ನವದೆಹಲಿ: ಎನ್‌ಡಿಎ ಮೈತ್ರಿಕೂಟದ 38 ಪಕ್ಷಗಳ ನಾಯಕರು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ನೇತೃತ್ವದಲ್ಲಿ ರಾಜಧಾನಿಯಲ್ಲಿ ಮಂಗಳವಾರ ‘ಶಕ್ತಿ ಪ್ರದರ್ಶನ’ದ ಸಭೆ ನಡೆಸಿ ವಿಪಕ್ಷಗಳ ‘ಮಹಾ ಮೈತ್ರಿಕೂಟ’ಕ್ಕೆ ಸೆಡ್ಡು ಹೊಡೆದರು.
ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂದೆ, ಉಪಮುಖ್ಯಮಂತ್ರಿ ಅಜಿತ್ ಪವಾರ್, ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಇ.ಪಳನಿಸ್ವಾಮಿ, ಬಿಹಾರದ ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ, ಮೈತ್ರಿಕೂಟದ ಮುಖಂಡರಾದ ಚಿರಾಗ್ ಪಾಸ್ವಾನ್, ಉಪೇಂದ್ರ ಸಿಂಗ್ ಕುಶ್ವಾಹ್, ಓಂ ಪ್ರಕಾಶ್ ರಾಜ್‌ಭರ್ ಮತ್ತಿತರರು ಸಭೆಯಲ್ಲಿ ಭಾಗಿಯಾದರು. 2024ರಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂಬುದು ಇಡೀ ಜಗತ್ತಿಗೆ ಗೊತ್ತಿದೆ ಎಂದು ಮೋದಿ ಹೇಳಿದರು. ‘ನಮ್ಮ ಮೈತ್ರಿಕೂಟದಲ್ಲಿ ಯಾವುದೇ ಪಕ್ಷ ದೊಡ್ಡದೂ ಅಲ್ಲ, ಯಾವುದೇ ಪಕ್ಷ ಚಿಕ್ಕದೂ ಅಲ್ಲ. 2014 ಹಾಗೂ 2019ರ ಚುನಾವಣೆಗಳಲ್ಲಿ ಬಿಜೆಪಿ ಬಹುಮತ ಗಳಿಸಿತ್ತು. ಆದರೆ, ಎನ್‌ಡಿಎ ಸರ್ಕಾರ ರಚಿಸಿತ್ತು’ ಎಂದು ಹೇಳುವ ಮೂಲಕ ಪ್ರಧಾನಿ ಅವರು ಹೊಸ ಹಾಗೂ ಹಳೆಯ ಮಿತ್ರರಿಗೆ ವಿಶ್ವಾಸ ತುಂಬಿದರು. ‘ಎನ್‌ಡಿಎ 2014ರಲ್ಲಿ ಶೇ 38, 2019ರಲ್ಲಿ ಶೇ 45ಕ್ಕಿಂತ ಹೆಚ್ಚು ಮತಗಳನ್ನು ಪಡೆದಿತ್ತು. 2024ರ ಚುನಾವಣೆಯಲ್ಲಿ ಶೇ 50ಕ್ಕಿಂತ ಅಧಿಕ ಮತಗಳನ್ನು ಪಡೆಯಲಿದೆ’ ಎಂದು ಅಮಿತ ವಿಶ್ವಾಸ ವ್ಯಕ್ತಪಡಿಸಿದರು.
ಸಭೆಗೆ ಮುನ್ನ ಟ್ವೀಟ್ ಮಾಡಿದ ಪ್ರಧಾನಿ ಅವರು, ‘ಎನ್‌ಡಿಎ ಮಿತ್ರ ಪಕ್ಷಗಳು ಒಂದೆಡೆ ಸೇರುತ್ತಿರುವುದು ಅತ್ಯಂತ ಸಂತಸದ ಸಂಗತಿ. ನಮ್ಮ ಪರೀಕ್ಷಿತ ಪರಿಣಾಮಕಾರಿ ಮೈತ್ರಿಯು ರಾಷ್ಟ್ರೀಯ ಪ್ರಗತಿ ಹಾಗೂ ಪ್ರಾದೇಶಿಕ ನಿರೀಕ್ಷೆಗಳನ್ನು ಸಾಕಾರಗೊಳಿಸುವುದನ್ನು ಎದುರು ನೋಡುತ್ತಿದೆ’ ಎಂದು ಹೇಳಿದರು.
ಸಭೆಯಲ್ಲಿ ಮಾತನಾಡಿದ ಮೋದಿ ಅವರು ವಿಪಕ್ಷಗಳ ಮೈತ್ರಿಕೂಟದ ವಿರುದ್ಧ ವಾಗ್ದಾಳಿ ನಡೆಸಿದರು. ‘ಭಾರತವು ಮೈತ್ರಿಕೂಟಗಳ ಸುದೀರ್ಘ ಪರಂಪರೆ ಹೊಂದಿದೆ. ಆದರೆ, ನಕಾರಾತ್ಮಕ ಚಿಂತನೆಯಿಂದ ರೂಪುಗೊಂಡ ಮೈತ್ರಿಕೂಟ ಎಂದಿಗೂ ಯಶಸ್ವಿಯಾಗುವುದಿಲ್ಲ’ ಎಂದು ಹೇಳಿದರು.
