ADVERTISEMENT

ಲಾರೆನ್ಸ್‌ ಬಿಷ್ಣೋಯ್ ಸಹಚರರಿಂದ NCP ನಾಯಕ, ಮಾಜಿ ಸಚಿವ ಬಾಬಾ ಸಿದ್ಧಿಕಿ ಹತ್ಯೆ

ಎನ್‌ಸಿಪಿ ಅಜಿತ್ ಪವಾರ್ ಬಣದ ನಾಯಕ ಹಾಗೂ ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ಧಿಕಿ (66) ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

ಪಿಟಿಐ
Published 13 ಅಕ್ಟೋಬರ್ 2024, 2:26 IST
Last Updated 13 ಅಕ್ಟೋಬರ್ 2024, 2:26 IST
<div class="paragraphs"><p>ಬಾಬಾ ಸಿದ್ಧಿಕಿ</p></div>

ಬಾಬಾ ಸಿದ್ಧಿಕಿ

   

ಮುಂಬೈ: ಎನ್‌ಸಿಪಿ ಅಜಿತ್ ಪವಾರ್ ಬಣದ ನಾಯಕ ಹಾಗೂ ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ಧಿಕಿ (66) ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

ಮುಂಬೈನ ಬಾಂದ್ರಾದ ಪೂರ್ವ ವಲಯದ ನಿರ್ಮಲ್ ನಗರದಲ್ಲಿ ಶನಿವಾರ ರಾತ್ರಿ ಈ ಘಟನೆ ನಡೆದಿದೆ.

ADVERTISEMENT

ದಸರಾ ಪ್ರಯುಕ್ತ ಬಾಬಾ ಅವರು ತಮ್ಮ ಮಗ ಹಾಗೂ ಶಾಸಕ ಜಿಶಾನ್ ಸಿದ್ಧಿಕಿ ಅವರ ಮನೆಗೆ ತೆರಳಿದ್ದರು. ಮನೆಯಿಂದ ಹೊರಗೆ ಬರುವಾಗ ಶನಿವಾರ ರಾತ್ರಿ 9.30 ರ ಸುಮಾರು ಬೈಕ್‌ನಲ್ಲಿ ಬಂದಿದ್ದ ಮೂವರು ದುಷ್ಕರ್ಮಿಗಳು ಬಾಬಾ ಅವರ ಮೇಲೆ ಪಿಸ್ತೂಲ್‌ನಿಂದ ಮೂರು ಸುತ್ತು ಗುಂಡು ಹಾರಿಸಿದ್ದರು. ಎದೆ ಹಾಗೂ ಹೊಟ್ಟೆಗೆ ಗುಂಡು ತಗುಲಿದ್ದ ಬಾಬಾ ಅವರನ್ನು ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಅವರು ಭಾನುವಾರ ತಡರಾತ್ರಿ 12.30ಕ್ಕೆ ಮೃತರಾದರು ಎಂದು ವೈದ್ಯರು ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಒಬ್ಬ ನಾಪತ್ತೆಯಾಗಿದ್ದು ಆತನ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಮುಖ್ಯಮಂತ್ರಿ ಏಕನಾಥ್ ಶಿಂದೆ ತಿಳಿಸಿದ್ದಾರೆ.

ಆರೋಪಿತರು ಗ್ಯಾಂಗ್‌ಸ್ಟರ್ ಲಾರೆನ್ಸ್‌ ಬಿಷ್ಣೋಯ್ ಸಹಚರರು ಎನ್ನಲಾಗಿದೆ. ಬಂಧಿತರನ್ನು ಕರ್ನೈಲ್ ಸಿಂಗ್ ಹಾಗೂ ಧರ್ಮರಾಜ್ ಕಶ್ಯಪ್ ಎಂದು ಗುರುತಿಸಲಾಗಿದೆ.

ಕಾಂಗ್ರೆಸ್‌ನಿಂದ ಮೂರು ಬಾರಿ ಶಾಸಕರಾಗಿದ್ದ ಬಿಹಾರ ಮೂಲದ ಬಾಬಾ ಸಿದ್ಧಿಕಿ ಅವರು ಕಳೆದ ಫೆಬ್ರುವರಿಯಲ್ಲಿ ಕಾಂಗ್ರೆಸ್ ತೊರೆದು ಅಜಿತ್ ಪವಾರ್ ಬಣದ ಎನ್‌ಸಿಪಿ ಸೇರಿದ್ದರು.

ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಎನ್‌ಸಿಪಿ ನಾಯಕ ಶರದ್ ಪವಾರ್ ಅವರು, ಮಹಾರಾಷ್ಟ್ರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಆರೋಪಿಸಿದ್ದಾರೆ.

2004ರಿಂದ 2008ರವರೆಗಿನ ವಿಲಾಸ್‌ರಾವ್ ದೇಶಮುಖ್ ಅವರ ಸರ್ಕಾರದಲ್ಲಿ ಬಾಬಾ ಅವರು ಕಾರ್ಮಿಕ ಸಚಿವರಾಗಿದ್ದರು. ಇವರು ನಟ ಸಲ್ಮಾನ್ ಖಾನ್‌ ಅವರಿಗೆ ಆಪ್ತರಾಗಿದ್ದರು.

ಮೂರು ಬಾರಿ ಶಾಸಕ:

ಎರಡು ಬಾರಿ ಕಾರ್ಪೊರೇಟರ್‌, ಮೂರು ಬಾರಿ ಶಾಸಕ (1999, 2004, 2009) ಆಗಿರುವ ಸಿದ್ದೀಕಿ, ಹಿಂದಿನ ಕಾಂಗ್ರೆಸ್‌–ಎನ್‌ಸಿಪಿ ಸರ್ಕಾರದಲ್ಲಿ ವಿವಿಧ ಖಾತೆಗಳನ್ನು ನಿರ್ವಹಿಸಿದ್ದಾರೆ.

ಕಳೆದ ಲೋಕಸಭಾ ಚುನಾವಣೆಗೂ ಮುನ್ನ ಸಿದ್ದೀಕಿ, ಕಾಂಗ್ರೆಸ್‌ ಮತ್ತು ಮಹಾ ವಿಕಾಸ್‌ ಆಘಾಡಿ ಮೈತ್ರಿಕೂಟವನ್ನು ತೊರೆದು ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿಗೆ ಸೇರ್ಪಡೆಗೊಂಡಿದ್ದರು.

ಬಾಲಿವುಡ್‌ ನಂಟು:

ಬಾಲಿವುಡ್‌ ನಟರಾದ ಶಾರೂಕ್‌ ಖಾನ್, ಸಲ್ಮಾನ್ ಖಾನ್‌, ಅಮೀರ್ ಖಾನ್‌ ಹಾಗೂ ದಿವಂಗತ ನಟ, ರಾಜಕಾರಣಿ ಸುನಿಲ್ ದತ್ ಮತ್ತು ಅವರ ಮಕ್ಕಳಾದ ಸಂಜಯ್ ದತ್‌, ಪ್ರಿಯಾ ದತ್‌ ಹಾಗೂ ನಮ್ರತಾ ದತ್‌ ಅವರೊಂದಿಗೆ ಸಿದ್ದೀಕಿ ಒಡನಾಟ ಹೊಂದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.