ADVERTISEMENT

Parliament | ಓಂ ಬಿರ್ಲಾ ಲೋಕಸಭಾ ಸ್ಪೀಕರ್‌, ಮೊದಲ ದಿನವೇ ಸದನದಲ್ಲಿ ಗದ್ದಲ

ವಿರೋಧ ಪಕ್ಷದ ನಾಯಕನಾಗಿ ರಾಹುಲ್‌ಗೆ ಮಾನ್ಯತೆ: ಮೊದಲ ದಿನವೇ ಸದನದಲ್ಲಿ ಗದ್ದಲ

ಪಿಟಿಐ
Published 26 ಜೂನ್ 2024, 23:48 IST
Last Updated 26 ಜೂನ್ 2024, 23:48 IST
ಎರಡನೇ ಬಾರಿಗೆ ಲೋಕಸಭಾ ಸ್ಪೀಕರ್‌ ಆಗಿ ಆಯ್ಕೆಯಾದ ಓಂ ಬಿರ್ಲಾ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಅಭಿನಂದಿಸಿದರು. ಸಂಸದೀಯ ವ್ಯವಹಾರಗಳ ಸಚಿವ ಕಿರಣ್‌ ರಿಜಿಜು, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಜೊತೆಗಿದ್ದರು –ಪಿಟಿಐ ಚಿತ್ರ
ಎರಡನೇ ಬಾರಿಗೆ ಲೋಕಸಭಾ ಸ್ಪೀಕರ್‌ ಆಗಿ ಆಯ್ಕೆಯಾದ ಓಂ ಬಿರ್ಲಾ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಅಭಿನಂದಿಸಿದರು. ಸಂಸದೀಯ ವ್ಯವಹಾರಗಳ ಸಚಿವ ಕಿರಣ್‌ ರಿಜಿಜು, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಜೊತೆಗಿದ್ದರು –ಪಿಟಿಐ ಚಿತ್ರ   

ನವದೆಹಲಿ: ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿ ಓಂ ಬಿರ್ಲಾ ಅವರು 18ನೇ ಲೋಕಸಭೆಯ ಸ್ಪೀಕರ್‌ ಆಗಿ ಬುಧವಾರ ಆಯ್ಕೆಯಾದರು. 

ಪ್ರಧಾನಿ ನರೇಂದ್ರ ಮೋದಿ ಅವರು ಮಂಡಿಸಿದ ನಿಲುವಳಿ ಸೂಚನೆಯನ್ನು ಧ್ವನಿ ಮತಕ್ಕೆ ಹಾಕಲಾಯಿತು. ಕಾಂಗ್ರೆಸ್‌ನ ಹಿರಿಯ ಸಂಸದ ಕೋಡಿಕುನ್ನಿಲ್‌ ಸುರೇಶ್‌ ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದ ವಿರೋಧ ಪಕ್ಷಗಳು ನಿಲುವಳಿ ಸೂಚನೆಯನ್ನು ಬೆಂಬಲಿಸಲಿಲ್ಲ.

ಹಂಗಾಮಿ ಸ್ಪೀಕರ್‌ ಭರ್ತೃಹರಿ ಮಹತಾಬ್‌ ಅವರು ಓಂ ಬಿರ್ಲಾ ಆಯ್ಕೆಯನ್ನು ಘೋಷಿಸಿದರು. 

ADVERTISEMENT

ರಾಜಸ್ಥಾನದ ಕೋಟಾ ಲೋಕಸಭಾ ಕ್ಷೇತ್ರದ ಸದಸ್ಯರಾಗಿರುವ ಬಿರ್ಲಾ, ಸತತ ಎರಡನೇ ಬಾರಿಗೆ ಸ್ಪೀಕರ್‌ ಆಗಿ ಆಯ್ಕೆಯಾಗಿದ್ದಾರೆ. ಸ್ದೀಕರ್‌ ಒಬ್ಬರು ಒಂದು ಲೋಕಸಭಾ ಅವಧಿಗಿಂತಲೂ ಹೆಚ್ಚು ಕಾಲ ಆ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವುದು ಇದು ಐದನೇ ಬಾರಿ. 

