ADVERTISEMENT

ಅಜಿತ್‌ ಪವಾರ್‌ಗೆ ನಿರ್ದೇಶನ: ಸುಪ್ರೀಂ ಕೋರ್ಟ್‌ಗೆ ಶರದ್‌ ಅರ್ಜಿ

ಗಡಿಯಾರ ಚಿಹ್ನೆ ಬಳಕೆ ನಿರ್ಬಂದ ಹೇರಲು ಮನವಿ

ಪಿಟಿಐ
Published 2 ಅಕ್ಟೋಬರ್ 2024, 14:23 IST
Last Updated 2 ಅಕ್ಟೋಬರ್ 2024, 14:23 IST
ಶರದ್ ಪವಾರ್
ಶರದ್ ಪವಾರ್   

ನವದೆಹಲಿ: ಮುಂಬರುವ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ವೇಳೆ, ಅಜಿತ್‌ ಪವಾರ್‌ ನೇತೃತ್ವದ ಎನ್‌ಸಿಪಿ (ಅಜಿತ್‌ ಪವಾರ್), ಗಡಿಯಾರ ಚಿಹ್ನೆ ಬಳಸದಂತೆ ನಿರ್ದೇಶನ ನೀಡಲು ಕೋರಿ ರಾಷ್ಟ್ರೀಯವಾದಿ ಕಾಂಗ್ರೆಸ್‌ ಪಕ್ಷದ (ಎನ್‌ಸಿಪಿ) ಸಂಸ್ಥಾಪಕ ಶರದ್‌ ಪವಾರ್ ಅವರು ಸುಪ್ರೀಂ ಕೋರ್ಟ್‌ಗೆ ಹೊಸದಾಗಿ ಅರ್ಜಿ ಸಲ್ಲಿಸಿದ್ದಾರೆ.

ಪಕ್ಷದ ಚಿಹ್ನೆ ವಿಚಾರಕ್ಕೆ ಸಂಬಂಧಿಸಿ ಪಕ್ಷದ ಎರಡೂ ಬಣಗಳ ಅರ್ಜಿಗಳ ವಿಚಾರಣೆ ಬಾಕಿ ಇರುವಾಗಲೇ, ಶರದ್‌ ಪವಾರ್‌ ಈಗ ಮತ್ತೊಂದು ಅರ್ಜಿ ಸಲ್ಲಿಸಿದ್ದಾರೆ.

ಮುಂಬರುವ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ವೇಳೆ ಹೊಸ ಚಿಹ್ನೆ ಕೋರಿ ಅರ್ಜಿ ಸಲ್ಲಿಸುವಂತೆ ಅಜಿತ್‌ ಪವಾರ್‌ ಅವರಿಗೆ ನಿರ್ದೇಶನ ನೀಡಬೇಕು ಎಂದೂ ಅವರು ಕೋರಿದ್ದಾರೆ.

ADVERTISEMENT

‘ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಅಜಿತ್‌ ಪವಾರ್‌ ನೇತೃತ್ವದ ಎನ್‌ಸಿಪಿ, ಗಡಿಯಾರ ಚಿಹ್ನೆಯಡಿ ಸ್ಪರ್ಧಿಸಿತ್ತು. ತಮ್ಮ ಬಣ ಕಹಳೆ ಊದುವ ಮನುಷ್ಯನ ಚಿಹ್ನೆಯಡಿ ಸ್ಪರ್ಧಿಸಿತ್ತು. ಯಾವುದು ನೈಜ ಎನ್‌ಸಿಪಿ ಎಂಬ ಬಗ್ಗೆ ಇದು ಮತದಾರರಲ್ಲಿ ಸಾಕಷ್ಟು ಗೊಂದಲಕ್ಕೆ ಕಾರಣವಾಗಿತ್ತು’ ಎಂದು ಅವರು ಅರ್ಜಿಯಲ್ಲಿ ವಿವರಿಸಿದ್ದಾರೆ.

ಅ.15ರಂದು ಸುಪ್ರೀಂ ಕೋರ್ಟ್‌ ಈ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಿದೆ.

ಮಹಾರಾಷ್ಟ್ರ ವಿಧಾನಸಭೆಯ ಪ್ರಸಕ್ತ ಅವಧಿ ನವೆಂಬರ್‌ 26ಕ್ಕೆ ಮುಕ್ತಾಯಗೊಳ್ಳಲಿದ್ದು, ಇದೇ ತಿಂಗಳು ಚುನಾವಣೆಗಳನ್ನು ಘೋಷಿಸುವ ಸಾಧ್ಯತೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.