ADVERTISEMENT

ವರ್ಚುವಲ್‌ ವೇದಿಕೆಯಲ್ಲಿ ‘ಪರೀಕ್ಷಾ ಪೆ ಚರ್ಚಾ’

ಪಿಟಿಐ
Published 4 ಜುಲೈ 2024, 14:21 IST
Last Updated 4 ಜುಲೈ 2024, 14:21 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ವಾರ್ಷಿಕ ‘ಪರೀಕ್ಷಾ ಪೆ ಚರ್ಚಾ’ ಕಾರ್ಯಕ್ರಮವನ್ನು ವರ್ಚುವಲ್‌ ವೇದಿಕೆಗಾಗಿ ರೂಪಿಸುವ ಪ್ರಸ್ತಾವನೆಯಡಿ ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್‌ (ಎನ್‌ಸಿಇಆರ್‌ಟಿ) ಕಾರ್ಯ ನಿರ್ವಹಿಸುತ್ತಿದೆ.

ಈ ಮೂಲಕ ಪ್ರಧಾನಿ ಅವರ ಭಾಷಣಗಳನ್ನು ಹಂಚಿಕೊಳ್ಳುವ ಮತ್ತು ಸಂವಾದಾತ್ಮಕ 2ಡಿ/3ಡಿ ಪರಿಸರದಲ್ಲಿ ಪ್ರಧಾನಿ ಅವರೊಂದಿಗೆ ಸೆಲ್ಫಿಗಳನ್ನು ತೆಗೆದುಕೊಳ್ಳಲು ವಿದ್ಯಾರ್ಥಿಗಳಿಗೆ ಅವಕಾಶ ದೊರೆಯಲಿದೆ.

ADVERTISEMENT

ದೇಶದಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ಅಕ್ರಮಗಳ ಆರೋಪಗಳಿಂದ ಪರೀಕ್ಷಾ ಪ್ರಕ್ರಿಯೆಗಳ ವಿಶ್ವಾಸಾರ್ಹತೆ ಬಗ್ಗೆ ಹಲವು ಪ್ರಶ್ನೆಗಳು ಕಾಡುತ್ತಿರುವಾಗ ಹಾಗೂ ಮೋದಿ ಅವರು ‘ನೀಟ್‌’ಗೆ ಸಂಬಂಧಿಸಿದಂತೆ ಸಂವಾದ ನಡೆಸಬೇಕು ಎಂದು ವಿರೋಧ ಪಕ್ಷಗಳು ಆಗ್ರಹಿಸುತ್ತಿರುವ ಬೆನ್ನಲ್ಲೇ ಎನ್‌ಸಿಇಆರ್‌ಟಿ ಈ ಯೋಜನೆ ಕೈಗೆತ್ತಿಕೊಂಡಿದೆ.

‘ಪರೀಕ್ಷಾ ಪೆ ಚರ್ಚಾ’ಗಾಗಿ ‘ವರ್ಚುವಲ್‌ ಎಕ್ಸಿಬಿಷನ್‌’ ಅನ್ನು ಅಭಿವೃದ್ಧಿಪಡಿಸಲು ಎನ್‌ಸಿಇಆರ್‌ಟಿ ಮಾರಾಟಗಾರರನ್ನು ಆಹ್ವಾನಿಸಿದೆ. ಸಂವಾದಾತ್ಮಕ 2ಡಿ/3ಡಿ ಪರಿಸರದೊಂದಿಗೆ ವರ್ಚುವಲ್‌ ಪ್ಲಾಟ್‌ಫಾರ್ಮ್ ಅನ್ನು ಅಭಿವೃದ್ಧಿಪಡಿಸಬೇಕು ಎಂದು ಅದು ಹೇಳಿದೆ. ಅಲ್ಲದೆ ವಾರ್ಷಿಕವಾಗಿ ಕನಿಷ್ಠ ಒಂದು ಕೋಟಿ ಆನ್‌ಲೈನ್‌ ಸಂದರ್ಶಕರನ್ನು ಸೆಳೆಯುವ ಯೋಜನೆ ಇದಾಗಿದೆ ಎಂದೂ ಅದು ತಿಳಿಸಿದೆ.

