ನವದೆಹಲಿ: ತೆರವಾಗಿರುವ 12 ಸ್ಥಾನಗಳಿಗೆ ಮುಂದಿನ ತಿಂಗಳು ಉಪಚುನಾವಣೆ ನಡೆದ ನಂತರ ರಾಜ್ಯಸಭೆಯಲ್ಲಿ ತನಗೆ ಸ್ಪಷ್ಟ ಬಹುಮತ ಸಿಗಲಿದೆ ಎಂಬ ನಿರೀಕ್ಷೆಯಲ್ಲಿ ಎನ್‌ಡಿಐ ಮೈತ್ರಿಕೂಟವಿದೆ.
ರಾಜ್ಯಸಭೆಯಲ್ಲಿಯೂ ಬಹುಮತ ಸಿಕ್ಕಲ್ಲಿ, ವಕ್ಫ್ ತಿದ್ದುಪಡಿ ಮಸೂದೆ ಸೇರಿದಂತೆ ಪ್ರಮುಖ ಮಸೂದೆಗಳನ್ನು ಅಂಗೀಕರಿಸಲು ದಾರಿ ಸುಗಮವಾಗಲಿದೆ ಎಂಬ ಲೆಕ್ಕಾಚಾರವನ್ನೂ ಎನ್‌ಡಿಎ ಹೊಂದಿದೆ.
ರಾಜ್ಯಸಭೆ ಸದಸ್ಯ ಬಲ ಸದ್ಯ 229 ಇದ್ದು, ಬಿಜೆಪಿಯ 87 ಸಂಸದರಿದ್ದಾರೆ. ಮಿತ್ರ ಪಕ್ಷಗಳ ಸಂಸದರ ಸಂಖ್ಯೆಯನ್ನೂ ಸೇರಿಸಿದಲ್ಲಿ ಎನ್‌ಡಿಎ ಸದಸ್ಯ ಸಂಖ್ಯೆ 105 ಆಗುತ್ತದೆ. 6 ಜನ ನಾಮನಿರ್ದೇಶನಗೊಂಡ ಸದಸ್ಯರಿದ್ದು, ಸಾಮಾನ್ಯವಾಗಿ, ಸರ್ಕಾರದ ನಿಲುವಿನ ಪರವಾಗಿಯೇ ಇವರು ಮತ ಚಲಾವಣೆ ಮಾಡುವರು. ಇದರೊಂದಿಗೆ, ಎನ್‌ಡಿಎ ಸದಸ್ಯ ಬಲ 111 ಆಗುವುದು. ಸರಳ ಬಹುಮತಕ್ಕೆ 115 ಸ್ಥಾನಗಳು ಅಗತ್ಯ. ಹೀಗಾಗಿ, ಎನ್‌ಡಿಎ ಒಕ್ಕೂಟಕ್ಕೆ ನಾಲ್ಕು ಸ್ಥಾನಗಳ ಕೊರತೆ ಎದುರಾಗಲಿದೆ.
ರಾಜ್ಯಸಭೆಯಲ್ಲಿ ಕಾಂಗ್ರೆಸ್ 26 ಸದಸ್ಯರನ್ನು ಹೊಂದಿದೆ. ಮಿತ್ರ ಪಕ್ಷಗಳ 58 ಸದಸ್ಯರು ಸೇರಿ, ವಿಪಕ್ಷಗಳ ಸದಸ್ಯರ ಸಂಖ್ಯೆ 84 ಆಗುವುದು. ಇನ್ನು, 11 ಸಂಸದರನ್ನು ಹೊಂದಿರುವ ವೈಎಸ್‌ಆರ್ ಕಾಂಗ್ರೆಸ್, 8 ಸದಸ್ಯ ಬಲದ ಬಿಜೆಡಿ ಎರಡೂ ಒಕ್ಕೂಟಗಳಿಂದ ಅಂತರ ಕಾಯ್ದುಕೊಂಡಿವೆ.
ಎನ್‌ಡಿಎಗೆ ಅನುಕೂಲ?: 12 ಸ್ಥಾನಗಳಿಗೆ ಸೆಪ್ಟೆಂಬರ್ 3ರಂದು ಚುನಾವಣೆ ನಡೆಯಲಿದೆ. ಪ್ರತಿ ಸ್ಥಾನಕ್ಕೂ ಪ್ರತ್ಯೇಕವಾಗಿ ಚುನಾವಣೆ ನಡೆಸುವುದಾಗಿ ಚುನಾವಣೆ ಆಯೋಗ ಘೋಷಿಸಿದೆ. ಇದು, ಆಯಾ ರಾಜ್ಯಗಳಲ್ಲಿನ ಆಡಳಿತಾರೂಢ ಪಕ್ಷಗಳಿಗೆ ಅನುಕೂಲವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
12ರಲ್ಲಿ ಎನ್‌ಡಿಎ ಮೈತ್ರಿಕೂಟ 11 ಸ್ಥಾನಗಳಲ್ಲಿ ಗೆಲ್ಲುವ ನಿರೀಕ್ಷೆ ಇದೆ. ಆಗ, ಎನ್‌ಡಿಎ ಬಲ 122ಕ್ಕೆ ಏರಿಕೆಯಾಗುವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.