ಮುಂಬೈ: ಮಹಾರಾಷ್ಟ್ರ–ಛತ್ತೀಸಗಢದ ಗಡಿ ಭಾಗದಲ್ಲಿ ಬುಧವಾರ ಪೊಲೀಸರು ಮತ್ತು ‘ಸಿ–60’ ಕಮಾಂಡೊಗಳಿಂದ ಹತ್ಯೆಗೀಡಾದ 12 ನಕ್ಸಲರ ತಲೆಗೆ ಒಟ್ಟಾರೆ ₹86 ಲಕ್ಷ ಇನಾಮು ಘೋಷಿಸಲಾಗಿತ್ತು ಎಂದು ತಿಳಿದುಬಂದಿದೆ.
ಯಶಸ್ವಿ ಕಾರ್ಯಾಚರಣೆಯಿಂದಾಗಿ ಗಢಚಿರೋಲಿಯ ಕೊರ್ಚಿ–ಟಿಪಾಗಡ ಮತ್ತು ಛಟಗಾಂವ್–ಕಸನ್ಸೂರ್ ವ್ಯಾಪ್ತಿಯಲ್ಲಿ ಶಸ್ತ್ರಸಜ್ಜಿತರಾಗಿದ್ದ ಎಲ್ಲ ಮಾವೋವಾದಿಗಳನ್ನು ಹೊಡೆದುರುಳಿಸಿದಂತಾಗಿದೆ ಎಂದು ಪೊಲೀಸ್ ವರಿಷ್ಠಾದಿಕಾರಿ ನೀಲೋತ್ಪಲ್ ತಿಳಿಸಿದ್ದಾರೆ.
ಹತ್ಯೆಗೊಳಗಾದ 12 ನಕ್ಸಲರ ಪೈಕಿ ಮೂವರನ್ನು ಯೋಗೇಶ್ ದೇವಸಿಂಗ್ ತುಲವಿ ಅಲಿಯಾಸ್ ನರೇಂದ್ರ ಅಲಿಯಾಸ್ ನಿರಿಂಗಸಾಯ್ (36), ವಿಶಾಲ್ ಕುಲ್ಲೆ ಅತ್ರಮ್ ಅಲಿಯಾಸ್ ಲಕ್ಷ್ಮ್ ಅಲಿಯಾಸ್ ಸರಡು (43) ಹಾಗೂ ಪ್ರಮೋದ್ ಲಾಲ್‌ಸಾಯ್ ಕಚ್ಲಾಮಿ ಅಲಿಯಾಸ್ ದಲ್ಪಟ್ (31) ಎಂದು ಗುರುತಿಸಲಾಗಿದೆ. ಸರಣಿ ಎನ್‌ಕೌಂಟರ್ ಪ್ರಕರಣಗಳು, ಹತ್ಯೆ, ಮತ್ತು ಹತ್ಯೆಗೆ ಯತ್ನ ಸೇರಿದಂತೆ ಇನ್ನಿತರ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಿದ್ದವರು ಎನ್ನಲಾಗಿದೆ.
ನಕ್ಸಲ್ ವಿರೋಧಿ ಕಾರ್ಯಾಚರಣೆ ಪ್ರದೇಶದಲ್ಲಿ ಮೂರು ಎಕೆ47, ಎರಡು ಇನ್ಸಾಸ್ ರೈಫಲ್‌ಗಳು, ಒಂದು ಕಾರ್ಬೈನ್, ಎಸ್ಎಲ್ಆರ್, ಮಾವೋವಾದಕ್ಕೆ ಸಂಬಂಧಿಸಿದ ಸಾಹಿತ್ಯದ ಪುಸ್ತಕಗಳು, ಸ್ಫೋಟಕಗಳು ಸೇರಿದಂತೆ ಇನ್ನಿತರ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.