ADVERTISEMENT

UPA ಸೃಷ್ಟಿಸಿದ ಸವಾಲುಗಳ ಮೆಟ್ಟಿನಿಂತ NDA; ಆರ್ಥಿಕ ಪಥದತ್ತ ಭಾರತ: ಶ್ವೇತ ಪತ್ರ

ಪಿಟಿಐ
Published 8 ಫೆಬ್ರುವರಿ 2024, 12:52 IST
Last Updated 8 ಫೆಬ್ರುವರಿ 2024, 12:52 IST
<div class="paragraphs"><p>ನಿರ್ಮಲಾ ಸೀತಾರಾಮನ್</p></div>

ನಿರ್ಮಲಾ ಸೀತಾರಾಮನ್

   

ಪಿಟಿಐ ಚಿತ್ರ

ನವದೆಹಲಿ: ಕಾಂಗ್ರೆಸ್ ನೇತೃತ್ವದ ಯುಪಿಎ ಆಡಳಿತದ ಅವಧಿಯಲ್ಲಿ ಅರ್ಥ ವ್ಯವಸ್ಥೆಯನ್ನು ನಿರ್ವಹಿಸಿದ ಬಗೆಯ ಕುರಿತು ಕಟು ಟೀಕೆಗಳನ್ನು ಹೊಂದಿರುವ ಶ್ವೇತಪತ್ರವನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಸಂಸತ್ತಿನಲ್ಲಿ ಗುರುವಾರ ಮಂಡಿಸಿದೆ.

ADVERTISEMENT

ರಾಜಸ್ವ ವೆಚ್ಚವನ್ನು (ರೆವಿನ್ಯೂ ಎಕ್ಸ್‌ಪೆಂಡಿಚರ್) ಯಾವ ನಿಯಂತ್ರಣವೂ ಇಲ್ಲದೆ ಮಾಡಿ, ಬಜೆಟ್‌ನಲ್ಲಿ ಅವಕಾಶ ಇಲ್ಲದಿದ್ದರೂ ಸಾಲ ಪಡೆದು ಯುಪಿಎ ಸರ್ಕಾರವು ದೇಶದ ಅರ್ಥವ್ಯವಸ್ಥೆಯನ್ನು ಹಾಳುಗೆಡವಿತ್ತು ಎಂದು ಶ್ವೇತಪತ್ರದಲ್ಲಿ ಆರೋಪಿಸಲಾಗಿದೆ. ಯುಪಿಎ ಅವಧಿಯಲ್ಲಿ ಬ್ಯಾಂಕ್‌ಗಳಲ್ಲಿನ ಸುಸ್ತಿ ಸಾಲವು ಭಾರಿ ಪ್ರಮಾಣದಲ್ಲಿ ಹೆಚ್ಚಾಗಿತ್ತು ಎಂದು ಕೂಡ ಹೇಳಿದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 54 ಪುಟಗಳ ಶ್ವೇತಪತ್ರವನ್ನು ಸಂಸತ್ತಿನಲ್ಲಿ ಮಂಡಿಸಿದರು. ‘ಅತ್ಯಂತ ದುರ್ಬಲ’ವಾದ ಐದು ಅರ್ಥವ್ಯವಸ್ಥೆಗಳ ಪೈಕಿ ಒಂದು ಎಂದು ಪರಿಗಣಿತವಾಗಿದ್ದ ಭಾರತದ ಅರ್ಥ ವ್ಯವಸ್ಥೆಯನ್ನು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಹಾಗೂ ಹೂಡಿಕೆಗೆ ಅತ್ಯಂತ ಆಕರ್ಷಕವಾದ ಅರ್ಥವ್ಯವಸ್ಥೆಯಾಗಿ ಪರಿವರ್ತಿಸಲು ಮೋದಿ ನೇತೃತ್ವದ ಸರ್ಕಾರವು ಕೈಗೊಂಡ ಕ್ರಮಗಳನ್ನು ಇದರಲ್ಲಿ ವಿವರಿಸಲಾಗಿದೆ.