ಸಾಮಾನ್ಯವಾಗಿ ಒಮ್ಮತದಿಂದ ನಡೆಯುತ್ತಿದ್ದ ಸ್ಪೀಕರ್‌ ಆಯ್ಕೆ ಪ್ರಕ್ರಿಯೆಯು, ಚುನಾವಣೆ ಅನಿವಾರ್ಯವಾದ ಸಂದರ್ಭಕ್ಕೂ 18ನೇ ಲೋಕಸಭೆ ಸಾಕ್ಷಿಯಾಯಿತು. 

ಅಧಿಕಾರ ಸ್ವೀಕಾರ: ಇದಕ್ಕೂ ಮೊದಲು, ಓಂ ಬಿರ್ಲಾ ಆಯ್ಕೆಯನ್ನು ಹಂಗಾಮಿ ಸ್ಪೀಕರ್‌ ಎಂದು ಘೋಷಿಸುತ್ತಿದ್ದಂತೆಯೇ, ಆಡಳಿತ ಪಕ್ಷಗಳ ಸದಸ್ಯರ ಸಾಲಿನಲ್ಲಿ ಕುಳಿತಿದ್ದ ಬಿರ್ಲಾ ಬಳಿಗೆ ತೆರಳಿದ ಪ್ರಧಾನಿ ಮೋದಿ, ಸಂಸದೀಯ ವ್ಯವಹಾರಗಳ ಸಚಿವ ಕಿರಣ್‌ ರಿಜಿಜು ಅವರು, ಹೊಸ ಸ್ಪೀಕರ್‌ ಅವರನ್ನು ಸಭಾಧ್ಯಕ್ಷರ ಕುರ್ಚಿ ಬಳಿಗೆ ಕರೆದೊಯ್ದರು. ಕಾಂಗ್ರೆಸ್‌ ಮುಖಂಡ ಮತ್ತು ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರೂ ಜೊತೆಯಾದರು. ಈ ಸಂದರ್ಭದಲ್ಲಿ ರಾಹುಲ್‌, ಮೋದಿ ಅವರ ಕೈಕುಲುಕಿದರು. 

ಅಧಿಕಾರ ಸ್ವೀಕರಿಸಿ ಮಾತನಾಡಿದ ಬಿರ್ಲಾ, ‘ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳು ಒಟ್ಟಾಗಿ ಸದನವನ್ನು ನಡೆಸುತ್ತವೆ. ಪ್ರತಿಯೊಬ್ಬರ ಮಾತು ಕೇಳುವುದು ಮತ್ತು ಎಲ್ಲರ ಒಪ್ಪಿಗೆಯೊಂದಿಗೆ ಸದನ ನಡೆಸುವುದು ಭಾರತದ ಪ್ರಜಾಪ್ರಭುತ್ವದ ಶಕ್ತಿ. ಎಲ್ಲರ ಸಮ್ಮತಿಯೊಂದಿಗೆ ಸದನ ನಡೆಸುವುದನ್ನು ನಾನು ನಿರೀಕ್ಷಿಸುತ್ತೇನೆ. ಯಾವುದೇ ಪಕ್ಷದಿಂದ ಒಬ್ಬ ಸದಸ್ಯ ಇದ್ದರೂ, ಅವರಿಗೂ ಸಮಯ ಸಿಗಬೇಕು’ ಎಂದು ಹೇಳಿದರು. 

ಮೋದಿ ಶ್ಲಾಘನೆ: ಬಿರ್ಲಾ ಅವರನ್ನು ಅಭಿನಂದಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ‘ಸಂಸದೀಯಪಟುವಾಗಿ ಬಿರ್ಲಾ ಅವರ ಕೆಲಸಗಳು ಲೋಕಸಭೆಯ ಹೊಸ ಸದಸ್ಯರಿಗೆ ಸ್ಫೂರ್ತಿಯಾಗಬೇಕು. ಲೋಕಸಭೆಯ ಇತಿಹಾಸದಲ್ಲೇ ಓಂ ಬಿರ್ಲಾ ಅವರು ಸುವರ್ಣಯುಗದಲ್ಲಿ ಸಭಾಧ್ಯಕ್ಷರಾಗಿದ್ದರು. ಹಿಂದಿನ ಅವಧಿಯಲ್ಲಿ ಲೋಕಸಭೆಯು ಹಲವು ಐತಿಹಾಸಿಕ ನಿರ್ಧಾರಗಳನ್ನು ಕೈಗೊಂಡಿತ್ತು’ ಎಂದು ಹೇಳಿದರು. 

