ADVERTISEMENT

Haryana Election: ಬಿಜೆಪಿಯ ಹ್ಯಾಟ್ರಿಕ್ ಗೆಲುವಿನಲ್ಲಿ ಸೈನಿ ಕೈಚಳಕ

ಪಿಟಿಐ
Published 8 ಅಕ್ಟೋಬರ್ 2024, 16:07 IST
Last Updated 8 ಅಕ್ಟೋಬರ್ 2024, 16:07 IST
<div class="paragraphs"><p>ನಾಯಬ್ ಸಿಂಗ್ ಸೈನಿ </p></div>

ನಾಯಬ್ ಸಿಂಗ್ ಸೈನಿ

   

–ಪಿಟಿಐ ಚಿತ್ರ

ಚಂಡೀಗಢ: ಹರಿಯಾಣ ವಿಧಾನಸಭೆಗೆ ಚುನಾವಣೆ ನಡೆಯುವುದಕ್ಕೆ ಕೆಲವು ತಿಂಗಳ ಮೊದಲು ಬಿಜೆಪಿ ವರಿಷ್ಠರು ಹರಿಯಾಣದ ಪ್ರಬಲ ನಾಯಕ ಮನೋಹರ ಲಾಲ್ ಖಟ್ಟರ್ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದರು. ಅವರ ಸ್ಥಾನಕ್ಕೆ ಒಬಿಸಿ ಸಮುದಾಯಕ್ಕೆ ಸೇರಿದ, ತಾನು ಪ್ರಬಲ ಎಂದು ಬಿಂಬಿಸಿಕೊಳ್ಳದ ನಾಯಕ ನಾಯಬ್ ಸಿಂಗ್ ಸೈನಿ ಅವರನ್ನು ತರಲಾಯಿತು. ವರಿಷ್ಠರ ಈ ತೀರ್ಮಾನವು ಹಲವರಲ್ಲಿ ಆಶ್ಚರ್ಯ ಮೂಡಿಸಿತ್ತು.

ADVERTISEMENT

ಬಿಜಿಪಿ ತೆಗೆದುಕೊಂಡಿದ್ದ ತೀರ್ಮಾನವು ಫಲ ನೀಡಿದೆ. ಲೋಕಸಭಾ ಚುನಾವಣೆಯಲ್ಲಿ ಹರಿಯಾಣದಲ್ಲಿ ಬಿಜೆಪಿಯ ಸಾಧನೆ ನಿರಾಶಾದಾಯವಾಗಿ ಇತ್ತಾದರೂ, ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಸೈನಿ ಅವರು ಪಕ್ಷವನ್ನು ಗೆಲುವಿನತ್ತ ಒಯ್ದಿದ್ದಾರೆ. ಮತದಾನೋತ್ತರ ಸಮೀಕ್ಷೆಗಳ ಫಲಿತಾಂಶಗಳು ತಲೆಕೆಳಗಾಗಿವೆ.

ಹರಿಯಾಣ ರಾಜ್ಯದ ಬಿಜೆಪಿ ಘಟಕದ ಅಧ್ಯಕ್ಷರಾಗಿದ್ದ ಸೈನಿ ಅವರಿಗೆ ಮುಖ್ಯಮಂತ್ರಿ ಸ್ಥಾನಕ್ಕೆ ಪದೋನ್ನತಿ ನೀಡಿದಾಗ ಅಲ್ಲಿ ಪಕ್ಷವು ಆಡಳಿತ ವಿರೋಧಿ ಅಲೆಯನ್ನು ಎದುರಿಸುತ್ತಿತ್ತು. ಖಟ್ಟರ್ ಅವರು ಒಂಬತ್ತೂವರೆ ವರ್ಷಗಳಿಂದ ಆಡಳಿತದಲ್ಲಿ ಇದ್ದರು. ಅಲ್ಲದೆ, ವಿರೋಧ ಪಕ್ಷಗಳು ರೈತರ ಸಮಸ್ಯೆಗಳು, ನಿರುದ್ಯೋಗ, ಕಾನೂನು ಮತ್ತು ಸುವ್ಯವಸ್ಥೆ, ಅಗ್ನಿಪಥ ಯೋಜನೆಯನ್ನು ಮುಂದಿಟ್ಟುಕೊಂಡು ಆಡಳಿತ ಪಕ್ಷದ ಮೇಲೆ ನಿರಂತರವಾಗಿ ವಾಗ್ಬಾಣ ಎಸೆಯುತ್ತಿದ್ದವು.

ಸೈನಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ಲೋಕಸಭಾ ಚುನಾವಣೆ ಘೋಷಣೆ ಆಯಿತು, ನೀತಿ ಸಂಹಿತೆ ಜಾರಿಗೆ ಬಂತು. ನಂತರ, ವಿಧಾನಸಭಾ ಚುನಾವಣೆ ಘೋಷಣೆಯಾಗಿ, ಇನ್ನೊಂದು ಸುತ್ತಿನ ನೀತಿ ಸಂಹಿತೆ ಜಾರಿಗೆ ಬಂತು. ಅಂದರೆ, ಸಾರ್ವಜನಿಕರಲ್ಲಿ ಸರ್ಕಾರದ ಬಗ್ಗೆ ಮೂಡಿದ್ದ ಭಾವನೆಯನ್ನು ಬದಲಾಯಿಸಲು ಸೈನಿ ಅವರಿಗೆ ಇದ್ದ ಕಾಲಾವಕಾಶ ಎರಡು ತಿಂಗಳು ಮಾತ್ರ. ಸಮಯ ವ್ಯರ್ಥ ಮಾಡದೆ ಕೆಲಸ ಶುರು ಮಾಡಿದ ಸೈನಿ, ಸಂಪುಟದ ಮೂಲಕ ಕೆಲವು ಪ್ರಮುಖ ತೀರ್ಮಾನಗಳನ್ನು ಕೈಗೊಂಡರು.

ಹರಿಯಾಣ ಅಗ್ನಿವೀರ ನೀತಿ –2024ಕ್ಕೆ ಒಪ್ಪಿಗೆ ನೀಡುವುದು, ಕನಿಷ್ಠ ಬೆಂಬಲ ಬೆಲೆ ನೀಡಿ ಹೆಚ್ಚುವರಿಯಾಗಿ 10 ಬೆಳೆಗಳನ್ನು ಖರೀದಿಸುವುದು ಪ್ರಮುಖ ತೀರ್ಮಾನಗಳ ಪೈಕಿ ಒಂದಾಗಿದ್ದವು.

ಬಿಜೆಪಿ ಕೂಡ ಅಡುಗೆ ಅನಿಲವನ್ನು ಸಿಲಿಂಡರ್‌ಗೆ ₹500ಕ್ಕೆ ಪೂರೈಸುವುದಾಗಿ ಭರವಸೆ ನೀಡಿತು. ಪಕ್ಷದ ಪ್ರಣಾಳಿಕೆಯಲ್ಲಿ ಇನ್ನೂ ಹಲವು ಘೋಷಣೆಗಳಿದ್ದವು. ಮಹಿಳೆಯರಿಗೆ ತಿಂಗಳಿಗೆ ₹2,100 ನೆರವು, ಯುವಕರಿಗೆ ಎರಡು ಲಕ್ಷ ಸರ್ಕಾರಿ ಉದ್ಯೋಗ, ಹರಿಯಾಣದ ಅಗ್ನಿವೀರರಿಗೆ ಸರ್ಕಾರದಲ್ಲಿ ನೌಕರಿ ನೀಡುವ ಖಾತರಿ ಅವುಗಳಲ್ಲಿ ಪ್ರಮುಖವಾದವು.

