ADVERTISEMENT

ಲೋಕಸಭೆ ಚುನಾವಣೆಯಲ್ಲಿ ಹಿನ್ನಡೆ; ವಿಧಾನಸಭೆಗೆ ಸಿದ್ಧತೆ ಆರಂಭಿಸಿದ ಅಜಿತ್ ಪವಾರ್

ಪಿಟಿಐ
Published 29 ಜುಲೈ 2024, 4:21 IST
Last Updated 29 ಜುಲೈ 2024, 4:21 IST
<div class="paragraphs"><p>ಅಜಿತ್‌ ಪವಾರ್‌</p></div>

ಅಜಿತ್‌ ಪವಾರ್‌

   

ಪಿಟಿಐ ಚಿತ್ರ

ನಾಸಿಕ್‌: ಇತ್ತೀಚೆಗೆ ಮುಕ್ತಾಯವಾದ ಲೋಕಸಭೆ ಚುನಾವಣೆಯಲ್ಲಿ ಎದುರಾದ ಸೋಲಿನಿಂದ ಮುಜುಗರಕ್ಕೊಳಗಾಗಿರುವ ಎನ್‌ಸಿಪಿ ನಾಯಕ ಹಾಗೂ ಉಪ ಮುಖ್ಯಮಂತ್ರಿ ಅಜಿತ್‌ ಪವಾರ್‌, ಮುಂಬರುವ ವಿಧಾನಸಭೆ ಚುನಾವಣೆಗೆ ಸಿದ್ಧತೆ ಆರಂಭಿಸಿದ್ದಾರೆ. ರಾಜ್ಯದಾದ್ಯಂತ ಪ್ರವಾಸ ಕೈಗೊಳ್ಳಲು ಮುಂದಾಗಿದ್ದಾರೆ.

ADVERTISEMENT

ಅಜಿತ್‌ ಪವಾರ್ ಅವರು ನಾಸಿಕ್‌ನಿಂದ ಜನ ಸಮ್ಮಾನ್‌ ಯಾತ್ರೆ ಆರಂಭಿಸಲಿದ್ದಾರೆ. ಈ ಯಾತ್ರೆಯು ರಾಜ್ಯದ 288 ವಿಧಾನಸಭೆ ಕ್ಷೇತ್ರಗಳಲ್ಲಿ ಸಂಚರಿಸಲಿದೆ ಎಂದು ಮಹಾರಾಷ್ಟ್ರ ಎನ್‌ಸಿಪಿ ಅಧ್ಯಕ್ಷ ಸುನಿಲ್‌ ತಟ್ಕರೆ ತಿಳಿಸಿದ್ದಾರೆ.

ನಾಸಿಕ್‌ನಲ್ಲಿ ಎನ್‌ಸಿಪಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ತಟ್ಕರೆ, ರೈತರು, ಮಹಿಳೆಯರು ಯುವಕರಿಗಾಗಿ ₹ 1 ಕೋಟಿ ವರೆಗಿನ ಕಲ್ಯಾಣ ಯೋಜನೆಗಳನ್ನು ಪರಿಚಯಿಸಿದ ಕೀರ್ತಿ ಪವಾರ್‌ ಅವರಿಗೆ ಸಲ್ಲುತ್ತದೆ ಎಂದಿದ್ದಾರೆ.

ಇದೇ ವೇಳೆ ಅವರು, ಪಕ್ಷದ ಹಿರಿಯ ನಾಯಕರಾದ ಛಗನ್‌ ಭುಜಬಲ್‌ ಮತ್ತು ಪ್ರಫುಲ್‌ ಪಟೇಲ್‌ ಅವರು ವಿಧಾನಸಭೆ ಚುನಾವಣೆಯಲ್ಲಿ ಯಶಸ್ಸು ತಂದುಕೊಡಲಿದ್ದಾರೆ ಎಂದೂ ಹೇಳಿದ್ದಾರೆ. ಭುಜಬಲ್‌ ಅವರು ಶಿಂದೆ ಸಂಪುಟದಲ್ಲಿ ಸಚಿವರಾಗಿದ್ದು, ಪಟೇಲ್‌ ರಾಜ್ಯಸಭೆ ಸದಸ್ಯರಾಗಿದ್ದಾರೆ.

