ನವದೆಹಲಿ: ದೇಶದ 19 ಮಹಾನಗರಗಳಲ್ಲಿ 2020ರಲ್ಲಿ ನಡೆದಿರುವ ಕೊಲೆ ಮತ್ತು ಅತ್ಯಾಚಾರ ಪ್ರಕರಣಗಳಲ್ಲಿ ದೆಹಲಿಯೊಂದರಲ್ಲೇ ಶೇ 40ರಷ್ಟು ಅತ್ಯಾಚಾರ ಪ್ರಕರಣಗಳು ಮತ್ತು ಶೇ 25ರಷ್ಟು ಕೊಲೆ ಪ್ರಕರಣಗಳು ವರದಿಯಾಗಿವೆ.
ರಾಷ್ಟ್ರೀಯ ಅಪರಾಧಗಳ ದಾಖಲೆ ಬ್ಯೂರೊ(ಎನ್‌ಸಿಆರ್‌ಬಿ) ದತ್ತಾಂಶದ ಪ್ರಕಾರ, 2020ರಲ್ಲಿ ದೇಶಾದ್ಯಂತ 1,849 ಕೊಲೆ ಪ್ರಕರಣಗಳು ಮತ್ತು 2,533 ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ.
ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎನ್‌ಸಿಆರ್‌ಪಿ, 20 ಲಕ್ಷ ಜನಸಂಖ್ಯೆ ಹೊಂದಿರುವ 19 ನಗರಗಳನ್ನು ಮಹಾನಗರಗಳೆಂದು ವರ್ಗೀಕರಿಸಿದೆ. ಅದರಲ್ಲಿ ಅಹಮದಾಬಾದ್, ಬೆಂಗಳೂರು, ಚೆನ್ನೈ, ಕೊಯಮತ್ತೂರು, ದೆಹಲಿ, ಗಾಜಿಯಾಬಾದ್, ಹೈದರಾಬಾದ್, ಇಂದೋರ್, ಜೈಪುರ, ಕಾನ್ಪುರ, ಕೊಚ್ಚಿ, ಕೋಲ್ಕತ್ತಾ, ಲಖನೌ, ಮುಂಬೈ, ನಾಗಪುರ, ಪಟ್ನಾ, ಪುಣೆ ಮತ್ತು ಸೂರತ್ ಸೇರಿವೆ.
ಒಟ್ಟು ಕೊಲೆ ಪ್ರಕರಣಗಳ ಸಂಖ್ಯೆ 1849. ಇದರಲ್ಲಿ ದೆಹಲಿಯಲ್ಲಿ ದಾಖಲಾಗಿರುವುದು ಗರಿಷ್ಠ 461 (ಶೇ 24ರಷ್ಟು). ನಂತರದ ಸ್ಥಾನದಲ್ಲಿ ಬೆಂಗಳೂರು (179), ಚೆನ್ನೈ (155), ಮುಂಬೈ(148) ಮತ್ತು ಸೂರತ್(116) ಹಾಗೂ ಕೋಲ್ಕತ್ತಾ (53) ನಗರಗಳಿವೆ.2019ರಲ್ಲಿ 2017 ಕೊಲೆ ಪ್ರಕರಣಗಳು ದಾಖಲಾಗಿದ್ದವು. ಆ ವರ್ಷಕ್ಕೆ ಹೋಲಿಸಿದರೆ, 2020ರಲ್ಲಿ ಶೇ 8.3ರಷ್ಟು ಪ್ರಕರಣಗಳು ಕಡಿಮೆಯಾಗಿವೆ.
ಎನ್‌ಸಿಆರ್‌ಬಿ ದಾಖಲೆಗಳ ಪ್ರಕಾರ 2019ರಲ್ಲಿ ಶೇ 1.8 ರಷ್ಟಿದ್ದ ಅಪರಾಧ ಪ್ರಕರಣಗಳ ಸಂಖ್ಯೆ, 2020ರಲ್ಲಿ 1.6ಕ್ಕೆ ಇಳಿದಿದೆ.
2020ರಲ್ಲಿ ಒಟ್ಟು 2,533 ಅತ್ಯಾಚಾರ ಪ್ರಕರಣಗಳು ವರದಿಯಾಗಿದೆ. ದೆಹಲಿಯು ಗರಿಷ್ಠ 967 (ಶೇ 38) ಪ್ರಕರಣಗಳು ಮತ್ತು ಜೈಪುರದಲ್ಲಿ 409 (ಶೇ 16) ಮುಂಬೈನಲ್ಲಿ 322 (ಶೇ 12) ವರದಿಯಾಗಿದೆ. ಬೆಂಗಳೂರಿನಲ್ಲಿ 108, ಚೆನ್ನೈ 31 ಮತ್ತು ಕೋಲ್ಕತ್ತಾದಲ್ಲಿ 11 ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.