ಚಂಡೀಗಢ: ಇತರ ಹಿಂದುಳಿದ ವರ್ಗಗಳ (ಒಬಿಸಿ) ನಾಯಕ ನಯಾಬ್ ಸಿಂಗ್ ಸೈನಿ (54) ಅವರು ಗುರುವಾರ ಹರಿಯಾಣದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಈ ಮೂಲಕ ಅವರು ಸತತ ಎರಡನೇ ಬಾರಿಗೆ ಮುಖ್ಯಮಂತ್ರಿ ಹುದ್ದೆಗೆ ಏರಿದಂತಾಯಿತು.
ರಾಮಾಯಣ ಮಹಾಕಾವ್ಯ ರಚಿಸಿದ ಕವಿ ವಾಲ್ಮೀಕಿ ಜಯಂತಿ ದಿನದಂದು ಇಲ್ಲಿನ ದಸರಾ ಮೈದಾನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ, ರಾಜ್ಯಪಾಲ ಬಂಡಾರು ದತ್ತಾತ್ರೇಯ ಅವರು ಸೈನಿ ಅವರಿಗೆ ಅಧಿಕಾರದ ಗೋಪ್ಯತೆ ಬೋಧಿಸಿದರು. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿಯ ಹಲವು ನಾಯಕರು ಮತ್ತು ಸಹಸ್ರಾರು ಜನರು ಈ ಕ್ಷಣಕ್ಕೆ ಸಾಕ್ಷಿಯಾದರು.
ಸಚಿವರಾಗಿ ಪ್ರಮಾಣ: ಶಾಸಕರಾದ ಅನಿಲ್ ವಿಜ್, ಕ್ರಿಶನ್ ಲಾಲ್ ಪನ್ವಾರ್, ರಾವ್ ನರಬೀರ್ ಸಿಂಗ್, ಮಹಿಪಾಲ್ ಧಂಡಾ, ವಿಪುಲ್ ಗೋಯೆಲ್, ಅರವಿಂದ್ ಶರ್ಮಾ, ಶ್ಯಾಮ್ ಸಿಂಗ್ ರಾಣಾ, ರಣಬೀರ್ ಗಂಗ್ವಾ, ಕುಮಾರ್ ಬೇಡಿ, ಮಹಿಳಾ ಶಾಸಕರಾದ ಶೃತಿ ಚೌಧರಿ, ಆರತಿ ಸಿಂಗ್ ರಾವ್ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಶಾಸಕರಾದ ರಾಜೇಶ್ ನಾಗರ್, ಗೌರವ್ ಗೌತಮ್ ಅವರು ಸ್ವತಂತ್ರ ಖಾತೆಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಹರಿಯಾಣ ಸಂಪುಟದಲ್ಲಿ ಮುಖ್ಯಮಂತ್ರಿ ಸೇರಿ ಒಟ್ಟು 14 ಸಚಿವರಿಗೆ ಅವಕಾಶವಿದೆ.
ಕೇಂದ್ರ ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್, ನಿತಿನ್ ಗಡ್ಕರಿ, ಚಿರಾಗ್ ಪಾಸ್ವಾನ್, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಬಿಜೆಪಿ ಮತ್ತು ಎನ್‌ಡಿಎ ಆಳ್ವಿಕೆಯಿರುವ ರಾಜ್ಯಗಳ ಮುಖ್ಯಮಂತ್ರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
ಪ್ರಮಾಣ ವಚನ ಸ್ವೀಕರಿಸುವುದಕ್ಕೂ ಮುನ್ನ ಸೈನಿ ಅವರು ವಾಲ್ಮೀಕಿ ಭವನ, ಗುರುದ್ವಾರ ಮತ್ತು ಪಂಚಕುಲದ ಮಾನಸಾ ದೇವಿ ದೇಗುಲಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.
