ಪಣಜಿ: ಗೋವಾದ ದಾಬೋಲಿಮ್ ವಿಮಾನ ನಿಲ್ದಾಣದ ಟ್ಯಾಕ್ಸಿವೇಯಲ್ಲಿ ಮಂಗಳವಾರ ಮಧ್ಯಾಹ್ನ ಭಾರತೀಯ ನೌಕಾಪಡೆಯ ಯುದ್ಧ ವಿಮಾನದ ದೈನಂದಿನ ಪರೀಕ್ಷೆ ನಡೆಸುವ ಮುನ್ನವೇ ಅದರ ಟೈರ್ ಸ್ಫೋಟಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಿಗ್ 29ಕೆ ಯುದ್ಧ ವಿಮಾನವು ಟೈರ್ ಸ್ಫೋಟದಿಂದಾಗಿ ಟ್ಯಾಕ್ಸಿವೇಯಲ್ಲಿ ಸಿಲುಕಿಕೊಂಡಿತು. ಆದರೆ, ಯಾರಿಗೂ ಗಾಯಗಳಾಗಿಲ್ಲ. ಈ ಘಟನೆಯಿಂದಾಗಿ, ವಿಮಾನ ನಿಲ್ದಾಣದ ರನ್‌ವೇ ಕಾರ್ಯಾಚರಣೆಯನ್ನು ಕೆಲಕಾಲ ಸ್ಥಗಿತಗೊಳಿಸಲಾಯಿತು. ಇದು ಪ್ರಯಾಣಿಕರ ವಿಮಾನಗಳ ಸೇವೆಗಳ ಮೇಲೂ ಪರಿಣಾಮ ಬೀರಿತು ಎಂದು ಅಧಿಕಾರಿಗಳು ಹೇಳಿದರು.
‘ದೈನಂದಿನ ಪರೀಕ್ಷೆಗಾಗಿ ವಿಮಾನವು ಟ್ಯಾಕ್ಸಿವೇನಲ್ಲಿರುವಾಗಲೇ ಟೈರ್ ಸ್ಫೋಟಿಸಿದೆ. ತಕ್ಷಣವೇ, ಅಗ್ನಿಶಾಮಕ ದಳ ಮತ್ತು ಇತರ ಸೇವೆಗಳ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯ ನಡೆಸಿದರು. ವಿಮಾನವನ್ನು ಟ್ಯಾಕ್ಸಿವೇನಿಂದ ಬೇರೆಡೆಗೆ ಸ್ಥಳಾಂತರಿಸಲಾಗುವುದು’ ಎಂದು ನೌಕಾಪಡೆಯ ವಕ್ತಾರರು ತಿಳಿಸಿದ್ದಾರೆ.
‘ರನ್‌ವೇಯನ್ನು ಸಂಜೆ 4 ಗಂಟೆಯವರೆಗೆ ಮುಚ್ಚಲಾಗಿತ್ತು. ಇದರಿಂದ 10 ವಿಮಾನಗಳ ಸೇವೆಗಳ ಮೇಲೆ ಪರಿಣಾಮ ಬೀರಿತು. ಕೆಲವು ವಿಮಾನಗಳನ್ನು ಮೋಪಾದಲ್ಲಿರುವ ಮನೋಹರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದತ್ತ ಕಳುಹಿಸಲಾಯಿತು’ ಎಂದು ದಾಬೋಲಿಮ್ ವಿಮಾನ ನಿಲ್ದಾಣದ ನಿರ್ದೇಶಕ ಎಸ್.ವಿ.ಟಿ. ಧನಂಜಯ ತಿಳಿಸಿದ್ದಾರೆ.
ದಕ್ಷಿಣ ಗೋವಾ ಜಿಲ್ಲೆಯಲ್ಲಿರುವ ದಾಬೋಲಿಮ್ ವಿಮಾನ ನಿಲ್ದಾಣವು ನೌಕಾನೆಲೆ ಐಎನ್‌ಎಸ್ ಹಂಸದ ಭಾಗವಾಗಿದೆ. ದಿನದ ನಿರ್ದಿಷ್ಟ ಸಮಯದಲ್ಲಿ ನೌಕಾಪಡೆಯ ವಿಮಾನಗಳು ಈ ನಿಲ್ದಾಣವನ್ನು ಬಳಸುತ್ತವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.