಮಾನ ಪಿ–8ಐ, ಹೆಲಿಕಾಪ್ಟರ್‌ಗಳು ಮತ್ತು ಎಂಕ್ಯು9ಬಿ ಪ್ರಿಡೇಟರ್‌ ಡ್ರೋನ್‌ಗಳನ್ನು ಘಟನಾ ಸ್ಥಳಕ್ಕೆ ಕಳಿಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಕಾರ್ಯಾಚರಣೆ ಕುರಿತು ನೌಕಾಪಡೆಯು ವಿಡಿಯೊವೊಂದನ್ನು ಶೇರ್‌ ಮಾಡಿದೆ. ತಮ್ಮನ್ನು ರಕ್ಷಿಸಿದ ನೌಕಾಪಡೆ ಸಿಬ್ಬಂದಿಗೆ ಹಡಗಿನಲ್ಲಿದ್ದ ಭಾರತೀಯ ಸಿಬ್ಬಂದಿ ಧನ್ಯವಾದ ಹೇಳುತ್ತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.

ಸರಕು ಸಾಗಣೆ ಹಡಗುಗಳ ಮೇಲೆ ಡ್ರೋನ್‌ ದಾಳಿ ನಡೆದದ್ದು ವರದಿಯಾದ ಬೆನ್ನಲ್ಲೇ ಹಡಗು ಅಪಹರಣಗೊಂಡ ಘಟನೆ ನಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.