'ಅಜಿತ್‌ ಅವರು ಕಳೆದ 35 ವರ್ಷಗಳಿಂದ ಪರಿಣಾಮಕಾರಿಯಾಗಿ ರಾಜಕೀಯ ಮಾಡಿದ್ದಾರೆ. ಎದುರಾಳಿಗಳು ಅವರ ಹಾಗೂ ಎನ್‌ಸಿಪಿಯ ಇತರ ನಾಯಕರ ಹೆಸರು ಕೆಡಿಸಲು ಪ್ರಯತ್ನಿಸುತ್ತಿದ್ದಾರೆ. ಇಂತಹ ಪ್ರಯತ್ನಗಳನ್ನು ವಿಫಲಗೊಳಿಸಲು ನಾವೆಲ್ಲ ಕೆಲಸ ಮಾಡಬೇಕು. ಹಿಂದಿನ ಮಹಾ ವಿಕಾಸ ಆಘಾಡಿ ಸರ್ಕಾರ ಘೋಷಿಸಿದ ಹಲವು ಯೋಜನೆಗಳಿಗೆ ಅಜಿತ್‌ ಅವರೇ ಕಾರಣ' ಎಂದು ಹೇಳಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಮುಖಭಂಗ
ಲೋಕಸಭೆ ಚುನಾವಣೆಯಲ್ಲಿ 'ಮಹಾಯುತಿ' ಮೈತ್ರಿಕೂಟ ಹಿನ್ನಡೆ ಅನುಭವಿಸಿತ್ತು. ಇಲ್ಲಿನ 48 ಲೋಕಸಭಾ ಕ್ಷೇತ್ರಗಳ ಪೈಕಿ 17 ಕ್ಷೇತ್ರಗಳಲ್ಲಷ್ಟೇ ಗೆಲುವು ಸಾಧಿಸಿತ್ತು. ಮೈತ್ರಿಕೂಟದಲ್ಲಿರುವ ಬಿಜೆಪಿ 9, ಮುಖ್ಯಮಂತ್ರಿ ಶಿಂದೆ ಅವರ ಶಿವಸೇನಾ 7 ಮತ್ತು ಎನ್‌ಸಿಪಿ 1 ಸ್ಥಾನದಲ್ಲಷ್ಟೇ ಗೆದ್ದಿತ್ತು.

ಈ ಹಿನ್ನಡೆಯ ಹೊರತಾಗಿಯೂ, ವರ್ಷಾಂತ್ಯದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯನ್ನು ಒಟ್ಟಾಗಿ ಎದುರಿಸುವುದಾಗಿ ಮಹಾಯುತಿ ನಾಯಕರು ಘೋಷಿಸಿದ್ದಾರೆ.

ಕಾಂಗ್ರೆಸ್‌, ಶಿವಸೇನಾ (ಯುಬಿಟಿ) ಹಾಗೂ ಎನ್‌ಸಿಪಿ ಒಳಗೊಂಡ ಮಹಾ ವಿಕಾಸ ಆಘಾಡಿ (ಎಂವಿಎ) ಮೈತ್ರಿಕೂಟ ಲೋಕಸಭೆಯ 30 ಕ್ಷೇತ್ರಗಳಲ್ಲಿ ಜಯ ಕಂಡಿತ್ತು. ಕಾಂಗ್ರೆಸ್‌ 13 ಸ್ಥಾನಗಳಲ್ಲಿ, ಶಿವಸೇನಾ (ಯುಬಿಟಿ) 9 ಕಡೆ ಸಾಧಿಸಿದ್ದವು. ಎನ್‌ಸಿಪಿಯ ಶರದ್‌ ಪವಾರ್ ಬಣ 8 ಸ್ಥಾನಗಳನ್ನು ಜಯಿಸಿತ್ತು. ಉಳಿದೊಂದು ಕ್ಷೇತ್ರ ಪಕ್ಷೇತರ ಅಭ್ಯರ್ಥಿ ಪಾಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.