ADVERTISEMENT

ಎನ್‌ಸಿಆರ್‌ಬಿಯಿಂದ ದತ್ತಾಂಶ ಸಂಗ್ರಹ ಅಬಾಧಿತ: ಸುಪ್ರೀಂ ಕೋರ್ಟ್‌ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2024, 14:36 IST
Last Updated 7 ನವೆಂಬರ್ 2024, 14:36 IST
ಸುಪ್ರೀಂ ಕೋರ್ಟ್‌ 
ಸುಪ್ರೀಂ ಕೋರ್ಟ್‌    

ನವದೆಹಲಿ: ವಿಚಾರಣಾಧೀನ ಕೈದಿಗಳು ಹಾಗೂ ಅಪರಾಧಿಗಳ ಕುರಿತು ಮಾಹಿತಿ ಇರುವ ಕಡತಗಳಲ್ಲಿ ‘ಜಾತಿ’ ಕಲಂ ತೆಗೆದು ಹಾಕುವಂತೆ ತಾನು ನೀಡಿರುವ ನಿರ್ದೇಶನವು ರಾಷ್ಟ್ರೀಯ ಅಪರಾಧಗಳ ದಾಖಲೆ ಬ್ಯುರೊ (ಎನ್‌ಸಿಆರ್‌ಬಿ) ಕೈಗೊಳ್ಳುವ ದತ್ತಾಂಶ ಸಂಗ್ರಹ ಕಾರ್ಯಕ್ಕೆ ಅಡ್ಡಿಯಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ಗುರುವಾರ ಸ್ಪಷ್ಟಪಡಿಸಿದೆ.

ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌, ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದೀವಾಲಾ ಹಾಗೂ ಮನೋಜ್‌ ಮಿಶ್ರಾ ಅವರಿದ್ದ ನ್ಯಾಯಪೀಠ ಈ ಸ್ಪಷ್ಟನೆ ನೀಡಿದೆ.

ಅಕ್ಟೋಬರ್‌ 3ರಂದು ಚಾರಿತ್ರಿಕ ತೀರ್ಪು ಪ್ರಕಟಿಸಿದ್ದ ಸುಪ್ರೀಂ ಕೋರ್ಟ್‌, ಜೈಲುಗಳಲ್ಲಿನ ವಿಚಾರಣಾಧೀನ ಕೈದಿಗಳು ಹಾಗೂ ಅಪರಾಧಿಗಳ ವಿರುದ್ಧ ಜಾತಿ ಆಧಾರದಲ್ಲಿ ತಾರತಮ್ಯ ಮಾಡುವುದನ್ನು ನಿಷೇಧಿಸಿ ಆದೇಶಿಸಿತ್ತು.

ADVERTISEMENT

ವಿಚಾರಣಾಧೀನ ಕೈದಿಗಳು/ಅಪರಾಧಿಗಳ ಜಾತಿ ಕುರಿತಂತೆ ಜೈಲಿನ ಕಡತಗಳಲ್ಲಿ ಉಲ್ಲೇಖವಿದ್ದಲ್ಲಿ ಹಾಗೂ ‘ಜಾತಿ’ ಕಲಂ ಅನ್ನು ತೆಗೆದು ಹಾಕಬೇಕು ಎಂಬುದು ಸುಪ್ರೀಂ ಕೋರ್ಟ್‌ನ ನಿರ್ದೇಶನಗಳಲ್ಲೊಂದಾಗಿದೆ.

ಅರ್ಜಿದಾರರ ಪರ ಹಾಜರಿದ್ದ ಹಿರಿಯ ವಕೀಲ ಎಸ್‌.ಮುರಳೀಧರ,‘ಜಾತಿ ಪದವನ್ನು ಜೈಲಿನ ಕಡತಗಳಿಂದ ತೆಗೆದು ಹಾಕುವಂತೆ ಸುಪ್ರೀಂ ಕೋರ್ಟ್‌ ನೀಡಿರುವ ನಿರ್ದೇಶನವು, ಎನ್‌ಸಿಆರ್‌ಬಿ ಕೈಗೊಳ್ಳುವ ದತ್ತಾಂಶ ಸಂಗ್ರಹ ಕಾರ್ಯಕ್ಕೆ ಅಡ್ಡಿಯಾಗಬಾರದು. ಅರ್ಜಿಯಲ್ಲಿ ಈ ಕುರಿತ ನಿವೇದನೆ ಇದೆ’ ಎಂದು ಪೀಠಕ್ಕೆ ತಿಳಿಸಿದರು.

ಕೇಂದ್ರದ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಐಶ್ವರ್ಯ ಭಾಟಿ, ಈ ಮಾತಿಗೆ ಸಹಮತ ವ್ಯಕ್ತಪಡಿಸಿದರು.

ಆಗ, ‘ಈ ರೀತಿಯ ಸ್ಪಷ್ಟನೆಗಾಗಿ ಸ್ವತಃ ಎನ್‌ಸಿಆರ್‌ಬಿ ಅರ್ಜಿ ಸಲ್ಲಿಸಬೇಕಿತ್ತು’ ಎಂದು ಪೀಠ ಹೇಳಿತು. 

ಇದಕ್ಕೆ ಪ್ರತಿಕ್ರಿಯಿಸಿದ ಎಎಸ್‌ಜಿ ಭಾಟಿ, ‘ಈ ಕುರಿತು ನ್ಯಾಯಾಲಯದಿಂದ ಸ್ಪಷ್ಟನೆ ‍ಪಡೆಯುವಂತೆ ಗೃಹ ಸಚಿವಾಲಯ ನನಗೆ ಸೂಚಿಸಿತ್ತು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.