ADVERTISEMENT

ಸರ್ಕಾರ ಕಾಂಡೋಮ್‌ ಕೊಡಬೇಕಾ? ಎಂದಿದ್ದ ಐಎಎಸ್‌ ಅಧಿಕಾರಿಗೆ ಎನ್‌ಸಿಡಬ್ಲ್ಯು ತರಾಟೆ

ಪಿಟಿಐ
Published 29 ಸೆಪ್ಟೆಂಬರ್ 2022, 11:44 IST
Last Updated 29 ಸೆಪ್ಟೆಂಬರ್ 2022, 11:44 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕೈಗೆಟುಕ ದರದಲ್ಲಿ ಸ್ಯಾನಿಟರಿ ನ್ಯಾಪ್ಕಿನ್‌ ಸೌಲಭ್ಯದ ಬಗ್ಗೆ ಪ್ರಶ್ನೆ ಕೇಳಿದ ಶಾಲಾ ವಿದ್ಯಾರ್ಥಿನಿಗೆ, ಅಸಮಂಜಸ ಮತ್ತು ತೀವ್ರ ಆಕ್ಷೇಪಾರ್ಹ ಉತ್ತರ ನೀಡಿರು‌ವ ಐಎಎಸ್‌ ಹಿರಿಯ ಮಹಿಳಾ ಅಧಿಕಾರಿಯಿಂದ ರಾಷ್ಟ್ರೀಯ ಮಹಿಳಾ ಆಯೋಗವು (ಎನ್‌ಸಿಡಬ್ಲ್ಯು) ವಿವರಣೆ ಕೇಳಿದೆ.

ಮಾಧ್ಯಮಗಳ ವರದಿ ಪ್ರಕಾರ, ಪಟ್ನಾದಲ್ಲಿ ಮಹಿಳಾ ಅಭಿವೃದ್ಧಿ ನಿಗಮವು ಆಯೋಜಿಸಿದ್ದ ಸಂವಾದದಲ್ಲಿಬಿಹಾರದ ಶಾಲಾ ವಿದ್ಯಾರ್ಥಿ ‘ಸರ್ಕಾರವು ಶಾಲಾ ವಿದ್ಯಾರ್ಥಿನಿಯರಿಗೆ ಕೈಗೆಟುಕುವ ದರದಲ್ಲಿ ಸ್ಯಾನಿಟರಿ ಪ್ಯಾಡ್‌ ನೀಡುವ ವ್ಯವಸ್ಥೆ ಮಾಡಬಹುದೇ’ ಎಂದು ಪ್ರಶ್ನಿಸಿದ್ದಾಳೆ. ಆಗ ಅಧಿಕಾರಿ ಹರ್ಜೋತ್‌ ಕೌರ್‌ ಬೂಮ್ರಾ ಅವರು, ‘ನಾಳೆ ಸರ್ಕಾರವು ಜೀನ್ಸ್‌ ಸಹ ನೀಡಲಿ ಎಂದು ಬಯಸುತ್ತೀರಿ. ಕೊನೆಗೆ, ಕಾಂಡೋಮ್‌ ಅನ್ನೂ ಸರ್ಕಾರವೇ ನೀಡಲಿ ಎಂದು ಬಯಸುತ್ತೀರಿ. ಸರ್ಕಾರ ಕಾಂಡೋಮ್‌ (ನಿರೋಧ್) ನೀಡಬೇಕೆ’ ಎಂದು ವಿದ್ಯಾರ್ಥಿನಿಗೆ ಕೇಳಿದ್ದರು. ಅಧಿಕಾರಿಯ ಸಂಭಾಷಣೆಯ ವಿಡಿಯೊ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್‌ ಆಗಿದೆ.

‘ಎನ್‌ಸಿಡಬ್ಲ್ಯು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ. ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಅವರು ಐಎಎಸ್‌ ಅಧಿಕಾರಿ ಹರ್ಜೋತ್‌ ಕೌರ್‌ ಬೂಮ್ರಾ ಅವರಿಗೆ ಲಿಖಿತ ಪತ್ರ ಬರೆದು, ಅಸಮಂಜಸ ಮತ್ತು ಆಕ್ಷೇಪಾರ್ಹ ಹೇಳಿಕೆ ಬಗ್ಗೆ ವಿವರಣೆ ನೀಡುವಂತೆ ಸೂಚಿಸಿದ್ದಾರೆ’ ಎಂದುಮಹಿಳಾ ಸಮಿತಿ ಹೇಳಿಕೆಯಲ್ಲಿ ತಿಳಿಸಿದೆ.

ADVERTISEMENT

‘ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿ ಇಂತಹ ಅಸೂಕ್ಷ್ಮ ವರ್ತನೆ ತೋರಿರುವುದು ಖಂಡನೀಯ ಮತ್ತು ಅತ್ಯಂತ ನಾಚಿಕೆಗೇಡಿನ ಸಂಗತಿಯೂ ಆಗಿದೆ’ ಎಂದು ಎನ್‌ಸಿಡಬ್ಲ್ಯು ಹೇಳಿದೆ.

ಅಧಿಕಾರಿ ಹೇಳಿಕೆಗೆ ನಿತೀಶ್‌ ಕಿಡಿ:(ಪಟ್ನಾ ವರದಿ) ಶಾಲಾ ವಿದ್ಯಾರ್ಥಿನಿಗೆ ಹಿರಿಯ ಐಎಎಸ್‌ ಅಧಿಕಾರಿ ಹರ್ಜೋತ್‌ ಕೌರ್‌ ಬೂಮ್ರಾ ಅವರು ವಿವೇಚನಾ ರಹಿತವಾಗಿ ಪ್ರತಿಕ್ರಿಯಿಸಿರುವುದು ತಮ್ಮ ಸರ್ಕಾರಕ್ಕೂ ತೀವ್ರ ಮುಜುಗರ ಉಂಟು ಮಾಡಿದೆ ಎಂದು ಭಾವಿಸಿರುವ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌, ಅಧಿಕಾರಿಯ ವಿರುದ್ಧ ತೀವ್ರ ಸಿಡಿಮಿಡಿಗೊಂಡಿದ್ದಾರೆ.

ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಆಯೋಗದ ಮುಖ್ಯಸ್ಥೆ ಹಾಗೂ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಆಗಿರುವ ಹಿರಿಯ ಮಹಿಳಾ ಐಎಎಸ್‌ ಹರ್ಜೋತ್‌ ಕೌರ್‌ ಬೂಮ್ರಾ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವ ಸುಳಿವನ್ನೂ ಮುಖ್ಯಮಂತ್ರಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.