‘ಎನ್‌ಡಿಎ’ಗೆ ಹೊಸ ವ್ಯಾಖ್ಯಾನ ಕೊಟ್ಟ ಅವರು, ‘ಎನ್’ ಎಂದರೆ ನವ ಭಾರತ, ‘ಡಿ’ ಎಂದರೆ ಅಭಿವೃದ್ಧಿ ಹೊಂದಿದ ದೇಶ, ‘ಎ’ ಎಂದರೆ ಜನರು ಹಾಗೂ ಪ್ರದೇಶಗಳ ಆಕಾಂಕ್ಷೆಗಳು ಎಂದು ವರ್ಣಿಸಿದರು. ‘ಎನ್‌ಡಿಎ ದೇಶದ ಜನರನ್ನು ಒಗ್ಗೂಡಿಸುತ್ತದೆ. ವಿರೋಧ ಪಕ್ಷಗಳು ಜನರನ್ನು ವಿಭಜಿಸುತ್ತಿವೆ’ ಎಂದು ಟೀಕಾಪ್ರಹಾರ ನಡೆಸಿದರು.
ಎನ್‌ಡಿಎ ಸಿದ್ಧಾಂತವು ರಾಷ್ಟ್ರದ ಭದ್ರತೆ, ಪ್ರಗತಿ ಜನರ ಸಬಲೀಕರಣವನ್ನು ಎಲ್ಲಕ್ಕಿಂತ ಮುಂದೆ ಇಡುತ್ತದೆ ಎಂದ ಅವರು, ‘ನಮ್ಮ ಮೈತ್ರಿಕೂಟವು ಪ್ರಾದೇಶಿಕ ಆಕಾಂಕ್ಷೆಗಳ ಕಾಮನಬಿಲ್ಲು’ ಎಂದೂ ವ್ಯಾಖ್ಯಾನಿಸಿದರು.
ರಾಜಕೀಯವು ಪೈಪೋಟಿ ಹೊಂದಿರಬಹುದು. ಆದರೆ, ಹಗೆತನವಲ್ಲ. ವಿರೋಧ ಪಕ್ಷಗಳು ನಮ್ಮನ್ನು ನಿಂದಿಸುತ್ತವೆ ಹಾಗೂ ಓಡಿಸಲು ಪ್ರಯತ್ನಿಸುತ್ತಿವೆ ಎಂದರು. ಬಹುಕಾಲದಿಂದ ಬಿಜೆಪಿ ವಿರೋಧಿ ಪಾಳಯದಲ್ಲಿದ್ದ ಪ್ರಣವ್ ಮುಖರ್ಜಿ ಅವರಿಗೆ ಭಾರತ ರತ್ನ, ಮುಲಾಯಂ ಸಿಂಗ್ ಯಾದವ್ ಹಾಗೂ ಶರದ್ ಯಾದವ್ ಅವರಿಗೆ ಪದ್ಮ ಪ್ರಶಸ್ತಿಗಳನ್ನು ನಮ್ಮ ಸರ್ಕಾರವು ನೀಡಿದೆ ಎಂದು ಅವರು ನೆನಪಿಸಿದರು.
2014ಕ್ಕಿಂತ ಮೊದಲು ಅಧಿಕಾರದ ಕಾರಿಡಾರ್‌ಗಳಲ್ಲಿ ತಿರುಗಾಡುತ್ತಿದ್ದ ಮಧ್ಯವರ್ತಿಗಳನ್ನು ನಾವು ಹೊರಗೆ ಹಾಕಿದ್ದೇವೆ. ಭ್ರಷ್ಟಾಚಾರರಹಿತ ಹಾಗೂ ಕಳಂಕರಹಿತ ಆಡಳಿತ ನೀಡಿದ್ದೇವೆ. ಇದನ್ನು ನೋಡಿ ವಿರೋಧ ಪಕ್ಷಗಳಿಗೆ ಸಹಿಸಲು ಆಗುತ್ತಿಲ್ಲ ಎಂದರು. ನಾವು ಭವ್ಯ ಭಾರತ ನಿರ್ಮಾಣಕ್ಕಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಅವರು ಹೇಳಿದರು.
ಜನರ ತಿಳಿವಳಿಕೆಯ ಸಾಮರ್ಥ್ಯವನ್ನು ವಿರೋಧ ಪಕ್ಷಗಳು ನಿರ್ಲಕ್ಷ್ಯ ಮಾಡುತ್ತಿವೆ. ಆದರೆ, ಯಾವ ಸ್ವಾರ್ಥದ ಲಾಭ ಅವರ ಕಣ್ಣನ್ನು ಕುರುಡಾಗಿಸುತ್ತದೆ ಎಂಬುದು ಜನರಿಗೆ ಗೊತ್ತಿದೆ ಎಂದು ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.