ಧಮ್ತಾರಿ: ಛತ್ತೀಸಗಢದ ಧಮ್ತಾರಿ ಜಿಲ್ಲೆಯಲ್ಲಿ ನಕ್ಸಲ್ ದಂಪತಿ ಗಡಿ ಭದ್ರತಾ ಪಡೆಯ ಮುಂದೆ ಶರಣಾಗಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.
ಟಿಕೇಶ್ವರ ವಟ್ಟಿ ಅಲಿಯಾಸ್ ಟಿಕೇಶ್ (38) ಮತ್ತು ಆತನ ಪತ್ನಿ ಗಣೇಶಿ ನೇತಮ್ ಅಲಿಯಾಸ್ ಪ್ರಮೀಳಾ (32) ಶನಿವಾರ ತಮ್ಮ ಮಾವೋವಾದಿ ಸಿದ್ಧಾಂತಗಳಿಂದ ನಿರಾಸೆಗೊಂಡು ಶರಣಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಕ್ಸಲ್ ದಂಪತಿಯ ಸುಳಿವು ನೀಡಿದವರಿಗೆ ತಲಾ ₹5 ಲಕ್ಷ ಬಹುಮಾನವನ್ನು ಘೋಷಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
2013 ಮತ್ತು 2023ರ ನಡುವೆ ಧಮ್ತಾರಿಯಲ್ಲಿ 18, ಗರಿಯಾಬಂದ್‌ನಲ್ಲಿ 12 ಮತ್ತು ಕಾಂಕೇರ್ ಜಿಲ್ಲೆಗಳಲ್ಲಿ ಎರಡು ಹಿಂಸಾತ್ಮಕ ಘಟನೆಗಳಲ್ಲಿ ಟಿಕೇಶ್ ಭಾಗಿಯಾಗಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಧಮ್ತಾರಿ, ಗರಿಯಾಬಂದ್ ಮತ್ತು ಕಾಂಕೇರ್ ಜಿಲ್ಲೆಗಳಲ್ಲಿ ನಡೆದ ಸುಮಾರು 14 ಹಿಂಸಾತ್ಮಕ ಘಟನೆಗಳಲ್ಲಿ ಪ್ರಮೀಳಾ ಭಾಗಿಯಾಗಿದ್ದರು.
ಟಿಕೇಶ್ ಗೋಬ್ರಾ ಲೋಕಲ್ ಆರ್ಗನೈಸೇಶನ್ ಸ್ಕ್ವಾಡ್ ಮತ್ತು ನಿಷೇಧಿತ ಮಾವೋವಾದಿಗಳ ನಗ್ರಿ ಪ್ರದೇಶ ಸಮಿತಿಯ ಸದಸ್ಯರಾಗಿದ್ದರು ಮತ್ತು ಪ್ರಮೀಳಾ ಸೀತಾನದಿ ಪ್ರದೇಶ ಸಮಿತಿಯ ಸದಸ್ಯರಾಗಿದ್ದರು ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.