ನವದೆಹಲಿ: 2017–19ರಲ್ಲಿ 14 ರಿಂದ 18 ವಯಸ್ಸಿನೊಳಗಿನ 13,325 ಬಾಲಕಿಯರು ಸೇರಿದಂತೆ 24,568 ಮಕ್ಕಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದರಲ್ಲಿ 4,000 ಕ್ಕೂ ಹೆಚ್ಚು ಮಕ್ಕಳು ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದಾರೆ ಎಂಬ ಕಾರಣಕ್ಕೆ ಆತ್ಯಹತ್ಯೆ ಮಾಡಿಕೊಂಡಿದ್ದಾರೆ ಎಂದು ಸರ್ಕಾರದ ಅಂಕಿಅಂಶಗಳು ಹೇಳಿವೆ.
ಇತ್ತೀಚಿಗೆ ಸಂಸತ್ತಿನಲ್ಲಿ ಮಂಡಿಸಲಾದ ಮಕ್ಕಳ ಆತ್ಮಹತ್ಯೆಗೆ ಕುರಿತಾದ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋದ (ಎನ್‌ಸಿಆರ್‌ಬಿ) ಅಂಕಿಅಂಶದಿಂದ ಈ ವಿಷಯ ಗೊತ್ತಾಗಿದೆ.
2017ರಲ್ಲಿ 14–18ರೊಳಗಿನ 8,029 ಮಕ್ಕಳು ಆತ್ಮಹತ್ಯೆಗೆ ಶರಣಾಗಿದ್ದರೆ, 2018ಕ್ಕೆ ಈ ಸಂಖ್ಯೆಯು8,162 ಮತ್ತು 2019ಕ್ಕೆ 8,377ಕ್ಕೆ ಏರಿಕೆಯಾಗಿದೆ. ಮಧ್ಯಪ್ರದೇಶದಲ್ಲಿ ಅತಿ ಹೆಚ್ಚು ಮಕ್ಕಳ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ. ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ ಮತ್ತು ತಮಿಳುನಾಡಿನಲ್ಲಿ ಕ್ರಮವಾಗಿ 3,115, 2,802, 2,527 ಮತ್ತು 2,035 ಮಕ್ಕಳ ಪ್ರಕರಣಗಳು ವರದಿಯಾಗಿವೆ.
‘ಪರೀಕ್ಷೆಯಲ್ಲಿ ಫೇಲ್ ಆಗಿದ್ದಾರೆಂಬ ಕಾರಣದಿಂದ 4,046 ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದರೆ, 411 ಬಾಲಕಿಯರು ಸೇರಿ 639 ಮಂದಿ ಮದುವೆಗೆ ಸಂಬಂಧಿಸಿದ ಸಮಸ್ಯೆಗಳಿಂದಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇನ್ನೂ 3,315 ಮಕ್ಕಳು ಪ್ರೇಮ ಪ್ರಕರಣಗಳಿಂದಾಗಿ ತಮ್ಮ ಜೀವನವನ್ನು ಅಂತ್ಯಗೊಳಿಸಿದರೆ, 2,567 ಮಕ್ಕಳ ಆತ್ಮಹತ್ಯೆಗೆ ಅನಾರೋಗ್ಯದ ಕಾರಣವನ್ನು ನೀಡಲಾಗಿದೆ ಎಂದು ಅಂಕಿಅಂಶ ಹೇಳಿದೆ.
81 ಮಕ್ಕಳ ಆತ್ಯಹತ್ಯೆಗೆ ದೈಹಿಕ ಹಿಂಸೆಯನ್ನು ಕಾರಣವೆಂದು ಹೇಳಲಾಗಿದೆ. ಆತ್ಮೀಯರನ್ನು ಕಳೆದುಕೊಂಡ ದುಃಖ, ಡ್ರಗ್ಸ್ ಮತ್ತು ಮಧ್ಯಸೇವನೆ, ಅನ್ಯಾಯವಾಗಿ ಗರ್ಭಧಾರಣೆ, ನಿರುದ್ಯೋಗ, ಬಡತನ, ಸಿನಿಮಾ ತಾರೆಯ ಆರಾಧನೆಗಳು ಕೂಡ ಆತ್ಮಹತ್ಯೆ ಹಿಂದಿನ ಇತರೆ ಕಾರಣಗಳಾಗಿವೆ.
‘ಕೋವಿಡ್ ಸಾಂಕ್ರಾಮಿಕದಿಂದಾಗಿ ಪರಿಸ್ಥಿತಿ ಇನ್ನಷ್ಟು ಹದಗೆಡಬಹುದು. ಹಾಗಾಗಿ ಶಾಲೆಗಳ ಪಠ್ಯಕ್ರಮದಲ್ಲಿ ಜೀವನ ಕೌಶಲ, ಮಾನಸಿಕ ಆರೋಗ್ಯ ವೃದ್ಧಿ, ಸ್ವಾಸ್ಥ್ಯದಂತಹ ವಿಷಯಗಳನ್ನು ಸೇರಿಸಬೇಕು’ ಎಂದು ಮಕ್ಕಳ ಹಕ್ಕುಗಳ ಹೋರಾಟಗಾರರು ಸಲಹೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.