ಲೋಕಸಭಾ ಸ್ಪೀಕರ್‌ ಆಗಿ ಆಯ್ಕೆಯಾದ ಓಂ ಬಿರ್ಲಾ ಅವರನ್ನು ಸಭಾಧ್ಯಕ್ಷರ ಆಸನಕ್ಕೆ ಕರೆದುಕೊಂಡು ಹೋಗುವುದಕ್ಕೂ ಮುನ್ನ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಪರಸ್ಪರ ಹಸ್ತಲಾಘವ ಮಾಡಿದರು –ಪಿಟಿಐ ಚಿತ್ರ 

ಹಿಂದಿನ ಅವಧಿಯಲ್ಲಿ ವಿರೋಧ ಪಕ್ಷದ ಸಂಸದರನ್ನು ಅಮಾನತು ಮಾಡಿದ ರೀತಿಯಲ್ಲಿ ಸದನದ ಘನತೆಗೆ ಚ್ಯುತಿ ತರುವ ಕ್ರಮಗಳನ್ನು ಕೈಗೊಳ್ಳಬೇಡಿ

-ಅಖಿಲೇಶ್‌ ಯಾದವ್‌ ಎಸ್‌ಪಿ ಮುಖ್ಯಸ್ಥ

ಲೋಕಸಭೆಯ ಸ್ಪೀಕರ್‌ ಆದವರು ವಿರೋಧ ಪಕ್ಷ ಮತ್ತು ಆಡಳಿತ ಪಕ್ಷಗಳನ್ನು ಸಮಾನವಾಗಿ ಕಾಣವೇಕು. ನಿಷ್ಪಕ್ಷಪಾತದಿಂದ ನಡೆದುಕೊಳ್ಳಬೇಕು

-ಟಿ.ಆರ್‌.ಬಾಲು ಡಿಎಂಕೆ ಮುಖಂಡ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸದನವು ವಿರೋಧ ಪಕ್ಷಗಳಿಗೆ ಸೇರಿದ್ದು. ವಿಪಕ್ಷಗಳ ಸಂಸದರ ಅಮಾನತು ಪ್ರಕರಣ ಮರುಕಳಿಸಬಾರದು