ಬಿಜೆಪಿಯ ಚುನಾವಣಾ ಪ್ರಚಾರವು ಹಿಂದೆ ಕಾಂಗ್ರೆಸ್ ಆಡಳಿತಾವಧಿಯಲ್ಲಿ ನಡೆದಿತ್ತು ಎನ್ನಲಾದ ಭ್ರಷ್ಟಾಚಾರ, ಸ್ವಜನಪಕ್ಷಪಾತ, ಹಗರಣಗಳನ್ನು ಕೇಂದ್ರೀಕರಿಸಿದ್ದವು. ರಾಜ್ಯದ ಉದ್ದಗಲಕ್ಕೂ ಪ್ರವಾಸ ಕೈಗೊಂಡ ಸೈನಿ, ಬಿಜೆಪಿ ನೇತೃತ್ವದ ಸರ್ಕಾರದ ಸಾಧನೆಗಳನ್ನು ಜನರಿಗೆ ವಿವರಿಸಿದರು. ಹಿಮಾಚಲ ಪ್ರದೇಶ, ಕರ್ನಾಟಕ, ತೆಲಂಗಾಣ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷವು ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಕೆಲವು ಭರವಸೆಗಳನ್ನು ಅಧಿಕಾರಕ್ಕೆ ಬಂದ ನಂತರ ಈಡೇರಿಸಿಲ್ಲ ಎಂದೂ ಬಿಜೆಪಿಯು ಹರಿಯಾಣದ ಮತದಾರರ ಎದುರು ಹೇಳಿತು.

ಪಕ್ಷವು ಅಧಿಕಾರಕ್ಕೆ ಮರಳಿದಲ್ಲಿ, ಸೈನಿ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ಬಿಜೆಪಿಯು ಹೇಳಿತ್ತು. 

ಸೈನಿ ಕುರಿತು

ಹರಿಯಾಣದ ಅಂಬಾಲಾ ಜಿಲ್ಲೆಯ ಮಿರ್ಜಾಪುರ ಮಾಜರಾ ಗ್ರಾಮದಲ್ಲಿ 1970ರ ಜನವರಿ 25ರಂದು ಜನಿಸಿದ ನಾಯಬ್ ಸಿಂಗ್ ಸೈನಿ ಅವರು ಮನೋಹರ ಲಾಲ್ ಖಟ್ಟರ್ ನೇತೃತ್ವದ ಸಂಪುಟದಲ್ಲಿ 2014ರಿಂದ 2019ರವರೆಗೆ ಸಚಿವರಾಗಿ ಕೆಲಸ ಮಾಡಿದ್ದರು. 

ಮೂರು ದಶಕಗಳ ಅವಧಿಯಲ್ಲಿ ಸೈನಿ ಅವರು ಬಿಜೆಪಿಯಲ್ಲಿ ತಳಮಟ್ಟದಿಂದ ಮೇಲೆ ಬಂದಿದ್ದಾರೆ. ಹಿಂದೆ ಬಿಜೆಪಿಯ ಜಿಲ್ಲಾ ಅಧ್ಯಕ್ಷ ಹುದ್ದೆಯನ್ನು ನಿರ್ವಹಿಸಿದ್ದ ಅವರು ನಂತರ ಪಕ್ಷದ ರಾಜ್ಯ ಘಟಕದ ಕಿಸಾನ್ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕೂಡ ಆಗಿದ್ದರು.

ಬಿಜೆಪಿ ಯುವ ವಿಭಾಗದ ಅಂಬಾಲಾ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಜಿಲ್ಲಾ ಅಧ್ಯಕ್ಷರಾಗಿ ಅವರು ಕೆಲಸ ಮಾಡಿದ್ದಾರೆ. 2014ರಲ್ಲಿ ನಾರಾಯಣಗಢ ಕ್ಷೇತ್ರದಿಂದ ಹರಿಯಾಣ ವಿಧಾನಸಭೆಗೆ ಆಯ್ಕೆಯಾಗಿದ್ದರು. ನಂತರ 2019ರಲ್ಲಿ ಕುರುಕ್ಷೇತ್ರ ಕ್ಷೇತ್ರದಿಂದ ಸ್ಪರ್ಧಿಸಿ ಲೋಕಸಭೆ ಪ್ರವೇಶಿಸಿದ್ದರು.

ಒಬಿಸಿ ಸಮುದಾಯಗಳ ಮೇಲಿನ ಹಾಗೂ ಜಾಟ್ ಹೊರತುಪಡಿಸಿದ ಸಮುದಾಯಗಳ ಮೇಲಿನ ಹಿಡಿತವನ್ನು ಬಲಪಡಿಸಿಕೊಳ್ಳಲು ಬಿಜೆಪಿಯು ಸೈನಿ ಅವರನ್ನು 2023ರ ಅಕ್ಟೋಬರ್‌ನಲ್ಲಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ನೇಮಕ ಮಾಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.