ಪ್ರಣಾಳಿಕೆ ಪೂರ್ಣ ಜಾರಿ: ಸುದ್ದಿಗಾರರ ಜತೆ ಮಾತನಾಡಿದ ಸೈನಿ, ‘ನಾವು 2014 ಮತ್ತು 2019ರ ಸಂಕಲ್ಪ ಪತ್ರದಲ್ಲಿ (ಪ್ರಣಾಳಿಕೆ) ಘೋಷಿಸಿದ್ದ ಕಾರ್ಯಕ್ರಮಗಳನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸಿದ್ದೇವೆ. ಅದೇ ರೀತಿ ಈ ಬಾರಿಯ ಸಂಕಲ್ಪ ಪತ್ರವನ್ನು ಅನುಷ್ಠಾನಗೊಳಿಸುತ್ತೇವೆ’ ಎಂದರು.
ಹರಿಯಾಣ ವಿಧಾನಸಭೆಯ 90 ಕ್ಷೇತ್ರಗಳಿಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 48 ಸ್ಥಾನಗಳನ್ನು ಗೆಲ್ಲುವ ಮೂಲಕ ಬಹುಮತ ಪಡೆದಿತ್ತು. ಹಿಸಾರ್ ಶಾಸಕಿ ಸಾವಿತ್ರಿ ಜಿಂದಾಲ್ ಸೇರಿದಂತೆ ಮೂವರು ಪಕ್ಷೇತರ ಶಾಸಕರು ಬಿಜೆಪಿಗೆ ಬೆಂಬಲ ಘೋಷಿಸಿದ್ದಾರೆ.
ಹರಿಯಾಣದಲ್ಲಿ ಈ ವರ್ಷದ ಮಾರ್ಚ್‌ನಲ್ಲಿ ಮನೋಹರ್ ಲಾಲ್ ಖಟ್ಟರ್ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ, ಸೈನಿ ಅವರಿಗೆ ಅವಕಾಶ ಮಾಡಿಕೊಡಲಾಗಿತ್ತು.
ಪ್ರಮಾಣ ವಚನಕ್ಕೆ ತಡೆಗೆ ‘ಸುಪ್ರೀಂ’ ನಕಾರ
ನವದೆಹಲಿ: ಹರಿಯಾಣ ಮುಖ್ಯಮಂತ್ರಿಯಾಗಿ ನಯಾಬ್ ಸಿಂಗ್ ಸೈನಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ತಡೆ ನೀಡುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಗುರುವಾರ ವಜಾಗೊಳಿಸಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದೀವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು ‘ಇದೆಂಥಾ ಮನವಿ? ಇದನ್ನು ನಾವು ವಜಾಗೊಳಿಸುತ್ತೇವೆ’ ಎಂದು ಹೇಳಿತು.
ಅರ್ಜಿದಾರರ ಪರ ಹಾಜರಿದ್ದ ವಕೀಲರು ಹರಿಯಾಣದ ಚುನಾವಣೆಯ ಮತ ಎಣಿಕೆ ಸಂದರ್ಭದಲ್ಲಿ ಕೆಲವು ಇವಿಎಂಗಳಲ್ಲಿ ವ್ಯತ್ಯಾಸಗಳು ಕಂಡುಬಂದಿವೆ. ಕೆಲವು ಇವಿಎಂಗಳಲ್ಲಿ ಶೇ 99ರಷ್ಟು ಬ್ಯಾಟರಿ ಚಾರ್ಜ್ ಇತ್ತು ಎಂದು 20 ದೂರುಗಳು ಆಯೋಗಕ್ಕೆ ಸಲ್ಲಿಕೆಯಾಗಿವೆ ಎಂದು ತಿಳಿಸಿದರು.
ಅರ್ಜಿದಾರರ ಮನವಿಯನ್ನು ತಿರಸ್ಕರಿಸಿದ ಪೀಠ ‘ಚುನಾಯಿತ ಸರ್ಕಾರ ಪ್ರಮಾಣ ವಚನ ಸ್ವೀಕರಿಸುವುದನ್ನು ನಾವು ಹೇಗೆ ತಡೆಯಬಹುದು’ ಎಂದು ಪ್ರಶ್ನಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.