ಬನಿಹಾಲ್: ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ನ್ಯಾಷನಲ್ ಕಾನ್ಫರೆನ್ಸ್‌ನ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಅವರು ಸೋಮವಾರ ತಿರುಗೇಟು ನೀಡಿದರು.
ಇಲ್ಲಿ ನಡೆದ ಚುನಾವಣಾ ರ್‍ಯಾಲಿಯೊಂದರಲ್ಲಿ ಮಾತನಾಡಿದ ಅವರು, ‘ಭಯೋತ್ಪಾದನೆ ನಿಗ್ರಹಿಸುವ ಸಂಬಂಧ ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಲು ಕೇಂದ್ರ ಸರ್ಕಾರ ಸಿದ್ಧವಿದೆ ಎಂದು ಸಚಿವ ರಾಜನಾಥ ಹೇಳುತ್ತಾರೆ. ನಾವು ಇದನ್ನೇ ನಮ್ಮ ಪ್ರಣಾಳಿಕೆಯಲ್ಲಿ ಹೇಳಿದ್ದೇವೆ. ಆದರೆ, ಸಚಿವ ಅಮಿತ್ ಶಾ ಅವರು ನಮ್ಮ ಪ್ರಣಾಳಿಕೆಯಲ್ಲಿನ ಈ ಅಂಶಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ರಕ್ಷಣಾ ಸಚಿವರು ಸರಿಯೊ, ಗೃಹ ಸಚಿವರು ಸರಿಯೊ’ ಎಂದು ಪ್ರಶ್ನಿಸಿದರು.
‘ಅಮಿತ್ ಶಾ ಅವರು ಹುರಿಯತ್‌ನೊಂದಿಗೆ ಮಾತುಕತೆ ಸಾಧ್ಯವಿಲ್ಲ ಎನ್ನುತ್ತಾರೆ. ಆದರೆ, 2016ರಲ್ಲಿ ಹುರಿಯತ್‌ನೊಂದಿಗೆ ಮಾತುಕತೆ ನಡೆಸಲು ಸಂಸದರ ನಿಯೋಗ ಹೋಗಿತ್ತು ಎಂದು ರಾಜನಾಥ್ ಸಿಂಗ್ ಹೇಳುತ್ತಾರೆ. ಯಾರು ಸತ್ಯ ಹೇಳುತ್ತಿದ್ದಾರೆ?’ ಎಂದರು.
‘ಈ ರೀತಿಯ ರಾಜಕಾರಣವನ್ನು ಜಮ್ಮು ಮತ್ತು ಕಾಶ್ಮೀರದ ಜನರು ಇಷ್ಟ ಪಡುವುದಿಲ್ಲ. ಅಕ್ಟೋಬರ್ 8ಕ್ಕೆ (ಫಲಿತಾಂಶದ ದಿನ) ಇಲ್ಲಿಗೆ ಬನ್ನಿ. ನಮ್ಮ ಮೈತ್ರಿಕೂಟದ ಸರ್ಕಾರ ರಚನೆಯಾಗುತ್ತದೆ. ಜನರು ಅನುಭವಿಸುತ್ತಿರುವ ಹಿಂಸೆಯು ಅಂತ್ಯ ಕಾಣುವ ಕಾಲ ಸನ್ನಿಹಿತವಾಗಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.