ADVERTISEMENT

ಗಡ್‌ಚಿರೋಲಿ: ನಕ್ಸಲರ ಸುರಕ್ಷಿತ ತಾಣ

ಮೃತ್ಯುಂಜಯ ಬೋಸ್
Published 1 ಮೇ 2019, 20:01 IST
Last Updated 1 ಮೇ 2019, 20:01 IST
ಮಹಾರಾಷ್ಟ್ರದ ಗಡ್‌ಚಿರೋಲಿ ಜಿಲ್ಲೆಯ ಕುರ್ಖೇಡಾ ಪಟ್ಟಣದ ಬಳಿ ನಕ್ಸಲರು ರಸ್ತೆ ಕಾಮಗಾರಿ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ –ಪಿಟಿಐ ಚಿತ್ರ
ಮಹಾರಾಷ್ಟ್ರದ ಗಡ್‌ಚಿರೋಲಿ ಜಿಲ್ಲೆಯ ಕುರ್ಖೇಡಾ ಪಟ್ಟಣದ ಬಳಿ ನಕ್ಸಲರು ರಸ್ತೆ ಕಾಮಗಾರಿ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ –ಪಿಟಿಐ ಚಿತ್ರ   

ಮುಂಬೈ: ಗುಡ್ಡಬೆಟ್ಟಗಳು, ದಟ್ಟ ಅರಣ್ಯ ಹಾಗೂ ನದಿಗಳಿಂದ ಕೂಡಿರುವ ಗಡ್‌ಚಿರೋಲಿ ಜಿಲ್ಲೆಯು ನಕ್ಸಲ್‌ ಚಟುವಟಿಕೆಗಳಿಗೆ ಹೇಳಿ ಮಾಡಿಸಿದ ತಾಣ. ಛತ್ತೀಸಗಡ ಮತ್ತು ತೆಲಂಗಾಣದ ನಡುವೆ ಆಗಾಗ ತನ್ನ ನೆಲೆಯನ್ನು ಬದಲಿಸಿಕೊಳ್ಳಲು ನಕ್ಸಲರು ಬಳಸಿಕೊಳ್ಳುವುದು ಗಡ್‌ಚಿರೋಲಿ ಮಾರ್ಗವನ್ನೇ.

ಕಳೆದ ವರ್ಷ ಏಪ್ರಿಲ್‌ ತಿಂಗಳಲ್ಲಿ ಗಡ್‌ಚಿರೋಲಿ ಜಿಲ್ಲೆಯಲ್ಲಿ ಮಹಾರಾಷ್ಟ್ರ ಪೊಲೀಸರು 40 ನಕ್ಸಲರನ್ನು ಹೊಡೆದುರುಳಿಸಿದ್ದರು. ಇದರಿಂದ ಈ ಜಿಲ್ಲೆಯಲ್ಲಿ ನಕ್ಸಲ್‌ ಸಮಸ್ಯೆ ನೀಗಬಹುದು ಎಂದು ಭಾವಿಸಲಾಗಿತ್ತು. ಆದರೆ ಅವರು ತಮ್ಮ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಸತತ ಪ್ರಯತ್ನ ನಡೆಸುತ್ತಿದ್ದಾರೆ ಎಂಬುದಕ್ಕೆ ಕಳೆದ ನಾಲ್ಕು ತಿಂಗಳಲ್ಲಿ ನಡೆದ ಅನೇಕ ಪ್ರಕರಣಗಳು ಸಾಕ್ಷ್ಯನೀಡಿವೆ.

