ಅಮರಾವತಿ: ಆಂಧ್ರಪ್ರದೇಶದಲ್ಲಿ ಮುಂಬರುವ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆ ಸಂಬಂಧ ಎನ್‌ಡಿಎ ಮಿತ್ರ ಪಕ್ಷಗಳಾದ ಬಿಜೆಪಿ, ಟಿಡಿಪಿ ಮತ್ತು ಜನಸೇನಾ ಪಕ್ಷಗಳು ಸೀಟು ಹಂಚಿಕೆ ಕುರಿತು ಒಪ್ಪಂದ ಮಾಡಿಕೊಂಡಿವೆ.
ಈ ಕುರಿತು ಸೋಮವಾರ ನಡೆದ ಸುದೀರ್ಘ ಚರ್ಚೆಯ ಬಳಿಕ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಘೋಷಣೆ ಮಾಡಿದರು.
ಲೋಕಸಭೆಯಲ್ಲಿ ಟಿಡಿಪಿ 17, ಬಿಜೆಪಿ ಆರು, ಮತ್ತು ಜನಸೇನಾ ಪಕ್ಷ ಎರಡು ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಟಿಡಿಪಿ 144, ಬಿಜೆಪಿ 10 ಮತ್ತು ಜನಸೇನಾ ಪಕ್ಷ 21 ಸ್ಥಾನಗಳಲ್ಲಿ ಸ್ಪರ್ಧಿಸಲಿವೆ.
2018ರಲ್ಲಿ ಎನ್‌ಡಿಎ ತೊರೆದಿದ್ದ ಟಿಡಿಪಿ, ಆರು ವರ್ಷಗಳ ಬಳಿಕ ಮತ್ತೆ ಎನ್‌ಡಿಎ ತೆಕ್ಕೆಗೆ ಮರಳಿದೆ.
ಬಿಜೆಪಿಯ ಹಿರಿಯ ನಾಯಕ, ಕೇಂದ್ರ ಜಲಶಕ್ತಿ ಖಾತೆ ಸಚಿವ ಗಜೇಂದ್ರ ಸಿಂಗ್ ಶೇಖಾವತ್, ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಮತ್ತು ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್, ಸುದೀರ್ಘ ಚರ್ಚೆಯ ಬಳಿಕ ಲೋಕಸಭಾ, ವಿಧಾನಸಭಾ ಕ್ಷೇತ್ರಗಳ ಸೀಟು ಹಂಚಿಕೆಯನ್ನು ಅಂತಿಮಗೊಳಿಸಲಾಗಿದೆ.
ಆಂಧ್ರ ಪ್ರದೇಶದಲ್ಲಿ ಒಟ್ಟು 25 ಲೋಕಸಭಾ ಕ್ಷೇತ್ರ ಮತ್ತು 175 ವಿಧಾನಸಭಾ ಕ್ಷೇತ್ರಗಳಿದ್ದು, ಏಕಕಾಲಕ್ಕೆ ಚುನಾವಣೆ ನಡೆಯಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.