ADVERTISEMENT

ರಾಜಕೀಯ ನಿವೃತ್ತಿ ಬಗ್ಗೆ ಸುಳಿವು ನೀಡಿದ ಎನ್‌ಸಿಪಿ ನಾಯಕ ಶರದ್ ಪವಾರ್

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2024, 11:01 IST
Last Updated 5 ನವೆಂಬರ್ 2024, 11:01 IST
ಶರದ್ ಪವಾರ್
ಶರದ್ ಪವಾರ್   

ಮುಂಬೈ: ‘ಇನ್ಮುಂದೆ ಯಾವುದೇ ಚುನಾವಣೆಯಲ್ಲೂ ಸ್ಪರ್ಧಿಸುವುದಿಲ್ಲ’ ಎಂದು ಹೇಳುವ ಮೂಲಕ ರಾಜಕೀಯದಿಂದ ನಿವೃತ್ತರಾಗುವ ಸುಳಿವನ್ನು ಎನ್‌ಸಿಪಿ (ಎಸ್‌ಪಿ) ವರಿಷ್ಠ ಶರದ್‌ ಪವಾರ್‌ ನೀಡಿದರು.

ತಮ್ಮ ಮೊಮ್ಮಗ ಯುಗೇಂದ್ರ ಪವಾರ್‌ ಪರ ಬಾರಾಮತಿ ವಿಧಾನಸಭಾ ಕ್ಷೇತ್ರದ ಸುಪಾದಲ್ಲಿ ಮಂಗಳವಾರ ಮತಯಾಚಿಸುವಾಗ, ‘ನಿಮ್ಮ ಬೆಂಬಲದಿಂದ 14 ಚುನಾವಣೆಗಳಲ್ಲಿ (ಲೋಕಸಭೆ ಹಾಗೂ ವಿಧಾನಸಭೆ) ಸ್ಪರ್ಧಿಸಿದ್ದೆ. ಇನ್ನೂ ಎಷ್ಟು ಬಾರಿ ಸ್ಪರ್ಧಿಸುವುದು, ಯುವ ಪೀಳಿಗೆಗೆ ಅವಕಾಶ ನೀಡಬೇಕಾಗಿದೆ’ ಎಂದರು.

‘ರಾಜ್ಯಸಭೆಯ ಸದಸ್ಯತ್ವದ ಅವಧಿ ಇನ್ನೂ ಒಂದೂವರೆ ವರ್ಷ ಬಾಕಿ ಇದೆ. ಮತ್ತೊಂದು ಅವಧಿಗೆ ಸದಸ್ಯನಾಗಬೇಕೆ? ಎಂಬುದರ ಕುರಿತು ಯೋಚಿಸುವೆ’ ಎಂದೂ ಅವರು ತಿಳಿಸಿದರು.

ADVERTISEMENT

‘ಹೊಸ ನಾಯಕತ್ವಕ್ಕಾಗಿ ಕೆಲಸ ಮಾಡುತ್ತಿರುವೆ. ನಾನು ಅಧಿಕಾರದಲ್ಲಿ ಇರುವುದಿಲ್ಲ. ಆದರೆ, ಜನರಿಗಾಗಿ ಕೆಲಸ ಮಾಡುವುದನ್ನು ಮುಂದುವರಿಸುವೆ’ ಎಂದು ಪವಾರ್‌ ಹೇಳಿದರು.

ವಿಧಾನಸಭಾ ಚುನಾವಣೆ ಪ್ರಚಾರದ ವೇಳೆಯೇ ತಮ್ಮ ಭದ್ರಕೋಟೆಯಾದ ಬಾರಾಮತಿಯಲ್ಲೇ ಶರದ್‌ ಪವಾರ್‌ ಅಚ್ಚರಿಯ ಹೇಳಿಕೆಯನ್ನು ನೀಡಿರುವುದು ಮಹಾರಾಷ್ಟ್ರದ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.