‘ನಕ್ಸಲರು ಮತ್ತೆ ತಂಡ ಕಟ್ಟಿಕೊಳ್ಳುತ್ತಿದ್ದಾರೆ. ಅವರು ಪೊಲೀಸ್‌ ಮಾಹಿತಿದಾರರನ್ನು ಕೊಂದಿದ್ದಾರೆ, ವಾಹನಗಳನ್ನು ಸುಟ್ಟಿದ್ದಾರೆ, ಚುನಾವಣೆ ಬಹಿಷ್ಕರಿಸುವಂತೆ ಸ್ಥಳೀಯರಿಗೆ ಕರೆ ನೀಡಿದ್ದಾರೆ, ಚುನಾವಣೆಗೆ ಅಡ್ಡಿಪಡಿಸುವ ಪ್ರಯತ್ನವನ್ನೂ ಮಾಡಿದ್ದಾರೆ. ಈಗ ಈ ಭೀಕರ ಘಟನೆ ನಡೆದಿದೆ. ಅವರು ತಮ್ಮ ರಕ್ತಸಿಕ್ತ ಅಧ್ಯಾಯವನ್ನು ಪುನಃ ಬರೆಯಲು ಮುಂದಾಗಿದ್ದಾರೆ’ ಎಂದು ಮಹಾರಾಷ್ಟ್ರದ ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ADVERTISEMENT

ಪೀಪಲ್ಸ್‌ ಲಿಬರೇಷನ್‌ ಗೆರಿಲ್ಲಾ ಆರ್ಮಿಯ ನಕ್ಸಲರು ಗಡ್‌ಚಿರೋಲಿಯ ದಟ್ಟ ಅರಣ್ಯ ಮತ್ತು ಬೆಟ್ಟಗುಡ್ಡ ಗಳಲ್ಲಿ ಆಶ್ರಯ ಪಡೆದಿದ್ದಾರೆ. ವಿದರ್ಭ ವ್ಯಾಪ್ತಿಯಲ್ಲಿ ಬರುವ ಈ ಜಿಲ್ಲೆಯ ಗಡಿ ಪ್ರದೇಶಗಳಾದ ಚಂದ್ರಾಪುರ ಮತ್ತು ಗೊಂಡಿಯ ಪ್ರದೇಶದಲ್ಲಿ ಇವರು ಸಾಕಷ್ಟು ಹಾನಿ ಉಂಟುಮಾಡಿದ್ದಾರೆ. ಸ್ಥಳೀಯರಲ್ಲಿ ಭಯ ಹುಟ್ಟಿಸಿದ್ದಾರೆ.

2011ರ ಜನಗಣತಿಯ ಪ್ರಕಾರ ಗಡಚಿರೋಲಿ ಜಿಲ್ಲೆಯ ಜನಸಂಖ್ಯೆ 10.71 ಲಕ್ಷ. ಇವರಲ್ಲಿ ಹೆಚ್ಚಿನವರು ಬುಡಕಟ್ಟು ಸಮುದಾಯದವರು. ಈ ಜಿಲ್ಲೆಯಲ್ಲಿ ಮರಾಠಿ, ಹಿಂದಿ, ತೆಲುಗು, ಬಂಗಾಳಿ ಸೇರಿದಂತೆ ಏಳು ಭಾಷೆಗಳನ್ನಾಡುವ ಜನರಿದ್ದಾರೆ. 1982ರಲ್ಲಿ ಚಂದ್ರಾಪುರ ಜಿಲ್ಲೆಯನ್ನು ವಿಭಜಿಸಿ ಗಡಚಿರೋಲಿ ಜಿಲ್ಲೆಯನ್ನು ರಚಿಸಲಾಗಿತ್ತು. ಜಿಲ್ಲಾ ಪೊಲೀಸರು ಮತ್ತು ರಾಜ್ಯ ಗುಪ್ತಚರ ಇಲಾಖೆಗೆ ಗಡಚಿರೋಲಿಯಲ್ಲಿ ನಕ್ಸಲ್‌ ವಿರೋಧಿ ಕಾರ್ಯಾಚರಣೆಯೇ ದೊಡ್ಡ ಸವಾಲಾಗಿದೆ. ಇಲ್ಲಿ ಸಿಆರ್‌ಪಿಎಫ್‌ನ ‘ಕೊಬ್ರಾ’ (ಕಮಾಂಡೊ ಬಟಾಲಿಯನ್‌ ಫಾರ್‌ ರೆಸಲ್ಯೂಟ್‌ ಆ್ಯಕ್ಷನ್‌) ಪಡೆಯೂ ನಕ್ಸಲ್‌ ವಿರೋಧಿ ಕಾರ್ಯಾಚರಣೆ ನಡೆಸುತ್ತಿದೆ.