ಯುಪಿಎ ಆಡಳಿತದ 10 ವರ್ಷಗಳಲ್ಲಿ ತೆಗೆದುಕೊಂಡ ಹಲವು ತಪ್ಪು ನಡೆಗಳ ಕಾರಣದಿಂದಾಗಿ 2014ರಲ್ಲಿ ಅರ್ಥ ವ್ಯವಸ್ಥೆಯು ದಿಕ್ಕೆಟ್ಟಂತಿತ್ತು. ಸವಾಲುಗಳನ್ನು ಎದುರಿಸುವ, ಅರ್ಥವ್ಯವಸ್ಥೆಯಲ್ಲಿ ಆಶಾವಾದ ಹಾಗೂ ಚಲನಶೀಲತೆಯನ್ನು ತರುವ ಹೊಣೆಗಾರಿಕೆಯು ಮೋದಿ ನೇತೃತ್ವದ ಸರ್ಕಾರದ ಮೇಲೆ ಬಿತ್ತು ಎಂದು ಶ್ವೇತಪತ್ರವು ವಿವರಿಸಿದೆ.

ಪ್ರಮುಖ ಅಂಶಗಳು

* ಹಿಡಿತ ತಪ್ಪಿದ್ದ ವಿತ್ತೀಯ ಕೊರತೆ, ನಿರ್ಧಾರಗಳನ್ನೇ ಕೈಗೊಳ್ಳದಿದ್ದ ಸ್ಥಿತಿ, ಬ್ಯಾಂಕಿಂಗ್‌ ಬಿಕ್ಕಟ್ಟು, ಭ್ರಷ್ಟಾಚಾರ ಮತ್ತು ಹಗರಣಗಳ ಸಮಸ್ಯೆಯನ್ನು ಮೆಟ್ಟಿ ನಿಲ್ಲಲು ಮೋದಿ ನೇತೃತ್ವದ ಸರ್ಕಾರವು ಕಠಿಣ ತೀರ್ಮಾನಗಳನ್ನು ತೆಗೆದುಕೊಂಡಿತು

* 2008ರ ಜಾಗತಿಕ ಹಣಕಾಸಿನ ಬಿಕ್ಕಟ್ಟಿನ ನಂತರದಲ್ಲಿ ಹೇಗಾದರೂ ಮಾಡಿ ದೊಡ್ಡ ಮಟ್ಟದ ಆರ್ಥಿಕ ಬೆಳವಣಿಗೆ ಸಾಧಿಸಬೇಕು ಎಂಬ ಉದ್ದೇಶದಿಂದ ಯುಪಿಎ ಸರ್ಕಾರವು ಅರ್ಥವ್ಯವಸ್ಥೆಯ ನೆಲೆಗಟ್ಟನ್ನು ಬಹಳ ಹಾಳುಮಾಡಿತು

* ಯುಪಿಎ ಅವಧಿಯಲ್ಲಿ ನಡೆದ 15 ಹಗರಣಗಳನ್ನು ಉಲ್ಲೇಖಿಸಿರುವ ಶ್ವೇತಪತ್ರವು ‘ಇವು ದೇಶದ ಜನರ ವಿಶ್ವಾಸವನ್ನು ಅಲುಗಾಡಿಸಿಬಿಟ್ಟಿದ್ದವು’ ಎಂದು ಹೇಳಿದೆ

* 2014ರಲ್ಲಿ ಯುಪಿಎ ಸರ್ಕಾರವು ಬಿಟ್ಟುಹೋಗಿದ್ದು ಯಾರಿಗೂ ಬೇಡವಾಗಿದ್ದ, ರಾಚನಿಕವಾಗಿ ದುರ್ಬಲಗೊಂಡಿದ್ದ ಅರ್ಥವ್ಯವಸ್ಥೆ ಹಾಗೂ ಎಲ್ಲೆಡೆಯೂ ಕಂಡುಬರುತ್ತಿದ್ದ ನಿರಾಶೆಯನ್ನು

