ADVERTISEMENT

ಅಂತರರಾಷ್ಟ್ರೀಯ ಡ್ರಗ್ ಮಾಫಿಯಾ ಜೊತೆ ನಂಟು: ಡಿಎಂಕೆ ಮಾಜಿ ನಾಯಕನ ಬಂಧನ

ಪಿಟಿಐ
Published 9 ಮಾರ್ಚ್ 2024, 11:02 IST
Last Updated 9 ಮಾರ್ಚ್ 2024, 11:02 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಅಂತರರಾಷ್ಟ್ರೀಯ ಮಟ್ಟದ ಮಾದಕ ವಸ್ತುಗಳ ದಂಧೆಯ ನಂಟು ಹೊಂದಿರುವ ಆರೋಪದಡಿ ತಮಿಳುನಾಡಿನ ಡಿಎಂಕೆ ಪಕ್ಷದ ಮಾಜಿ ಪದಾಧಿಕಾರಿ, ನಿರ್ಮಾಪಕ ಜಾಫರ್‌ ಸಾಧಿಕ್‌ ಅವರನ್ನು ಬಂಧಿಸಲಾಗಿದೆ ಎಂದು ಮಾದಕ ವಸ್ತುಗಳ ನಿಯಂತ್ರಣ ಸಂಸ್ಥೆ(ಎನ್‌ಸಿಬಿ) ಶನಿವಾರ ತಿಳಿಸಿದೆ.

‘₹2000 ಕೋಟಿ ಮೌಲ್ಯದ ಮಾದಕ ವಸ್ತುಗಳ ದಂಧೆ ಕುರಿತಾಗಿ ತನಿಖೆ ನಡೆಯುತ್ತಿದ್ದು, ಅದರ ಭಾಗವಾಗಿ ಸಾಧಿಕ್‌ ಅವರನ್ನು ದೆಹಲಿಯಲ್ಲಿ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ’ ಎಂದು ಎನ್‌ಸಿಬಿ ಮಾಹಿತಿ ನೀಡಿದೆ.

ತಮಿಳು ಚಲನಚಿತ್ರ ನಿರ್ಮಾಪರಾಗಿರುವ ಸಾಧಿಕ್‌ ಅವರು ಆಡಳಿತಾರೂಢ ಡಿಎಂಕೆ ಪಕ್ಷದ ವಿದೇಶಿ ಘಟಕದ ಪದಾಧಿಕಾರಿಯಾಗಿದ್ದರು. ಮಾದಕ ವಸ್ತುಗಳ ದಂಧೆಯಲ್ಲಿ ಸಾಧಿಕ್ ಹೆಸರು ಕೇಳಿ ಬಂದ ಹಿನ್ನೆಲೆ ಡಿಎಂಕೆಯು ಇತ್ತೀಚಿಗೆ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿತ್ತು.

ADVERTISEMENT

‘ಸಾಧಿಕ್ ಅವರು ಭಾರತ, ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ದೇಶಗಳಲ್ಲಿ ಹರಡಿರುವ ಮಾದಕ ವಸ್ತುಗಳ ಜಾಲದ ಮಾಸ್ಟರ್‌ ಮೈಂಡ್‌ ಮತ್ತು ಕಿಂಗ್‌ಪಿನ್‌ ಆಗಿದ್ದಾರೆ’ ಎಂದು ಎನ್‌ಸಿಬಿ ತಿಳಿಸಿದೆ.

‘ಮಾದಕ ವಸ್ತುಗಳ ದಂಧೆಯಲ್ಲಿ ಗಳಿಸಿದ ಹಣವನ್ನು ಉದ್ಯಮ, ಸಿನಿಮಾ ಇನ್ನಿತರ ಚಟುವಟಿಕೆಗಳಿಗೆ ವಿನಿಯೋಗಿಸಿರುವುದಾಗಿ ಸಾಧಿಕ್ ಒಪ್ಪಿಕೊಂಡಿದ್ದಾರೆ’ ಎಂದು ಮಾಹಿತಿ ನೀಡಿದೆ.

ಭಾರತದಿಂದ ಬೃಹತ್‌ ಪ್ರಮಾಣದಲ್ಲಿ ಮಾದಕ ವಸ್ತುಗಳ ಕಳ್ಳಸಾಗಾಣಿಕೆ ಆಗುತ್ತಿರುವ ಬಗ್ಗೆ ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್‌ ಅಧಿಕಾರಿಗಳು ನೀಡಿದ ಮಾಹಿತಿ ಆಧರಿಸಿ ಎನ್‌ಸಿಬಿಯು ಕಳೆದ ತಿಂಗಳು ದೆಹಲಿಯಲ್ಲಿ ದಾಳಿ ನಡೆಸಿತ್ತು. ಆ ದಾಳಿಯಲ್ಲಿ ತಮಿಳುನಾಡಿನ ಮೂವರನ್ನು ಬಂಧಿಸಿ 50 ಕಿಲೋ ಗ್ರಾಂ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿತ್ತು.

‘ಕಳೆದ ಮೂರು ವರ್ಷಗಳಲ್ಲಿ ₹2000 ಕೋಟಿ ಮೌಲ್ಯದ 3,500 ಕಿಲೋ ಗ್ರಾಂ ಮಾದಕ ವಸ್ತುಗಳನ್ನು ಅಂತರರಾಷ್ಟ್ರೀಯ ಮಾರುಕಟ್ಟೆಗೆ ಪೂರೈಸಿರುವುದಾಗಿ ಬಂಧಿತ ಆರೋಪಿಗಳು ಮಾಹಿತಿ ನೀಡಿದ್ದಾರೆ’ ಎಂದು ಎನ್‌ಸಿಬಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.