‘ಪರೀಕ್ಷಾ ಪೆ ಚರ್ಚಾ ಅನ್ನು ವರ್ಚುವಲ್‌ ರೂಪದಲ್ಲಿ ಮರುಸೃಷ್ಟಿಸುವುದು ಯೋಜನೆ ಗುರಿಯಾಗಿದೆ. ದೇಶದಾದ್ಯಂತ ಪ್ರೇಕ್ಷಕರು ತಮ್ಮ ಮನೆಯ ಸೌಕರ್ಯದಿಂದ ವರ್ಷಪೂರ್ತಿ ಇದನ್ನು ನೋಡುವುದಕ್ಕೆ ಪೂರಕವಾಗಿರಬೇಕು. ವಿದ್ಯಾರ್ಥಿಗಳು ಪ್ರದರ್ಶಿಸುವ ಕಲೆ, ಕರಕುಶಲ ಮತ್ತು ನಾವೀನ್ಯತೆಯ ಯೋಜನೆಗಳನ್ನು ಇಲ್ಲಿ ಪ್ರದರ್ಶಿಸಲಾಗುತ್ತದೆ. ಈ ಮೂಲಕ ಇತರರಿಗೆ ಸ್ಫೂರ್ತಿ ಮತ್ತು ಪ್ರೇರಣೆ ನೀಡಲಾಗುತ್ತದೆ’ ಎಂದು ಅದು ಹೇಳಿದೆ.

ವರ್ಚುವಲ್‌ ಪ್ರದರ್ಶನವು ಸಭಾಂಗಣ, ಸೆಲ್ಫಿ ವಲಯ, ರಸಪ್ರಶ್ನೆ ವಲಯ ಮತ್ತು ಲೀಡರ್‌ ಬೋರ್ಡ್‌ ಅನ್ನು ಒಳಗೊಂಡಿರುತ್ತದೆ. ಪ್ರಧಾನಿ ಅವರೊಂದಿಗೆ ಸೆಲ್ಫಿಗಳನ್ನು  ಸೆರೆಹಿಡಿಯಲು, ಅವುಗಳನ್ನು ಸೆಲ್ಫಿ ಗೋಡೆಯ ಮೇಲೆ ಪೋಸ್ಟ್‌ ಮಾಡಲು ಅಥವಾ ಅವುಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಲು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲು ನೆರವಾಗುವಂತೆ ಪೋರ್ಟಲ್‌ ವಿನ್ಯಾಸಗೊಳಿಸಲಾಗುತ್ತದೆ ಎಂದು ಅದು ಹೇಳಿದೆ.

ಪರೀಕ್ಷಾ ಪೆ ಚರ್ಚಾ ವಾರ್ಷಿಕ ಕಾರ್ಯಕ್ರಮವು 2018ರಲ್ಲಿ ಆರಂಭವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಪರೀಕ್ಷೆಗೆ ಸಂಬಂಧಿಸಿದ ಒತ್ತಡಗಳನ್ನು ನಿಭಾಯಿಸುವ ಮಾರ್ಗಗಳ ಕುರಿತು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರ ಜತೆ ಸಂವಾದ ನಡೆಸುತ್ತಾರೆ. ಈ ವರ್ಷ ಜನವರಿಯಲ್ಲಿ ನಡೆದ ಈ ಕಾರ್ಯಕ್ರಮದ ಏಳನೇ ಆವೃತ್ತಿಯಲ್ಲಿ 2.26 ಕೋಟಿ ನೋಂದಣಿಗಳಾಗಿದ್ದವು. ಅದು ದೂರದರ್ಶನ ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ನೇರ ಪ್ರಸಾರವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.