ADVERTISEMENT

ಸಂವಿಧಾನದ ಮೇಲೆ ದಾಳಿ; RSSನ ಬಾಹುಗಳಂತೆ ಕೆಲಸ ಮಾಡುತ್ತಿರುವ NCERT: ಜೈರಾಂ ರಮೇಶ್

ಪಿಟಿಐ
Published 17 ಜೂನ್ 2024, 10:52 IST
Last Updated 17 ಜೂನ್ 2024, 10:52 IST
<div class="paragraphs"><p>ಜೈರಾಂ ರಮೇಶ್ </p></div>

ಜೈರಾಂ ರಮೇಶ್

   

ಪಿಟಿಐ ಚಿತ್ರ

ನವದೆಹಲಿ: ‘ಸಂವಿಧಾನದ ಮೇಲೆ 2014ರಿಂದಲೂ ನಿರಂತರ ದಾಳಿ ನಡೆಯುತ್ತಿದ್ದು, ಈ ಕ್ರಿಯೆಯಲ್ಲಿ ಎನ್‌ಸಿಇಆರ್‌ಟಿಯು ರಾಷ್ಟ್ರೀಯ ಸ್ವಯಂಸೇವಕ ಸಂಘದ ಬಾಹುಗಳಂತೆ ಕೆಲಸ ಮಾಡುತ್ತಿದೆ’ ಎಂದು ಕಾಂಗ್ರೆಸ್‌ ಮುಖಂಡ ಜೈರಾಂ ರಮೇಶ್ ಆರೋಪಿಸಿದ್ದಾರೆ.

ADVERTISEMENT

ಎನ್‌ಸಿಇಆರ್‌ಟಿ ಪಠ್ಯಪುಸ್ತಕಗಳನ್ನು ಪರಿಷ್ಕರಿಸಿದ್ದರ ಕುರಿತು ಎಕ್ಸ್‌ ವೇದಿಕೆಯಲ್ಲಿ ಪ್ರತಿಕ್ರಿಯಿಸಿರುವ ಅವರು, ‘ಈ ಸಾಲಿನ ನೀಟ್ ಪರೀಕ್ಷೆಯಲ್ಲಿ ನೀಡಲಾಗಿದ್ದ ಕೃಪಾಂಕಗಳಿಗೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು, ಎನ್‌ಸಿಇಆರ್‌ಟಿ ಮೇಲೆ ಆರೋಪ ಹೊರಿಸಿದೆ. ತನ್ನ ಮೇಲೆ ಬಂದಿರುವ ಆರೋಪದಿಂದ ಜನರ ಗಮನ ಬೇರೆಡೆ ಸೆಳೆಯಲು ಸಂಸ್ಥೆ ಇಂಥ ಆರೋಪಗಳನ್ನು ಮಾಡಿದೆ’ ಎಂದಿದ್ದಾರೆ.

‘ಆದಾಗ್ಯೂ, ಎನ್‌ಸಿಇಆರ್‌ಟಿಯು ಒಂದು ವೃತ್ತಿಪರ ಸಂಸ್ಥೆಯಾಗಿ ಉಳಿದಿಲ್ಲ ಎಂಬುದು ಸತ್ಯ. 2014ರಿಂದ ಇದು ಆರ್‌ಎಸ್‌ಎಸ್‌ನ ಅಂಗಸಂಸ್ಥೆಯಾಗಿ ಕೆಲಸ ಮಾಡುತ್ತಿದೆ. ಹತ್ತನೇ ತರಗತಿಯ ರಾಜಕೀಯ ವಿಜ್ಞಾನ ಪಠ್ಯಪುಸ್ತಕವನ್ನು ಪರಿಷ್ಕರಿಸಿದ್ದು, ಅದರಲ್ಲಿ ಜಾತ್ಯಾತೀತತೆಯ ಪರಿಕಲ್ಪನೆಯನ್ನು ಟೀಕಿಸಲಾಗಿದೆ. ಜತೆಗೆ, ಇದು ರಾಜಕೀಯ ಪಕ್ಷಗಳ ನೀತಿ ಎಂದು ಹೇಳಲಾಗಿದೆ. ಎನ್‌ಸಿಇಆರ್‌ಟಿಯ ಧ್ಯೇಯ ಪಠ್ಯಪುಸ್ತಕಗಳನ್ನು ಸಿದ್ಧಪಡಿಸುವುದೇ ಹೊರತು, ರಾಜಕೀಯ ಪಕ್ಷದ ಆಲೋಚನೆಗಳ ಪ್ರಚಾರ ಸಾಮಗ್ರಿಗಳನ್ನು ಮುದ್ರಿಸಿ, ಹಂಚುವುದಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಭಾರತ ಗಣರಾಜ್ಯದ ಮುಖ್ಯ ಆಧಾರಸ್ತಂಭಗಳಲ್ಲಿ ಜಾತ್ಯಾತೀತವನ್ನು ತನ್ನ ಪೀಠಿಕೆಯಲ್ಲೇ ಹೇಳಿರುವ ದೇಶದ ಸಂವಿಧಾನದ ಮೇಲೆ ಎನ್‌ಸಿಇಆರ್‌ಟಿ ನಿರಂತರ ದಾಳಿ ನಡೆಸುತ್ತಿದೆ. ಜಾತ್ಯಾತೀತತೆ ಎನ್ನುವುದು ಸಂವಿಧಾನದ ಮೂಲ ರಚನೆಯ ಬಹುಮುಖ್ಯ ಭಾಗ ಎಂದು ತನ್ನ ಹಲವು ತೀರ್ಪುಗಳಲ್ಲಿ ಸುಪ್ರೀಂ ಕೋರ್ಟ್ ಹೇಳಿದೆ’ ಎಂದು ಉಲ್ಲೇಖಿಸಿದ್ದಾರೆ.