* ದುರ್ಬಲ ನಾಯಕತ್ವ ಮತ್ತು ಕ್ರಿಯಾಹೀನತೆಯ ಕಾರಣದಿಂದಾಗಿ ರಕ್ಷಣೆಯ ವಿಚಾರದಲ್ಲಿ ಸಿದ್ಧತೆಗಳೇ ನಡೆದಿರಲಿಲ್ಲ

* 2013ರಲ್ಲಿ ವಿದೇಶಿ ವಿನಿಮಯ ಮೀಸಲು ಕುಸಿತವನ್ನು ನಿಭಾಯಿಸಲು ಯುಪಿಎ ಸರ್ಕಾರ ಕೈಗೊಂಡ ಕ್ರಮಗಳು ದುಬಾರಿಯಾಗಿದ್ದವು, 1991ರ ಹಣಕಾಸಿನ ಬಿಕ್ಕಟ್ಟು ಮರುಕಳಿಸುವ ಸೂಚನೆಯನ್ನು ನೀಡಿದ್ದವು. (2013ರಲ್ಲಿ ವಿದೇಶಿ ವಿನಿಮಯ ಮೀಸಲು ಮೊತ್ತವು ಆರು ತಿಂಗಳ ಆಮದುಗಳಿಗೆ ಮಾತ್ರ ಸಾಕಾಗುವಷ್ಟಿತ್ತು.)

* ಆರ್ಥಿಕ ಚಟುವಟಿಕೆಗಳಿಗೆ ನೆರವು ನೀಡಲು ಯುಪಿಎ ಸೋತಿತು. ಬದಲಿಗೆ, ಅರ್ಥ ವ್ಯವಸ್ಥೆ ಮುಂದಕ್ಕೆ ಸಾಗುವುದನ್ನು ತಡೆಯುವ ಕ್ರಮಗಳನ್ನು ಯುಪಿಎ ಕೈಗೊಂಡಿತು

* ಹಿಂದಿನ ಸರ್ಕಾರ ಬಿಟ್ಟುಹೋಗಿದ್ದ ಸವಾಲುಗಳನ್ನು ನಾವು (ಎನ್‌ಡಿಎ ಸರ್ಕಾರ) ಯಶಸ್ವಿಯಾಗಿ ನಿರ್ವಹಿಸಿದ್ದೇವೆ

* ನಿಂತ ನೀರಾಗಿದ್ದ ಹಣಕಾಸಿನ ವಲಯಕ್ಕೆ ಹೊಸ ಚೈತನ್ಯವನ್ನು ತುಂಬಲಾಗಿದೆ, ಗಮನಾರ್ಹ ಪ್ರಮಾಣದಲ್ಲಿ ಸುಧಾರಣೆಗಳನ್ನು ತರಲಾಗಿದೆ. ಮೋದಿ ನೇತೃತ್ವದ ಸರ್ಕಾರ ಕೈಗೊಂಡ ಸುಧಾರಣೆಗಳ ಪರಿಣಾಮವಾಗಿ ದೇಶದ ಮಧ್ಯಮಾವಧಿಯ ಹೂಡಿಕೆ ನಿರೀಕ್ಷೆಗಳು ಹೆಚ್ಚಾಗಿವೆ

* ನಮ್ಮ (ಎನ್‌ಡಿಎ) ಸರ್ಕಾರದ ಹತ್ತು ವರ್ಷಗಳ ಆಡಳಿತಾವಧಿಯ ಪ್ರಗತಿಯ ಕಾರಣದಿಂದಾಗಿ ಯುಪಿಎ ಅವಧಿಯ ಕಾಯಿಲೆಗಳನ್ನು ಶಮನಗೊಳಿಸಲಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.