ನವದೆಹಲಿ: ಪಿಟಿಐ ಸುದ್ದಿ ಸಂಸ್ಥೆಯ ಪತ್ರಕರ್ತೆಯ ಮೇಲೆ ಎಎನ್‌ಐ ಸುದ್ದಿ ಸಂಸ್ಥೆಯ ಪತ್ರಕರ್ತ ಹಲ್ಲೆ ನಡೆಸಿರುವುದಕ್ಕೆ ರಾಷ್ಟ್ರೀಯ ಮಹಿಳಾ ಆಯೋಗದ (ಎನ್‌ಸಿಡಬ್ಲ್ಯೂ) ಸದಸ್ಯೆ ಖುಷ್ಬೂ ಸುಂದರ್ ಆಘಾತ ವ್ಯಕ್ತಪಡಿಸಿದ್ದು, ಆತನ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಅವರ ಸಹೋದರ ಡಿ.ಕೆ. ಸುರೇಶ್ ಇದ್ದ ಪತ್ರಿಕಾಗೋಷ್ಠಿಯಲ್ಲಿ ಎಎನ್‌ಐ ವರದಿಗಾರ, ಪಿಟಿಐ ಮಹಿಳಾ ವರದಿಗಾರ್ತಿಯ ಮೇಲೆ ಹಲ್ಲೆ ಮಾಡಿದ್ದಲ್ಲದೇ, ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಪಿಟಿಐ ಆರೋಪಿಸಿದೆ.
ಘಟನೆ ಕುರಿತು ಪ್ರತಿಕ್ರಿಯಿಸಿದ ಖುಷ್ಬೂ ಸುಂದರ್, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. 'ಬೆಂಗಳೂರಿನಲ್ಲಿ ಪಿಟಿಐ ಮಹಿಳಾ ಪತ್ರಕರ್ತೆಯ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದಿಸಿದ ಪತ್ರಕರ್ತನ ವರ್ತನೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಆತನ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು' ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ವಿಡಿಯೊವನ್ನು ಪೋಸ್ಟ್ ಮಾಡಿರುವ ಪಿಟಿಐ ಸುದ್ದಿ ಸಂಸ್ಥೆ, ಎಎನ್‌ಐ ಪತ್ರಕರ್ತನ ನಡವಳಿಕೆಯನ್ನು ಖಂಡಿಸಿದ್ದು, ಈ ಬಗ್ಗೆ ಸೂಕ್ತ ಕಾನೂನು ಕ್ರಮಕೈಗೊಳ್ಳುವುದಾಗಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.