ಮುಂಬೈ: ಅನರ್ಹತೆಗೆ ಸಂಬಂಧಿಸಿದಂತೆ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ)ದ ಅಜಿತ್ ಪವರ್ ಬಣ ಹಾಗೂ ಶರದ್ ಪವಾರ್ ಬಣಗಳ ಶಾಸಕರು ಮಹಾರಾಷ್ಟ್ರ ವಿಧಾನಸಭಾಧ್ಯಕ್ಷ ರಾಹುಲ್ ನರ್ವೇಕರ್ ಅವರಿಗೆ ಶುಕ್ರವಾರ ತಮ್ಮ ಪ್ರತಿಕ್ರಿಯೆಗಳನ್ನು ಸಲ್ಲಿಸಿದ್ದಾರೆ.
ಕಳೆದ ಜುಲೈ 2ರಂದು ಎನ್‌ಸಿಪಿಯ ಅಜಿತ್ ಪವಾರ್ ಅವರು ಮುಖ್ಯಮಂತ್ರಿ ಏಕನಾಥ ಶಿಂದೆ ಸರ್ಕಾರವನ್ನು ಸೇರಿದ್ದರು. ಅಲ್ಲಿಂದ ಎರಡೂ ಬಣಗಳ ನಡುವೆ ಪಕ್ಷದ ಹೆಸರು ಹಾಗೂ ಲಾಂಛನಕ್ಕಾಗಿ ಕಿತ್ತಾಟ ನಡೆದಿದೆ. ಶಾಸಕರ ಅನರ್ಹಗೊಳಿಸುವಂತೆ ಉಭಯ ಬಣಗಳು ಪರಸ್ಪರರ ವಿರುದ್ಧ ದೂರು ನೀಡಿವೆ. ಇದಕ್ಕೆ ಸಂಬಂಧಿಸಿದಂತೆ ಅಜಿತ್ ಪವಾರ್ ಬಣದಿಂದ 40 ಪ್ರತಿಕ್ರಿಯೆಯನ್ನು ಹಾಗೂ ಶರದ್ ಪವಾರ್ ಬಣದಿಂದ 9 ಪ್ರತಿಕ್ರಿಯೆಗಳು ಸಲ್ಲಿಕೆಯಾಗಿವೆ ಎಂದು ಮೂಲಗಳು ತಿಳಿಸಿವೆ.
ಈ ಕುರಿತು ಮುಂದಿನ ವಾರ ವಿಚಾರಣೆ ನಡೆಯಲಿದೆ. ಎರಡೂ ಬಣಗಳು ನೀಡಿರುವ ಪ್ರತಿಕ್ರಿಯೆ ಮತ್ತು ದಾಖಲಾತಿಗಳನ್ನು ಅಧಿಕಾರಿಗಳು ಪರಿಶೀಲಿಸಲಿದ್ದಾರೆ ಎಂದು ವಿಧಾನ ಭವನ ಮೂಲಗಳು ತಿಳಿಸಿವೆ.
ಮಹಾರಾಷ್ಟ್ರ ವಿಧಾನಸಭೆಯಲ್ಲಿ ಎನ್‌ಸಿಪಿಯನ್ನು ಸದ್ಯ ಒಂದು ಬಣವಾಗಿ ಗುರುತಿಸಲಾಗುತ್ತಿದೆ. ಎನ್‌ಸಿಪಿ ಪಕ್ಷ ವಿಭಜನೆಗೆ ಸಂಬಂಧಿಸಿದ ಎರಡು ಪ್ರತ್ಯೇಕ ಅರ್ಜಿಗಳು ಸುಪ್ರೀಂ ಕೋರ್ಟ್ ಹಾಗೂ ಚುನಾವಣಾ ಆಯೋಗದಲ್ಲಿ ವಿಚಾರಣೆ ಹಂತದಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.