-ಸುದೀಪ್‌ ಬಂದೋಪಾಧ್ಯಾಯ ಟಿಎಂಸಿ ನಾಯಕ

ವಿರೋಧ ಪಕ್ಷಗಳಿಗೂ ಅವಕಾಶದ ನಂಬಿಕೆ: ರಾಹುಲ್‌

ವಿರೋಧ ಪಕ್ಷಗಳ ಸಂಸದರಿಗೆ ಸದನದಲ್ಲಿ ‘ಜನರ ಧ್ವನಿ’ಯನ್ನು ಪ್ರತಿಧ್ವನಿಸುವ ಅವಕಾಶ ದೊರೆಯಲಿದೆ ಮತ್ತು ಇನ್ನು ಮುಂದೆ ಸಂಸದರ ಅಮಾನತು ನಡೆಯದು ಎಂಬ ವಿಶ್ವಾಸವನ್ನು ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಮತ್ತು ವಿರೋಧ ಪಕ್ಷಗಳ ಇತರ ಸಂಸದರು ವ್ಯಕ್ತಪಡಿಸಿದರು.  ಓಂ ಬಿರ್ಲಾ ಅವರನ್ನು ಅಭಿನಂದಿಸಿ ಮಾತನಾಡಿದ ರಾಹುಲ್‌ ಗಾಂಧಿ ‘ಸದನವು ಆಗಾಗ ಮತ್ತು ಅತ್ಯಂತ ಉತ್ತಮವಾಗಿ ಕಾರ್ಯನಿರ್ವಹಿಸುವುದನ್ನು ವಿರೋಧ ಪಕ್ಷ ಬಯಸುತ್ತದೆ. ಪರಸ್ಪರ ಸಹಕಾರ ನೀಡುವುದಕ್ಕೆ ನಂಬಿಕೆ ಮುಖ್ಯ. ನಿಮ್ಮ ಕೆಲಸಕ್ಕೆ ವಿರೋಧ ಪಕ್ಷಗಳು ಸಹಾಯ ಮಾಡಲಿವೆ. ಸದನದಲ್ಲಿ ನಮಗೂ ಮಾತನಾಡುವುದಕ್ಕೆ ನೀವು ಅವಕಾಶ ನೀಡುತ್ತೀರಿ ಎಂಬ ನಂಬಿಕೆ ನನಗಿದೆ’ ಎಂದು ಹೇಳಿದರು.  ಕಳೆದ ಲೋಕಸಭೆಯು ಅತ್ಯಂತ ದಕ್ಷವಾಗಿ ಕಾರ್ಯನಿರ್ವಹಿಸಿದೆ ಎಂಬ ಸರ್ಕಾರದ ವಾದವನ್ನು ರಾಹುಲ್‌ ಪ್ರಶ್ನಿಸಿದರು. ಸದನವು ಎಷ್ಟು ದಕ್ಷವಾಗಿ ಕಾರ್ಯನಿರ್ವಹಿಸಿದೆ ಎಂಬುದು ಮುಖ್ಯವಲ್ಲ. ಭಾರತದ ಧ್ವನಿಗೆ ಅಲ್ಲಿ ಎಷ್ಟು ಮನ್ನಣೆ ಸಿಕ್ಕಿದೆ ಎಂಬುದು ಮುಖ್ಯ ಎಂದು ಅವರು ಪ್ರತಿಪಾದಿಸಿದರು.  ‘ಈ ಸದನವು ದೇಶದ ಜನರ ಧ್ವನಿಯನ್ನು ಪ್ರತಿನಿಧಿಸುತ್ತದೆ. ಸರ್ಕಾರಕ್ಕೆ ರಾಜಕೀಯ ಅಧಿಕಾರ ಇದೆ. ಆದರೆ ವಿರೋಧ ಪಕ್ಷಗಳು ಕೂಡ ಈ ದೇಶದ ಜನರ ಧ್ವನಿಯಾಗಿವೆ. ಕಳೆದ ಅವಧಿಗೆ ಹೋಲಿಸಿದರೆ ಈ ಬಾರಿ ವಿರೋಧ ಪಕ್ಷಗಳು ಭಾರತದ ಹೆಚ್ಚು ಜನರ ಧ್ವನಿಗಳನ್ನು ಪ್ರತಿನಿಧಿಸುತ್ತವೆ’ ಎಂದು ಅವರು ಹೇಳಿದರು.

ತುರ್ತು ಪರಿಸ್ಥಿತಿ ವಿರುದ್ಧ ನಿರ್ಣಯ: ಕಾಂಗ್ರೆಸ್‌ ಆಕ್ರೋಶ

ಸ್ಪೀಕರ್ ಓಂ ಬಿರ್ಲಾ ಅವರು ತುರ್ತು ಪರಿಸ್ಥಿತಿಯ ವಿರುದ್ಧದ ನಿರ್ಣಯವನ್ನು ಓದಿದ್ದು ಕಾಂಗ್ರೆಸ್‌ ಸದಸ್ಯರನ್ನು ಕೆರಳಿಸಿತು.  ತಮ್ಮ ಆಸನಗಳಿಂದ ಎದ್ದುಸದನದ ಬಾವಿಗಿಳಿದ ಕಾಂಗ್ರೆಸ್‌ ಸದಸ್ಯರು ಪ್ರತಿಭಟನೆ ನಡೆಸಿ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.