ಮರಾಠರ ಪ್ರಬಲ ನಾಯಕರಾಗಿರುವ ಶರದ್‌ ಪವಾರ್‌ ಅವರು, ನಾಲ್ಕು ಬಾರಿ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದರು. ಕೇಂದ್ರದಲ್ಲಿಯೂ ಮೂರು ಬಾರಿ ಸಚಿವರಾಗಿದ್ದರು. 

'ಬಾರಾಮತಿಗೆ ಹೊಸ ನಾಯಕತ್ವ’

‘ಬಾರಾಮತಿಗೆ ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ ಕೊಡುಗೆ ಸಾಕಷ್ಟಿದೆ. ಆದರೆ, ಮುಂದಿನ ಮೂರು ದಶಕ ಈ ಪ್ರದೇಶದ ಅಭಿವೃದ್ಧಿಗೆ ಹೊಸ ನಾಯಕತ್ವ ಬೇಕಿದೆ’ ಎಂದು ಶರದ್‌ ಪವಾರ್‌ ಹೇಳಿದರು.

‘ಕ್ಷೇತ್ರದ ಲೋಕಸಭಾ ಚುನಾವಣೆಯು ಕುಟುಂಬದೊಳಗಿನ ಸ್ಪರ್ಧೆಯಿಂದಾಗಿ ಕಷ್ಟಕರವಾಗಿತ್ತು. ಐದು ತಿಂಗಳ ನಂತರ ವಿಧಾನಸಭಾ ಚುನಾವಣೆಯಲ್ಲೂ ಮತ್ತದೇ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದರು.

‘ನನ್ನನ್ನು ನಾಲ್ಕು ಬಾರಿ ಮುಖ್ಯಮಂತ್ರಿಯನ್ನಾಗಿ ಮಾಡಿದವರು ನೀವು. 1967ರಿಂದಲೂ 25 ವರ್ಷ ನನಗೆ ಅವಕಾಶ ಕೊಟ್ಟವರು. ನಾನು ಇಲ್ಲಿಂದ ತೆರಳುವ ಮುನ್ನ, ಇಲ್ಲಿನ ಎಲ್ಲ ಜವಾಬ್ದಾರಿಗಳನ್ನು ಅಜಿತ್‌ಗೆ ಕೊಟ್ಟಿದ್ದೆ’ ಎಂದರು. 

‘ಅಜಿತ್‌ ಸಹ 25ರಿಂದ 30 ವರ್ಷ ಈ ಪ್ರದೇಶದಲ್ಲಿ ಕೆಲಸ ಮಾಡಿದ್ದಾರೆ. ಅವರ ಕೆಲಸದ ಬಗ್ಗೆ ಅನುಮಾನಗಳು ಇಲ್ಲ.

ಇದೀಗ ಭವಿಷ್ಯಕ್ಕಾಗಿ ತಯಾರಿ ಮಾಡುವ ಸಮಯ. ಮುಂದಿನ 30 ವರ್ಷ ಕೆಲಸ ಮಾಡುವ ನಾಯಕತ್ವವನ್ನು ಹುಡುಕಬೇಕಿದೆ’ ಎಂದು ತಮ್ಮ ಮೊಮ್ಮಗನ ಪರ ಮತಯಾಚಿಸಿದರು.

ಬಾರಾಮತಿ ವಿಧಾನಸಭಾ ಕ್ಷೇತ್ರದಿಂದ ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ ಅವರು ಎಂಟನೇ ಬಾರಿಗೆ ಸ್ಪರ್ಧಿಸಿದ್ದಾರೆ. ಇವರ ಕಿರಿಯ ಸಹೋದರ ಶ್ರೀನಿವಾಸ್‌ ಪವಾರ್ ಅವರ ಪುತ್ರ ಯುಗೇಂದ್ರ ಪವಾರ್‌ ಎನ್‌ಸಿಪಿ (ಎಸ್‌ಪಿ) ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು, ಚುನಾವಣಾ ಅಖಾಡ ರಂಗೇರಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.