ನವದೆಹಲಿ: ಶಿವಸೇನಾ ಪಕ್ಷದ ‘ಆರೆ ಅರಣ್ಯ ರಕ್ಷಿಸಿ’ ಪ್ರತಿಭಟನೆಯಲ್ಲಿ ಮಕ್ಕಳನ್ನು ಬಳಸಿಕೊಂಡ ಆರೋಪದ ಮೇರೆಗೆ ಸೇನಾ ನಾಯಕ ಆದಿತ್ಯ ಠಾಕ್ರೆ ಅವರ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳುವಂತೆ ಮಕ್ಕಳ ಹಕ್ಕುಗಳ ರಕ್ಷಣೆಯ ರಾಷ್ಟ್ರೀಯ ಆಯೋಗವು (ಎನ್‌ಸಿಪಿಸಿಆರ್) ಸೋಮವಾರ ಮುಂಬೈಗೆ ಪೊಲೀಸರಿಗೆ ಮನವಿ ಮಾಡಿದೆ.
ಈ ಸಂಬಂಧ ಮುಂಬೈ ಪೊಲೀಸರಿಗೆ ನೋಟಿಸ್ ನೀಡಿರುವ ಎನ್‌ಸಿಪಿಸಿಆರ್, ‘ಆದಿತ್ಯ ಅವರ ವಿರುದ್ಧ ತಮಗೆ ದೂರು ಬಂದಿದೆ. ‘ಆರೆ ಅರಣ್ಯ ರಕ್ಷಿಸಿ’ ಪ್ರತಿಭಟನೆಯು ರಾಜಕೀಯ ಅಭಿಯಾನವಾಗಿದ್ದು ಮುಂಬೈ ಜಿಲ್ಲಾ ಫುಟ್‌ಬಾಲ್ ಅಸೋಸಿಯೇಷನ್ ಅಧ್ಯಕ್ಷರೂ ಆಗಿರುವ ಆದಿತ್ಯ ಠಾಕ್ರೆ ಅವರು, ಶಿವಸೇನಾದ ಯುವಘಟಕವಾಗಿರುವ ಯುವಸೇನಾದಲ್ಲಿ ಅಪ್ರಾಪ್ತ ವಯಸ್ಸಿನ ಮಕ್ಕಳನ್ನು ಬಳಸಿಕೊಂಡಿದ್ದಾರೆ’ ಎಂದು ಆರೋಪಿಸಿದೆ.
ಪ್ರತಿಭಟನೆಯ ಭಾಗವಾಗಿ ಮಕ್ಕಳು ಫಲಕಗಳನ್ನು ಹಿಡಿದಿರುವ ಚಿತ್ರಗಳನ್ನು ತೋರಿಸುವ ಟ್ವಿಟ್ಟರ್ ಲಿಂಕ್ ಅನ್ನು ಸಹಎನ್‌ಸಿಪಿಸಿಆರ್ ಹಂಚಿಕೊಂಡಿದೆ.
‘ಆದಿತ್ಯ ಠಾಕ್ರೆ ಅವರ ವಿರುದ್ಧ ತಕ್ಷಣವೇ ಎಫ್‌ಐಆರ್ ದಾಖಲಿಸಿ, ತುರ್ತಾಗಿ ತನಿಖೆ ಕೈಗೊಳ್ಳಬೇಕು’ ಎಂದೂ ಎನ್‌ಸಿಪಿಸಿಆರ್ ಮುಂಬೈ ಆಯುಕ್ತರಿಗೆ ಮನವಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.