ಬಿಜಾಪುರ: ಛತ್ತೀಸಗಢದ ಬಿಜಾಪುರ ಜಿಲ್ಲೆಯಲ್ಲಿ ಭಾನುವಾರ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಒಬ್ಬ ನಕ್ಸಲ್ ಗಾಯಗೊಂಡಿದ್ದಾನೆ.
ರಾಜ್ಯ ಪೊಲೀಸರು, ಜಿಲ್ಲಾ ಮೀಸಲು ಪೊಲೀಸ್ ಪಡೆಯು ಭೈರಮಗಡದ ಪೊಲೀಸ್ ಠಾಣಾ ವ್ಯಾಪ್ತಿಯ ಕುಮ್ಮಾಮೆಟಾ ಗ್ರಾಮದ ಅರಣ್ಯದಲ್ಲಿ ನಕ್ಸಲ್ ತಡೆ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ ಕಮಾಂಡರ್ ಅನಿಲ್ ಪುನೆಂ ಸೇರಿದಂತೆ 10ರಿಂದ 12 ಮಂದಿ ನಕ್ಸಲರು ಸ್ಥಳದಲ್ಲಿದ್ದರು.
‘ಎರಡೂ ಕಡೆ ಗುಂಡಿನ ಚಕಮಕಿ ಸ್ಥಗಿತಗೊಂಡ ಬಳಿಕ, ಸ್ಥಳದಲ್ಲಿ ನಕ್ಸಲ್ ರಾಕೇಶ್ ಕುಮಾರ್ ಒಯಂ ಗಾಯಗೊಂಡಿದ್ದು ಕಂಡುಬಂದಿದೆ. ತಕ್ಷಣವೇ ಬಿಜಾಪುರ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದು, ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಜಗದಲ್‌ಪುರ ಆಸ್ಪತ್ರೆಗೆ ವರ್ಗಾಯಿಸಲಾಯಿತು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಾಯಾಳು ರಾಕೇಶ್ ಕುಮಾರ್ ಅವರು ರೆವಲ್ಯೂಷನರಿ ಪಕ್ಷದ ಬೆಲ್ಚಾರ್ ಸಮಿತಿಯ ಸದಸ್ಯರಾಗಿದ್ದರು. ಅವರ ವಿರುದ್ಧ ರಾಜ್ಯದ ವಿವಿಧ ಠಾಣೆಯಲ್ಲಿ ನಾಲ್ಕು ಪ್ರಕರಣಗಳು ದಾಖಲಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.