ಕಳೆದ ಮೂರು ದಶಕಗಳಲ್ಲಿ ಗಡಚಿರೋಲಿಯಲ್ಲಿ ಪೊಲೀಸರು ಮತ್ತು ಭದ್ರತಾ ಪಡೆಗಳ ಮೇಲೆ ಅನೇಕ ಬಾರಿ ಘಾತಕ ದಾಳಿಗಳು ನಡೆದಿವೆ. 150ಕ್ಕೂ ಹೆಚ್ಚು ಸಿಬ್ಬಂದಿ ಹತರಾಗಿದ್ದಾರೆ.

ನಿರ್ಲಕ್ಷ್ಯ ಕಾರಣವೇ?
ನಕ್ಸಲ್‌ ನಿಗ್ರಹ ಚಟುವಟಿಕೆಯಲ್ಲಿ ಅನುಸರಿಸಬೇಕಾದ ಪ್ರಕ್ರಿಯೆಗಳನ್ನು ಅನುಸರಿಸಲಾಗಿಲ್ಲ ಎಂಬ ಕೂಗು ನಕ್ಸಲ್‌ ದಾಳಿಯ ಬಳಿಕ ಕೇಳಿ ಬಂದಿದೆ. ಪರಿಸ್ಥಿತಿ ಬಿಗುವಿನಿಂದ ಕೂಡಿದ್ದ ಸಂದರ್ಭದಲ್ಲಿಯೇ ಕಮಾಂಡೊಗಳು ಖಾಸಗಿ ವಾಹನದಲ್ಲಿ ಪ್ರಯಾಣ ಮಾಡಿದ್ದು ಯಾಕೆ ಎಂಬ ಪ್ರಶ್ನೆ ಕೇಳಲಾಗುತ್ತಿದೆ.

ಸಿ–6 ಕಮಾಂಡೊಗಳು ಸಾಗುವ ದಾರಿಯ ವಿವರಗಳು ಸೋರಿಕೆಯಾಗಿದ್ದು ಹೇಗೆ ಎಂಬ ಬಗ್ಗೆ ಮತ್ತು ಅವರು ಖಾಸಗಿ ವಾಹನದಲ್ಲಿ ಯಾಕೆ ಸಂಚರಿಸಿದರು ಎಂಬುದರ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಮಹಾರಾಷ್ಟ್ರದ ಗೃಹ (ಗ್ರಾಮೀಣ) ಸಚಿವ ದೀಪಕ್‌ ಕೇಸರ್ಕರ್‌ ಹೇಳಿದ್ದಾರೆ.

‘ಖಾಸಗಿ ವಾಹನ ಬಳಸಿದ್ದು ಯಾಕೆ? ಸಾಗುತ್ತಿದ್ದ ದಾರಿಯ ಬಗ್ಗೆ ಚಾಲಕನಿಗೆ ಸರಿಯಾದ ತಿಳಿವಳಿಕೆ ಇತ್ತೇ? ಇಂತಹ ಮಾರ್ಗಗಳಲ್ಲಿ ಹೋಗುವಾಗ ವಹಿಸಬೇಕಾದ ಎಚ್ಚರಿಕೆ ಅವರಿಗೆ ಗೊತ್ತಿತ್ತೇ’ ಎಂದು ಗುಪ್ತಚರ ಪರಿಣತ ಶಿರೀಶ್‌ ಇನಾಮ್‌ದಾರ್‌ ಪ್ರಶ್ನಿಸಿದ್ದಾರೆ.