‘ರಾಷ್ಟ್ರೀಯ ಶೈಕ್ಷಣಿಕ ಸಂಶೋಧನಾ ತರಬೇತಿ ಮಂಡಳಿಯಾಗಿಯೇ ಎನ್‌ಸಿಇಆರ್‌ಟಿ ಮುಂದುವರಿಯಬೇಕು. ಆದರೆ ಅದರ ಬದಲು, ನಾಗ್ಪುರ ಅಥವಾ ನರೇಂದ್ರ ಕೌನ್ಸಿಲ್‌ ಫಾರ್‌ ಎಜುಕೇಷನಲ್‌ ರಿಸರ್ಚ್‌ ಅಂಡ್‌ ಟ್ರೈನಿಂಗ್‌ ಎಂದಾಗಬಾರದು’ ಎಂದು ಜೈರಾಂ ಆಗ್ರಹಿಸಿದ್ದಾರೆ.

‘ಎನ್‌ಸಿಇಆರ್‌ಟಿ ಸಿದ್ಧಪಡಿಸುವ ಎಲ್ಲಾ ಪಠ್ಯಪುಸ್ತಕಗಳೂ ಸಂಶಯಾಸ್ಪದವಾಗಿವೆ. ನಾವು ಬಾಲ್ಯದಲ್ಲಿ ಕಲಿತ ಹಾಗೂ ನಮ್ಮನ್ನು ರೂಪಿಸಿದ ಪಠ್ಯಪುಸ್ತಕಗಳಿಗಿಂತ ಭಿನ್ನವಾಗಿವೆ’ ಎಂದು ಆರೋಪಿಸಿದ್ದಾರೆ.

ಎನ್‌ಡಿಎ ಸರ್ಕಾರಕ್ಕೆ ಅಪಥ್ಯವಾಗಿದ್ದು ಪಠ್ಯದಲ್ಲಿಲ್ಲ: ಟಿಎಂಸಿ

ಟಿಎಂಸಿ ಮುಖಂಡ ಸಾಕೇತ್ ಗೋಖಲೆ ಅವರೂ ಎನ್‌ಸಿಇಆರ್‌ಟಿ ವಿರುದ್ಧ ಹರಿಹಾಯ್ದಿದ್ದಾರೆ. ‘ನಾಚಿಕೆ ಇಲ್ಲದ ಎನ್‌ಡಿಎ 1.0 ಸರ್ಕಾರವು ತನಗೆ ಅಪಥ್ಯವಾದ ಸತ್ಯಗಳನ್ನು ವಿದ್ಯಾರ್ಥಿಗಳಿಂದ ಮರೆಮಾಚಿದೆ’ ಎಂದು ಆರೋಪಿಸಿದ್ದಾರೆ.

‘ಇದರೊಂದಿಗೆ ವಿದ್ಯಾರ್ಥಿಗಳನ್ನು ಖಿನ್ನತೆಗೆ ನೂಕುವ ವಿಶ್ವಯುದ್ಧ ವಿಷಯವನ್ನು ಏಕೆ ಪ್ರಸ್ತಾಪಿಸಿದೆ. ಇದನ್ನು ಪ್ರಕಟಿಸುವುದಾದರೆ ಗುಜರಾತ್ ಗಲಬೆಯನ್ನು ಪ್ರಸ್ತಾಪಿಸಬೇಕಿತ್ತು. ಹೀಗಾದರೆ ಬಿಜೆಪಿ ಹಾಗೂ ಮೋದಿಗೆ ತಮ್ಮ ಅಪರಾಧಿ ಹಾಗೂ ದಂಗೆಕೋರ ಇತಿಹಾಸದ ಕುರಿತು ನಾಚಿಕೆಯಾಗಿದೆಯೇ? ವಿದ್ಯಾರ್ಥಿಗಳಿಂದ ಸತ್ಯವನ್ನು ಏಕೆ ಮರೆಮಾಚುತ್ತಿದ್ದೀರಿ?’ ಎಂದು ಪ್ರಶ್ನಿಸಿದ್ದಾರೆ.

ಪಠ್ಯಕ್ರಮದ ಕೇಸರೀಕರಣ ಆರೋಪ ನಿರಾಕರಿಸಿ ಪ್ರತಿಕ್ರಿಯಿಸಿರುವ ಎನ್‌ಸಿಇಆರ್‌ಟಿ ನಿರ್ದೇಶಕ ದಿನೇಶ್ ಪ್ರಸಾದ್ ಸಕ್ಲಾನಿ, ‘ಶಾಲಾ ಪಠ್ಯಕ್ರಮದಲ್ಲಿ ದಂಗೆ ಕುರಿತು ವಿವರಿಸುವಾಗ ಗುಜರಾತ್ ಗಲಬೆ ಹಾಗೂ ಬಾಬ್ರಿ ಮಸೀದಿ ಧ್ವಂಸ ಪ್ರಕರಣಗಳನ್ನು ಪಠ್ಯಕ್ರಮದಲ್ಲಿ ಪರಿವರ್ತಿಸಲಾಗಿದೆ’ ಎಂದಿದ್ದಾರೆ.

‘ಶಾಲಾ ಪಠ್ಯಕ್ರಮದಲ್ಲಿ ನಾವೇಕೆ ದಂಗೆ, ಹಿಂಸೆಯ ಕುರಿತು ಹೇಳಬೇಕು. ಮಕ್ಕಳಲ್ಲಿ ಸಕಾರಾತ್ಮಕ ಅಂಶಗಳನ್ನು ಬಿತ್ತಬೇಕೇ ಹೊರತು, ಹಿಂಸೆಯನ್ನಲ್ಲ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.