ADVERTISEMENT

ಹಗರಣಗಳಲ್ಲಿ ಅಜಿತ್‌ಗೆ ಕ್ಲೀನ್‌ ಚಿಟ್‌ ಪ್ರಶ್ನಿಸಿ ಕೋರ್ಟ್‌ ಮೊರೆ ಹೋಗಲು ನಿರ್ಧಾರ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2019, 5:08 IST
Last Updated 26 ನವೆಂಬರ್ 2019, 5:08 IST
   

ಮುಂಬೈ: ಮಹಾರಾಷ್ಟ್ರದ ನೀರಾವರಿ ಇಲಾಖೆಯ 9 ಹಗರಣಗಳಲ್ಲಿ ಅಜಿತ್ ಪವಾರ್ ಅವರ ಹೆಸರು ಕೈಬಿಟ್ಟ ಕ್ರಮವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲು ಶಿವಸೇನಾ, ಎನ್‌ಸಿಪಿ ಮತ್ತು ಕಾಂಗ್ರೆಸ್ ಪಕ್ಷಗಳು ನಿರ್ಧರಿಸಿವೆ.

ಈ ಎಲ್ಲ 9 ಹಗರಣಗಳಲ್ಲಿ ಒಟ್ಟು ₹ 70 ಸಾವಿರ ಅಕ್ರಮ ಎಸಗಿದ ಆರೋಪ ಅಜಿತ್ ಪವಾರ್ ಅವರ ಮೇಲಿತ್ತು. ತನಿಖೆ ಪೂರ್ಣಗೊಂಡಿರುವ 9 ಪ್ರಕರಣಗಳಿಗೂ ಅಜಿತ್ ಪವಾರ್‌ ಅವರಿಗೂ ಯಾವುದೇ ಸಂಬಂಧವಿಲ್ಲ ಎಂದು ಭ್ರಷ್ಟಾಚಾರ ತಡೆ ಘಟಕ (ಎಸಿಬಿ) ಸೋಮವಾರ ಸ್ಪಷ್ಟಪಡಿಸಿತ್ತು.

ದೇವೇಂದ್ರ ಫಡಣವೀಸ್‌ ನೇತೃತ್ವದ ಸರ್ಕಾರ ಇನ್ನೂ ಬಹುಮತ ಸಾಬೀತುಪಡಿಸಿಲ್ಲ. ಹೀಗಾಗಿ ಯಾವುದೇ ಮುಖ್ಯ ನಿರ್ಧಾರ ತೆಗೆದುಕೊಳ್ಳುವಂತಿಲ್ಲ ಎಂದು ಮೂರೂ ವಿರೋಧ ಪಕ್ಷಗಳು ಆಕ್ಷೇಪಿಸಿವೆ.

ADVERTISEMENT

ಎಸಿಬಿ ಕ್ರಮಕ್ಕೆ ತಡೆ ಕೋರುವುದರ ಜೊತೆಗೆ ಫಡಣವೀಸ್ ನೇತೃತ್ವದ ಸರ್ಕಾರಕ್ಕೆ ಯಾವುದೇ ಮುಖ್ಯ ನಿರ್ಧಾರ ತೆಗೆದುಕೊಳ್ಳದಂತೆ ನಿರ್ಬಂಧ ವಿಧಿಸಬೇಕು ಎಂದು ವಿರೋಧಪಕ್ಷಗಳು ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ವಿನಂತಿಸಿವೆ.

₹72 ಸಾವಿರ ಕೋಟಿ ಹಗರಣ

ವಿದರ್ಭ ನೀರಾವರಿ ಅಭಿವೃದ್ಧಿ ನಿಗಮದ 45 ಯೋಜನೆಗಳಲ್ಲಿ ಟೆಂಡರ್ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ 2012ರಲ್ಲಿ ಬಾಂಬೆ ಹೈಕೋರ್ಟ್‌ನನಾಗಪುರ ಪೀಠದಲ್ಲಿ ಎರಡು ಪಿಐಎಲ್‌ ಸಲ್ಲಿಕೆಯಾಗಿದ್ದವು. ಈ ಅವಧಿಯಲ್ಲಿ ಎನ್‌ಸಿಪಿ–ಕಾಂಗ್ರೆಸ್ ಸರ್ಕಾರದಲ್ಲಿ ಅಜಿತ್ ಪವಾರ್ ಅವರು ಜಲಸಂಪನ್ಮೂಲ ಸೇರಿದಂತೆ ಮಹತ್ವದ ಖಾತೆಗಳನ್ನು ನಿಭಾಯಿಸಿದ್ದರು.

₹72 ಸಾವಿರ ಕೋಟಿ ಮೊತ್ತದಯೋಜನೆಗಳಿಗೆ ಅನುಮೋದನೆ ನೀಡಿಕೆ ಹಾಗೂ ಅನುಷ್ಠಾನದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಲಾಗಿತ್ತು. ನಿಗಮದ ಅಧ್ಯಕ್ಷರೂ ಆಗಿದ್ದ ಅಜಿತ್ ವಿರುದ್ಧ ಅಂದು ಪ್ರತಿಪಕ್ಷಗಳ ಸಾಲಿನಲ್ಲಿದ್ದ ದೇವೇಂದ್ರ ಫಡಣವೀಸ್ ಅವರು ದನಿ ಎತ್ತಿದ್ದರು. ಹೀಗಾಗಿ ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್ ಅವರು ತನಿಖೆಗೆ ಆದೇಶಿಸಿದ್ದರು. 2014ರಲ್ಲಿ ಫಡಣವೀಸ್ ಅವರು ಈ ಪ್ರಕರಣವನ್ನು ಎಸಿಬಿಗೆ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.