ತ್ವರಿತ ಕಾರ್ಯಪಡೆಯ ತಂಡ ಸಾಗುವಾಗ ಅದಕ್ಕೂ ಮುಂಚೆ ರಸ್ತೆ ಪರಿಶೀಲನಾ ತಂಡ ಸಾಗಬೇಕು. ಇಂತಹ ಪ್ರಕ್ರಿಯೆಗಳ ಬಗ್ಗೆ ಮೇಲಧಿಕಾರಿಗಳು ಎಚ್ಚರಿಕೆ ವಹಿಸಿದ್ದರೇ ಎಂದೂ ಅವರು ಕೇಳಿದ್ದಾರೆ.

ರಕ್ತಸಿಕ್ತ ಇತಿಹಾಸ

ಫೆಬ್ರುವರಿ 1, 2009: ಗಡ್‌ಚಿರೋಲಿ ಜಿಲ್ಲೆಯ ಧನೋರಾ ತಾಲ್ಲೂಕಿನ ಮೊರ್ಕೆ ಗ್ರಾಮದಲ್ಲಿ ಪೊಲೀಸ್‌ ಗಸ್ತು ಪಡೆ ಮೇಲೆ ದಾಳಿ, 15 ಮಂದಿ ಸಾವು

ಮೇ 21, 2009: ಧನೋರಾ ತಾಲ್ಲೂಕಿನ ಮುರುಮ್‌ ಗ್ರಾಮದಲ್ಲಿ ಮಹಿಳಾ ಕಾನ್‌ಸ್ಟೆಬಲ್‌ಗಳೂ ಇದ್ದ ಪೊಲೀಸ್‌ ಪಡೆಯ ಮೇಲೆ ಹೊಂಚು ದಾಳಿ, ಐವರು ಮಹಿಳೆಯರು ಸೇರಿ 16 ಸಾವು

ಅಕ್ಟೋಬರ್‌ 8, 2009: ಭಾಮ್ರಗಡ ತಾಲ್ಲೂಕಿನ ಲಾಹೇರಿ ಸಮೀಪ ಪೊಲೀಸರೊಂದಿಗೆ ನಕ್ಸಲರ ಗುಂಡಿನ ಚಕಮಕಿ. 17 ಪೊಲೀಸರು ಹುತಾತ್ಮ. ಇದರಲ್ಲಿ ನಕ್ಸಲ್‌ ದಮನ ಕಾರ್ಯಾಚರಣೆಯ ಸಿ–60 ತುಕಡಿಯ ಕಮಾಂಡೋಗಳು ಇದ್ದರು

ಅಕ್ಟೋಬರ್‌ 4, 2010: ಗಡ್‌ಚಿರೋಲಿ ಜಿಲ್ಲೆಯ ಅಹೇರಿ ತಾಲ್ಲೂಕಿನ ಪಿರಿಮಿಲಿ ಗ್ರಾಮದ ಸಮೀಪ ನಕ್ಸಲರಿಂದ ನೆಲಬಾಂಬ್‌ ಸ್ಫೋಟ– ನಾಲ್ವರು ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ಸಾವು

ಮೇ 19, 2011: ಭಾಮ್ರಗಡ ತಾಲ್ಲೂಕಿನಲ್ಲಿ ಎರಡು ಕಡೆ ಪೊಲೀಸ್‌ ಗಸ್ತು ಪಡೆಯ ಮೇಲೆ ದಾಳಿ– ನಾಲ್ವರ ಹತ್ಯೆ, ಇಬ್ಬರಿಗೆ ಗಾಯ

ಮಾರ್ಚ್‌ 27, 2012: ಗಡ್‌ಚಿರೋಲಿಯ ಧನೋರಾ ತಾಲ್ಲೂಕಿನಲ್ಲಿ ಗಸ್ತು ಕೆಲಸಕ್ಕೆ ಹೋಗುತ್ತಿದ್ದ ಬಸ್‌ನ ಮೇಲೆ ಬಾಂಬ್‌ ದಾಳಿ. ಸಿಆರ್‌ಪಿಎಫ್‌ನ 12 ಸಿಬ್ಬಂದಿ ಸಾವು, 28 ಮಂದಿಗೆ ಗಾಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.