ADVERTISEMENT

ಬಾಬಾ ಸಿದ್ದೀಕಿ ಹತ್ಯೆ: ರಾಯಗಢ ಜಲಪಾತದ ಬಳಿ ಶೂಟಿಂಗ್ ಅಭ್ಯಾಸ ಮಾಡಿದ್ದ ಹಂತಕರು

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2024, 2:54 IST
Last Updated 23 ಅಕ್ಟೋಬರ್ 2024, 2:54 IST
<div class="paragraphs"><p> ಬಾಬಾ ಸಿದ್ದೀಕಿ ಅವರ ಅಂತ್ಯಕ್ರಿಯೆಯನ್ನು ಸರ್ಕಾರಿ ಗೌರವಗಳೊಂದಿಗೆ ಅಕ್ಟೋಬರ್‌ 13ರ ರಾತ್ರಿ ನೆರವೇರಿಸಲಾಯಿತು </p></div>

ಬಾಬಾ ಸಿದ್ದೀಕಿ ಅವರ ಅಂತ್ಯಕ್ರಿಯೆಯನ್ನು ಸರ್ಕಾರಿ ಗೌರವಗಳೊಂದಿಗೆ ಅಕ್ಟೋಬರ್‌ 13ರ ರಾತ್ರಿ ನೆರವೇರಿಸಲಾಯಿತು

   

–ಪಿಟಿಐ ಚಿತ್ರ

ಮುಂಬೈ: ಅಜಿತ್‌ ಪವಾರ್‌ ನೇತೃತ್ವದ ರಾಷ್ಟ್ರೀಯವಾದಿ ಕಾಂಗ್ರೆಸ್‌ ಪಕ್ಷದ (ಎನ್‌ಸಿಪಿ) ನಾಯಕ ಬಾಬಾ ಸಿದ್ದೀಕಿ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ ಮೂವರು ಹಂತಕರು, ರಾಯಗಢ ಜಿಲ್ಲೆಯಲ್ಲಿರುವ ಜಲಪಾತದ ಬಳಿ ಶೂಟಿಂಗ್ ಅಭ್ಯಾಸ ನಡೆಸಿದ್ದರು ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ADVERTISEMENT

ಸಿದ್ದೀಕಿ ಅವರನ್ನು ಮುಂಬೈನ ಬಾಂದ್ರಾ ಪ್ರದೇಶದಲ್ಲಿ ಅಕ್ಟೋಬರ್‌ 12ರಂದು ಹತ್ಯೆ ಮಾಡಲಾಗಿದೆ. ಸಿದ್ದೀಕಿ ಅವರು ತಮ್ಮ ಪುತ್ರ ಹಾಗೂ ಕಾಂಗ್ರೆಸ್‌ ಶಾಸಕ ಜೀಶನ್‌ ಅವರ ಕಚೇರಿಯಿಂದ ಹೊರಗೆ ಬಂದಾಗ ಗುಂಡಿನ ದಾಳಿ ನಡೆಸಲಾಗಿತ್ತು.

ಈ ಪ್ರಕರಣದ ತನಿಖೆಯನ್ನು ನಗರ ಪೊಲೀಸ್‌ ಅಪರಾಧ ದಳ ಚುರುಕುಗೊಳಿಸಿದೆ.

ದಾಳಿ ನಡೆಸಿದ್ದವರಲ್ಲಿ ಧರ್ಮರಾಜ್‌ ಕಶ್ಯಪ್‌, ಗುರ್ಮೈಲ್‌ ಸಿಂಗ್‌ ಎಂಬ ಇಬ್ಬರನ್ನು ಕೂಡಲೇ ಬಂಧಿಸಲಾಗಿದ್ದು, ಮತ್ತೊಬ್ಬ ಆರೋಪಿ ಶಿವಕುಮಾರ್‌ ಗೌತಮ್‌ ತಲೆಮರೆಸಿಕೊಂಡಿದ್ದಾನೆ. ಈ ಮೂವರೂ ಮುಂಬೈ ಹೊರವಲಯದ ಕರ್ಜತ್‌ ತಾಲ್ಲೂಕಿನ ಪಾಲಸ್ದರಿ ಸಮೀಪದಲ್ಲಿರುವ ಜಲಪಾತದ ಹತ್ತಿರ ಸೆಪ್ಟೆಂಬರ್‌ನಲ್ಲಿ ಅಭ್ಯಾಸ ನಡೆಸಿದ್ದರು ಎಂಬುದು ವಿಚಾರಣೆ ವೇಳೆ ತಿಳಿದು ಬಂದಿದೆ. ನಿರ್ಜನ ಪ್ರದೇಶವಾದ ಕಾರಣ, ಆ ಜಾಗವನ್ನು ಅಭ್ಯಾಸಕ್ಕೆ ಆಯ್ಕೆ ಮಾಡಿಕೊಂಡಿದ್ದರು ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.

ಪ್ರಕರಣ ಸಂಬಂಧ ಮತ್ತಷ್ಟು ಆರೋಪಿಗಳನ್ನೂ ಬಂಧಿಸಲಾಗಿದೆ. ಸಿದ್ದೀಕಿ ಅವರ ಹತ್ಯೆಯ ಸುಪಾರಿಯನ್ನು ಆರಂಭದಲ್ಲಿ ನಿತಿನ್ ಸಪ್ರೆ ಹಾಗೂ ರಾಮ್ ಕನೌಜಿಯಾ ನೇತೃತ್ವದ ಥಾಣೆ ಮೂಲದ ಐವರ ತಂಡ ಪಡೆದುಕೊಂಡಿತ್ತು. ಅಪರಾಧಕ್ಕೆ ಬಳಸಿದ ಪಿಸ್ತೂಲ್‌ಗಳನ್ನು ಕನೌಜಿಯಾ ಹಾಗೂ ಮತ್ತೊಬ್ಬ ಆರೋಪಿ ಭಗವಂತ್ ಸಿಂಗ್‌ ಓಂ ಸಿಂಗ್‌ ರಾಜಸ್ಥಾನದಿಂದ ತಂದಿದ್ದರು. ಆದರೆ, ಕೃತ್ಯವೆಸಗಲು ಇರಿಸಿದ್ದ ₹ 50 ಲಕ್ಷ ಬೇಡಿಕೆ ವಿಚಾರವಾಗಿ ಭಿನ್ನಾಭಿಪ್ರಾಯ ಮೂಡಿದ್ದರಿಂದ ಈ ಗುಂಪು ಹಿಂದೆ ಸರಿದಿತ್ತು. ಆದಾಗ್ಯೂ, ಸಿದ್ದೀಕಿ ಹತ್ಯೆಯಾಗುವ ವರೆಗೆ ಶೂಟರ್‌ಗಳಿಗೆ ಶಸ್ತ್ರಾಸ್ತ್ರಗಳು ಸೇರಿದಂತೆ ಇತರ ನೆರವು ನೀಡುವುದನ್ನು ಮುಂದುವರಿಸಿತ್ತು ಎಂಬುದೂ ಗೊತ್ತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.